ಸರ್ಕಾರದ ತಾರತಮ್ಯದಿಂದ ಶೇ.90ರಷ್ಟು  ವಿಶೇಷಚೇತನ ಮಕ್ಕಳು ಸೌಲಭ್ಯದಿಂದ ವಂಚಿತ
ಮೈಸೂರು

ಸರ್ಕಾರದ ತಾರತಮ್ಯದಿಂದ ಶೇ.90ರಷ್ಟು ವಿಶೇಷಚೇತನ ಮಕ್ಕಳು ಸೌಲಭ್ಯದಿಂದ ವಂಚಿತ

January 11, 2019

ಮೈಸೂರು: ಶೇ.90ರಷ್ಟು ಅಂಗವಿಕಲ ಮಕ್ಕಳಿಗೆ ಸೌಲಭ್ಯಗಳೇ ತಲುಪುತ್ತಿಲ್ಲ. ಆದರೆ ಸರ್ಕಾರಿ ಶಾಲಾ-ಕಾಲೇಜು ಗಳಲ್ಲಿ ನಿರ್ದಿಷ್ಟ ಸೌಲಭ್ಯ ಇಲ್ಲವಾದರೆ ಅವರು ಹೋರಾಟದ ಮೂಲಕ ಪಡೆದುಕೊಳ್ಳುತ್ತಾರೆ. ಆದರೆ, ಅಂಗವಿಕಲರಿಗೆ ಸರ್ಕಾರವೇ ತಾರತಮ್ಯ ಮಾಡಿದರೆ ಮಕ್ಕಳ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ರಾಜ್ಯ ಅಂಗವಿಕಲರ ಅಧಿನಿಯಮ ಆಯೋ ಗದ ಆಯುಕ್ತ ವಿ.ಎಸ್.ಬಸವರಾಜು ಪ್ರಶ್ನಿಸಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉದ್ಯೋಗ ಮತ್ತು ಔದ್ಯೋ ಗಿಕ ತರಬೇತಿ: ಸಂವಹನ ಕೊರತೆ ಎದುರಿಸುತ್ತಿರುವವರಿಗೆ ಪುನರ್ವಸತಿ’ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶೇಷ ಚೇತನ ಮಕ್ಕಳಿಗೆ ಪಠ್ಯ ಕ್ರಮ ಬೋಧಿಸಿದರಷ್ಟೇ ಸಾಲದು. ಬಾಲ್ಯದಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕೌಶಲ್ಯ ತರಬೇತಿ ನೀಡಬೇಕು. ಸರ್ಕಾರಿ ಶಾಲೆ, ಕಾಲೇಜುಗಳಂತೆ ಅಂಗವಿಕಲ ಮಕ್ಕಳಿಗೂ ಸಮಾನ ಸೌಲಭ್ಯ ದೊರೆಯಬೇಕು ಎಂದು ಹೇಳಿದರು.

ಇಂದು ವಿಶೇಷಚೇತನ ಮಕ್ಕಳು ಶಿಕ್ಷಣದಿಂದ ವಂಚಿತರಾಗು ತ್ತಿದ್ದು, ಸರ್ವ ಶಿಕ್ಷಣ ಅಭಿಯಾನದಡಿ 14 ವರ್ಷದೊಳಗಿನ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿರುವ ಅಭಿಯಾನ ವಿಶೇಷ ಚೇತನ ಮಕ್ಕಳ ಬಗ್ಗೆಯೂ ಸರಿಯಾಗಿ ಕೆಲಸ ನಿರ್ವಹಿಸಿದ್ದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ತೆಗೆದುಕೊಳ್ಳುವ ವಿಶೇಷ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳಿಗೆ ಪಠ್ಯ ಪುಸ್ತಕ ಸರಬರಾಜಾಗದಿದ್ದರೆ ದೂರು ನೀಡುವ ಪೋಷಕರು, ವಿಶೇಷ ಚೇತನ ಮಕ್ಕಳಿಗೆ ಸಿಗಬೇಕಾದ ಸಾಧನ, ಸಲಕರಣೆಗಳು ಸಿಗದಿದ್ದರೆ ಯಾರೂ ಧ್ವನಿ ಎತ್ತುವುದಿಲ್ಲ ಎಂದು ಬೇಸರದಿಂದ ನುಡಿದರು. ವಿಶೇಷ ಚೇತನ ಮಕ್ಕಳಿಗೆ ಆರಂಭ ದಲ್ಲೇ ಗುರುತಿಸಿ, ಅವರಿಗೆ ಅಗತ್ಯ ಸಾಧನ, ಸಲಕರಣೆಗಳನ್ನು ಒದಗಿಸಬೇಕು. ಇದು ಆಯಾ ಸ್ಥಳೀಯ ಸಂಸ್ಥೆಯ ಅಧಿಕಾರಿ ಗಳು, ಪಿಡಿಓ, ಬಿಇಓಗಳ ಜವಾಬ್ದಾರಿ. ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಜಿಲ್ಲಾಧಿಕಾರಿಗೆ ದೂರು ನೀಡಿಯೂ ಕ್ರಮ ಕೈಗೊಳ್ಳದಿದ್ದಲ್ಲಿ ವಿಶೇಷಚೇತನರ ಅಧಿನಿಯಮ ಆಯೋಗಕ್ಕೆ ದೂರು ನೀಡಿದರೆ, ಅದನ್ನು ಶಾಸನ ಬದ್ಧವಾಗಿ ಅವರು ಕೆಲಸ ನಿರ್ವಹಿಸುವಂತೆ ಆಯೋಗ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.

ವಿಶೇಷಚೇತನರ ಅಭಿವೃದ್ಧಿಗಾಗಿ ಪ್ರತಿ ಇಲಾಖೆಯಲ್ಲೂ ಮೀಸ ಲಿಟ್ಟಿರುವ ಕೋಟಿ ರೂ. ಅನುದಾನ ಮಾಹಿತಿ ಕೊರತೆಯಿಂದಾಗಿ ಸರಿಯಾಗಿ ಬಳಕೆಯಾಗುತ್ತಿಲ್ಲದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಗ್ರಾಮೀಣ ಮತ್ತು ನಗರ ಪ್ರದೇಶದ ವಿಶೇಷಚೇತನರು ಅನುದಾನವನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಕೈಗೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪೆÇ್ರ.ಎಂ.ಪುಷ್ಪಾವತಿ, ವಿಶೇಷ ಶಿಕ್ಷಣ ಮುಖ್ಯಸ್ಥೆ ಪ್ರೊ.ಪಿ.ಮಂಜುಳಾ, ವಿಶೇಷ ಶಿಕ್ಷಣದ ರೀಡರ್ ಡಾ.ಪ್ರೀತಿ ವೆಂಕಟೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »