ವಾಹನ ಸಂಚಾರಕ್ಕೆ ಸಂಚಕಾರವಾಗಿರುವ ಬಿಡಾಡಿ ಜಾನುವಾರು ವಶ
ಮೈಸೂರು

ವಾಹನ ಸಂಚಾರಕ್ಕೆ ಸಂಚಕಾರವಾಗಿರುವ ಬಿಡಾಡಿ ಜಾನುವಾರು ವಶ

June 12, 2020

ಮೈಸೂರು, ಜೂ.11(ಆರ್‍ಕೆ)-ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿ, ಅಪಘಾತಕ್ಕೆ ಕಾರಣವಾಗುತ್ತಿದ್ದ ಬಿಡಾಡಿ ದನಗಳನ್ನು ಎನ್.ಆರ್.ಸಂಚಾರ ಠಾಣೆ ಪೊಲೀಸರ ನೆರವಿನಿಂದ ಪಾಲಿಕೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ಮೈಸೂರಿನ ಬನ್ನಿಮಂಟ ಪದ ಸೆಂಟ್ ಜೋಸೆಫ್ ಶಾಲೆ ಎದುರು ಹಾಗೂ ಬೆಂಗ ಳೂರು-ಮೈಸೂರು ರಸ್ತೆಯ ಸುಭಾಷ್‍ನಗರ ಬಳಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡಿ ದ್ವಿಚಕ್ರ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದುದಲ್ಲದೆ ಸ್ಕೂಟರ್ ನಿಂದ ಬಿದ್ದು ಇಬ್ಬರು ಗಾಯಗೊಳ್ಳಲು ಕಾರಣವಾಗಿದ್ದರಿಂದ ಇಂದು ಸ್ಥಳಕ್ಕೆ ತೆರಳಿದ ಎನ್.ಆರ್.ಸಂಚಾರ ಠಾಣೆ ಇನ್ಸ್‍ಪೆಕ್ಟರ್ ದಿವಾಕರಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಎನ್.ಆರ್.ಮೊಹಲ್ಲಾ ಹಾಗೂ ಕೆಸರೆ ರಾಜೇಂದ್ರನಗರದ ಕೆಲವರು ರಸ್ತೆಗೆ ಜಾನುವಾರುಗಳನ್ನು ಬಿಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಾಲಿಕೆ ಅಭಯ ತಂಡದ ವಾಹನ ಕರೆಸಿಕೊಂಡು ಬೀದಿಯಲ್ಲಿ ಅಡ್ಡಾಡುತ್ತಿದ್ದ ಜಾನುವಾರುಗಳನ್ನು ಅವರ ವಶಕ್ಕೆ ಒಪ್ಪಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಎಫ್‍ಟಿಎಸ್ ಸರ್ಕಲ್ ಬಳಿ ಇರುವ ಪಾಲಿಕೆ ವಲಯ ಕಚೇರಿಯಲ್ಲಿ ಮಾಲೀಕರಿಂದ ದಂಡ ಕಟ್ಟಿಸಿಕೊಂಡು ಜಾನುವಾರುಗಳನ್ನು ಬಿಟ್ಟು ಕಳುಹಿಸಲಾಯಿತು. ಜಾನುವಾರುಗಳನ್ನು ರಸ್ತೆಗೆ ಬಿಟ್ಟು ಸಂಚಾರಕ್ಕೆ ಅಡ್ಡಿಯುಂಟಾದರೆ ಪ್ರಕರಣ ದಾಖಲಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Translate »