ವೀಕೆಂಡ್ ಕಫ್ರ್ಯೂ ನಡುವೆಯೇ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆ ಆರಂಭ
News

ವೀಕೆಂಡ್ ಕಫ್ರ್ಯೂ ನಡುವೆಯೇ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆ ಆರಂಭ

January 10, 2022

ಕನಕಪುರ, ಜ.9-ವೀಕೆಂಡ್ ಕಫ್ರ್ಯೂ ನಡುವೆಯೇ ಮೇಕೆ ದಾಟುವಿನ ಸಂಗಮದಿಂದ ಕಾಂಗ್ರೆಸ್‍ನ ಮಹತ್ವದ `ನೀರಿಗಾಗಿ ನಡಿಗೆ’, `ನಮ್ಮ ನೀರು-ನಮ್ಮ ಹಕ್ಕು’ ಪಾದಯಾತ್ರೆ ಭಾನುವಾರ ಬೆಳಗ್ಗೆ ಆರಂಭವಾಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ಬೃಹತ್ ಪಾದಯಾತ್ರೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ಕೋವಿಡ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸ ಲಾಯಿತು. ಮಾಸ್ಕ್ ಹಾಕಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೆರೆ ದಿದ್ದ ಸಾವಿರಾರು ಮಂದಿ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರಾದರೂ, ಪಾದ ಯಾತ್ರೆಯ ನೇತೃತ್ವ ವಹಿಸಿದ್ದ ಡಿ.ಕೆ.ಶಿವಕುಮಾರ್ ಸ್ವತಃ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ್ದು ಕಂಡು ಬಂತು. ಕಾರ್ಯಕ್ರಮಕ್ಕೂ ಮುನ್ನ ಡಿ.ಕೆ.ಶಿವ ಕುಮಾರ್ ತೆಪ್ಪದಲ್ಲಿ ನದಿಯ ಮಧ್ಯ ಭಾಗಕ್ಕೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಇತ್ತ ಕಾಂಗ್ರೆಸ್ ಮಹಿಳಾ ನಾಯಕಿಯರು ವೇದಿಕೆ ಬಳಿ ಶಿವನಿಗೆ ಪೂಜೆ ಸಲ್ಲಿಸಿದರೆ, ತುಸು ದೂರದಲ್ಲಿ ವಿಘ್ನ ನಿವಾ ರಕ ಗಣೇಶನಿಗೆ ವಿಶೇಷ ಪೂಜೆ ಹಾಗೂ ಗಣ ಹೋಮ ಏರ್ಪಡಿಸಲಾಗಿತ್ತು. ಸಂಗೀತ ನಿರ್ದೇಶಕ ಸಾಧುಕೋಕಿಲ ನೇತೃತ್ವದ ತಂಡ ನಾಡಗೀತೆ ಹಾಗೂ ರೈತ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಇಂಪು ನೀಡಿದರು. ನಂತರ ವೇದಿಕೆ ಮೇಲೆ ಸ್ವಾಮೀಜಿಗಳು, ಚರ್ಚ್ ಫಾದರ್‍ಗಳು, ಮೌಲ್ವಿಗಳು ಸೇರಿದಂತೆ ಸರ್ವಧರ್ಮ ಗುರುಗಳು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಬಳಿಕ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ವೇದಿಕೆಯಲ್ಲಿ ಸಂಸದ ಡಿ.ಕೆ.ಸುರೇಶ್, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇ ಶ್ವರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ಆರ್.ವಿ.ದೇಶ ಪಾಂಡೆ, ಹೆಚ್.ಕೆ.ಪಾಟೀಲ್, ರಾಮಲಿಂಗ ರೆಡ್ಡಿ, ಈಶ್ವರ ಖಂಡ್ರೆ, ಮಾಜಿ ಸಂಸದರಾದ ಧ್ರುವನಾರಾಯಣ, ಕೆ.ಹೆಚ್.ಮುನಿಯಪ್ಪ, ಡಿ.ಕೆ.ಹರಿಪ್ರಸಾದ್ ಮುಂತಾದ ಘಟಾನುಗಟಿ ನಾಯಕರು, ಸ್ವಾಮೀಜಿಗಳು, ಚಿತ್ರರಂಗದ ಪ್ರಮುಖರು ಇದ್ದರು.
ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಆರಂಭವಾಗುತ್ತದೆ ಎಂದು ಘೋಷಿಸಲಾಗಿತ್ತಾದರೂ, ಸಭಾ ಕಾರ್ಯಕ್ರಮ ಮುಗಿದು ಪಾದಯಾತ್ರೆಗೆ ಚಾಲನೆ ನೀಡುವುದರೊಳಗೆ ವೇಳೆ ಸುಮಾರು 11.15 ಗಂಟೆ ಆಗಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮಾಸ್ಕ್ ಮತ್ತು ನೀಲಿ ಬಣ್ಣದ ಟೋಪಿಗಳು `ನಮ್ಮ ನೀರು, ನಮ್ಮ ಹಕ್ಕು’ ಎಂಬ ಘೋಷ ವಾಕ್ಯವಿರುವ ಟೀಶರ್ಟ್‍ಗಳನ್ನು ನೀಡಲಾಗಿತ್ತು. `ಮೇಕೆದಾಟಿಗೆ ಜೈ’, `ನಮ್ಮ ನೀರು, ನಮ್ಮ ಹಕ್ಕು’ ಮುಂತಾದ ಘೋಷಣೆಗಳೊಂದಿಗೆ ಸಾವಿರಾರು ಮಂದಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿದರು. ಮಧ್ಯಾಹ್ನದ ವೇಳೆಗೆ ಪಾದಯಾತ್ರೆ ತಂಡ ಹೆಗ್ಗಲೂರು ಗ್ರಾಮ ತಲುಪಿತು. ಅಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. 5 ಎಕರೆ ಪ್ರದೇಶದಲ್ಲಿ ಪೆಂಡಾಲ್ ಹಾಕಿ, ಮುದ್ದೆ, ಅವರೆಕಾಯಿ ಸಾರು, ಪಲ್ಯ, ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರ ವಿಶ್ರಾಂತಿ ಪಡೆದು ಮತ್ತೆ ಪಾದಯಾತ್ರೆ ಆರಂಭವಾಯಿತು.

ಸಂಜೆ 7.15ರ ವೇಳೆಗೆ ಪಾದಯಾತ್ರೆ ಡಿ.ಕೆ.ಶಿವಕುಮಾರ್ ಅವರ ಹುಟ್ಟೂರು ದೊಡ್ಡ ಆಲಹಳ್ಳಿ ತಲುಪಿತು. ಈ ಗ್ರಾಮಕ್ಕೆ ಪಾದಯಾತ್ರೆ ಪ್ರವೇಶಿಸುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮದೊಂದಿಗೆ ಗ್ರಾಮಸ್ಥರು ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಿದರು. ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ವಾಹನವೊಂದರ ಮೇಲೆ ಡಿ.ಕೆ.ಶಿವಕುಮಾರ್ ಅವರನ್ನು ಕುಳ್ಳಿರಿಸಿ ಗ್ರಾಮದಲ್ಲಿ ಅವರನ್ನು ಮೆರವಣಿಗೆ ಮಾಡಲಾಯಿತು. ಅವರ ಮೇಲೆ ಹೂವಿನ ಮಳೆ ಸುರಿಸಿದರು. ದೊಡ್ಡ ಆಲಹಳ್ಳಿಯ ಎಲ್ಲಾ ರಸ್ತೆಗಳಲ್ಲೂ ದೀಪಾಲಂಕಾರ ಮಾಡಲಾಗಿತ್ತು. ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನ ಮಧ್ಯೆ ಪಾದಯಾತ್ರೆ ಸಾಗಿಬಂತು. ಇಂದು ಪಾದಯಾತ್ರೆ ತಂಡ ದೊಡ್ಡ ಆಲಹಳ್ಳಿಯಲ್ಲಿ ವಾಸ್ತವ್ಯ ಹೂಡಿ ನಾಳೆ ಬೆಳಗ್ಗೆ ಮತ್ತೆ ಪಾದಯಾತ್ರೆ ಆರಂಭಿಸಲಿದೆ.

Translate »