ರಾಜ್ಯವನ್ನು ಮಲೇರಿಯಾ ಮುಕ್ತವಾಗಿಸಲು ಪಣ
ಮೈಸೂರು

ರಾಜ್ಯವನ್ನು ಮಲೇರಿಯಾ ಮುಕ್ತವಾಗಿಸಲು ಪಣ

January 10, 2022

ಮೈಸೂರು, ಜ.9- ಪೋಲಿಯೋದಂತೆ ದೇಶದಿಂದ ಮಲೇರಿಯಾವನ್ನು ಕೊನೆ ಗಾಣಿಸಲು ಆರೋಗ್ಯ ಇಲಾಖೆ ಮುಂದಾ ಗಿದೆ. ಅದರಲ್ಲೂ ಕರ್ನಾಟಕವನ್ನು ಮಲೇರಿಯಾ ಮುಕ್ತ ರಾಜ್ಯವಾಗಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಪ್ರಯೋಗ ಶಾಲಾ ತಂತ್ರಜ್ಞರು ಶ್ರಮಿಸುತ್ತಿದ್ದಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಹಲವು ವರ್ಷಗಳ ಸತತ ಪರಿಶ್ರಮದಿಂದ ಕರ್ನಾಟಕದಲ್ಲಿ ಈಗಾಗಲೇ ಮಲೇರಿಯಾ ಕೊನೆ ಹಂತದಲ್ಲಿದೆ. ಕೊನೆ ಹಂತ ದಲ್ಲಿರುವ ಮಲೇರಿಯಾವನ್ನು ಕೊನೆಗಾಣಿ ಸಲೇಬೇಕೆಂದು ಆರೋಗ್ಯ ಇಲಾಖೆ ಪಣ ತೊಟ್ಟಿದ್ದು, ಈ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಾ ಜಿಲ್ಲೆಗಳ ತಾಲೂಕು ಆಸ್ಪತ್ರೆಯ ಪ್ರಯೋಗಶಾಲಾ ತಂತ್ರಜ್ಞರಿಗೆ ತರಬೇತಿ ನೀಡುವ ಮೂಲಕ ಮಲೇರಿಯಾ ವಿರುದ್ಧ ಸಮರ ಸಾರಿದೆ.

ರಾಜ್ಯದಲ್ಲಿ ಮಂಗಳೂರು ಸೇರಿದಂತೆ 2-3 ಜಿಲ್ಲೆಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಮಲೇರಿಯಾ ಪ್ರಕರಣವಿದೆ. ಈ ಹಿನ್ನೆಲೆ ಯಲ್ಲಿ ಆ ಜಿಲ್ಲೆಗಳಿಂದ ಬೇರೆ ಬೇರೆ ಜಿಲ್ಲೆ ಗಳಿಗೆ ಮಲೇರಿಯಾ ಹರಡುವ ಸಾಧ್ಯತೆ ಯಿರುವುದರಿಂದ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ಜಿಲ್ಲೆಗಳ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮೈಸೂರಲ್ಲಿ 8 ಜಿಲ್ಲೆಗಳ ಪ್ರಯೋಗ ಶಾಲಾ ತಂತ್ರಜ್ಞರಿಗೆ ತರಬೇತಿ: ಮೈಸೂರಿನ ನಜûóರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಂಕಿರ್ಣದಲ್ಲಿರುವ ವೈದ್ಯರ ಭವನದಲ್ಲಿ ಎಂಟು ಜಿಲ್ಲೆಗಳ ಎಲ್ಲಾ ತಾಲೂಕುಗಳ ಸರ್ಕಾರಿ ಆಸ್ಪತ್ರೆಯ ಪ್ರಯೋಗ ಶಾಲಾ ತಂತ್ರಜ್ಞರಿಗೆ ಮೈಕ್ರೋಸ್ಕೋಪ್ ಬಳಸಿ ಮಲೇರಿಯಾ ಪತ್ತೆ ಮಾಡುವ ನಿಟ್ಟಿನಲ್ಲಿ ನಡೆಸಬೇಕಾದ ಪರೀಕ್ಷೆಗಳ ಬಗ್ಗೆ ಮತ್ತೆ ತರಬೇತಿ ನೀಡುವ ಮೂಲಕ ಮನನ ಮಾಡಲಾಗುತ್ತಿದೆ. ಈ ತರಬೇತಿ ಗಾಗಿ ಜಿಲ್ಲಾ ರೋಹವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್. ಚಿದಂಬರ ಅವರನ್ನು ಮುಖ್ಯಸ್ಥರಾಗಿ ನಿಯೋಜಿಸಲಾಗಿದೆ. ಇದರಿಂದ ಮಲೇ ರಿಯಾ ವಿರುದ್ಧ ಆರೋಗ್ಯ ಸಮರ ಸಾರಿದ್ದು, ಮಲೇರಿಯಾ ಮುಕ್ತ ಕರ್ನಾಟಕ ಮಾಡಲು ಪಣ ತೊಟ್ಟಿದೆ.

ಕೊನೆಗಾಣಿಸುವುದೇ ನಮ್ಮ ಮುಂದಿ ರುವ ಗುರಿ: ಎಂಟು ಜಿಲ್ಲೆಗಳ ತಾಲೂಕು ಆಸ್ಪತ್ರೆಗಳ ಪ್ರಯೋಗಶಾಲಾ ತಂತ್ರಜ್ಞರಿಗೆ ತರಬೇತಿ ನೀಡುತ್ತಿರುವ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಜಿಲ್ಲಾ ರೋಹವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮಲೇರಿಯಾ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮೈಸೂರು ವಿಭಾಗದ ಎಂಟು ಜಿಲ್ಲೆಗಳ ಎಲ್ಲಾ ತಾಲೂಕು ಗಳ ಸರ್ಕಾರಿ ಆಸ್ಪತ್ರೆಗಳ ಪ್ರಯೋಗಶಾಲಾ ತಂತ್ರಜ್ಞರಿಗೆ 10 ದಿನಗಳ ತರಬೇತಿ ನೀಡಲಾ ಗುತ್ತಿದೆ. ಒಟ್ಟು ಮೂರು ತಂಡದಲ್ಲಿ ಈಗಾಗಲೇ ತರಬೇತಿ ನೀಡಲಾಗಿದೆ. ನಾಲ್ಕನೇ ತಂಡದ ತರಬೇತಿ ಕಾರ್ಯಾಗಾರ ನಡೆಯುತ್ತಿದೆ. ಎಂಟು ಜಿಲ್ಲೆಗಳಿಂದ ಒಟ್ಟು 70 ಮಂದಿಗೆ ತರಬೇತಿ ನೀಡಿದಂತಾಗಿದೆ ಎಂದರು.

ಈ ತರಬೇತಿ ಪಡೆದ ಪ್ರಯೋಗಾಲಯ ತಂತ್ರಜ್ಞರು ತಮ್ಮ ತಾಲೂಕು ಆಸ್ಪತ್ರೆಗಳಿಗೆ ತೆರಳಿದ ನಂತರ ತಮ್ಮ ಸಹೋದ್ಯೋಗಿ ಗಳಿಗೆ ಮಲೇರಿಯಾ ಪತ್ತೆ ಮಾಡುವ ಸಂಬಂಧ ಹಾಗೂ ಮೈಕ್ರೋಸ್ಕೋಪ್ ಬಳಕೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಕಲಿಸಲಿದ್ದಾರೆ. ತಾಲೂಕು ಲ್ಯಾಬೊರೇಟರಿ ಟೆಕ್ನಿಕಲ್ ಆಫೀಸರ್‍ಗಳಿಗೆ ತರಬೇತಿ ನೀಡುತ್ತಿರುವುದು ಅವರಿಗೆ ಮಲೇರಿಯಾ ಪರೀಕ್ಷೆಯ ಬಗ್ಗೆ ಮನನ ಮಾಡಿದಂ ತಾಗಿದೆ. ನಮ್ಮಲ್ಲಿ ಕೇಸ್ ಇಲ್ಲ ಎಂದು ಮೈಮರೆಯುವಂತಿಲ್ಲ. ಮೈಮರೆತರೆ ಯಾವಾಗ ಬೇಕಾದರೂ ಮಲೇರಿಯಾ ನುಸುಳಬಹುದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತರಬೇತಿ ಪಡೆದಿರುವವರು ಆಯಾ ತಾಲೂಕುಗಳ ಆಸ್ಪತ್ರೆಗಳ ಪ್ರಯೋಗಾ ಲಯಕ್ಕೆ ತೆರಳಿ ಪರಿಶೀಲಿಸಲಿದ್ದಾರೆ. ರಕ್ತಲೇಪನ ತೆಗೆಯುವುದರಿಂದ ಫಲಿತಾಂಶ ಬರುವವರೆಗೂ ಸರ್ಕಾರದ ಗೈಡ್‍ಲೈನ್ ಅನುಸರಿಸಲಾಗುತ್ತಿದೆಯೇ ಎಂದು ಚೆಕ್ ಮಾಡಲಿದ್ದಾರೆ. ಆ ನಂತರ ವರದಿಯೊಂದನ್ನು ಸಿದ್ಧಪಡಿಸಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳಿಗೆ ಸಲ್ಲಿಸುತ್ತಾರೆ ಎಂದು ವಿವರಿಸಿದರು.

Translate »