ಮೈತ್ರಿ ಸರ್ಕಾರ ಬಜೆಟ್‍ನಲ್ಲಿ ರೈತರಿಗೆ ಬಳುವಳಿ: 2 ಲಕ್ಷದವರೆಗಿನ ಕೃಷಿ ಸಾಲ ಮನ್ನಾ
ಮೈಸೂರು

ಮೈತ್ರಿ ಸರ್ಕಾರ ಬಜೆಟ್‍ನಲ್ಲಿ ರೈತರಿಗೆ ಬಳುವಳಿ: 2 ಲಕ್ಷದವರೆಗಿನ ಕೃಷಿ ಸಾಲ ಮನ್ನಾ

July 6, 2018
  • ಸಾರಿಗೆ, ವಿದ್ಯುತ್, ಪೆಟ್ರೋಲ್, ಡೀಸೆಲ್, ಮದ್ಯ ದುಬಾರಿ

ಬೆಂಗಳೂರು: ಪ್ರತಿ ರೈತ ಕುಟುಂಬ ಮಾಡಿರುವ ಎರಡು ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಬೆಳೆ ಸಾಲ ಯೋಜನೆಯ ವ್ಯಾಪ್ತಿಗೆ ಒಳಪಡಲಿದೆ. ಸರ್ಕಾರಿ ಅಧಿಕಾರಿಗಳು, ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರು ಹಾಗೂ ಇತರೆ ಕೃಷಿ ಸಾಲಗಾರರನ್ನು ಈ ಸಾಲ ಮನ್ನಾ ಯೋಜನೆಯಿಂದ ಹೊರಗಿಟ್ಟಿದ್ದಾರೆ.

ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ರೈತರಿಗೆ ನೀಡಿದ ಭರವಸೆಯನ್ನು ಕುಮಾರಸ್ವಾಮಿಯವರು ಈಡೇರಿಸುವ ಜೊತೆಗೆ ಅದರಿಂದ ಆಗುವ ವೆಚ್ಚವನ್ನು ಭರಿಸಲು ಸಾರಿಗೆ, ವಿದ್ಯುತ್, ಪೆಟ್ರೋಲ್, ಡಿಸೇಲ್, ಮದ್ಯಗಳ ಮೇಲೆ ಹೆಚ್ಚು ಕರಭಾರ ವಿಧಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಹಕರಿಸಲು ಉಳಿದ ವರ್ಗ ಸ್ವಲ್ಪ ಕರಭಾರವನ್ನು ಭರಿಸುವುದು ಜನಸಾಮಾನ್ಯರಿಗೆ ಅನಿವಾರ್ಯವಾಗಿದೆ. ವಿಧಾನಸಭೆಯಲ್ಲಿಂದು 2018-19ನೇ ಸಾಲಿನ ಚೊಚ್ಚಲ ಮುಂಗಡ ಪತ್ರವನ್ನು ಮಂಡಿಸಿ, ರೈತ ವರ್ಗಕ್ಕೆ ಭರವಸೆ ಮಹಾಪೂರವನ್ನೇ ಹರಿಸಿದ್ದಲ್ಲದೆ, ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಗರ್ಭಿಣಿಯರು ಮತ್ತು ವಯೋವೃದ್ಧರಿಗೆ ಮಾಸಿಕ ಪಿಂಚಣಿಯನ್ನು ಹೆಚ್ಚಿಸಿದ್ದಾರೆ.

ಇದರಿಂದ ತಗಲುವ ವೆಚ್ಚ ಭರಿಸಲು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯನ್ನು 30ರಿಂದ 32ಕ್ಕೂ, 19ರಿಂದ 21ಕ್ಕೂ ಅನುಕ್ರಮವಾಗಿ ಹೆಚ್ಚಿಸಿದ್ದಾರೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.14 ರೂ. ಡಿಸೇಲ್ ಮೇಲಿನ ಬೆಲೆ 1.12ರಷ್ಟು ಹೆಚ್ಚಳವಾಗುತ್ತದೆ. ಪ್ರತಿ ವರ್ಷದಂತೆ ಮದ್ಯವ್ಯಸನಿಗಳು ಈ ವರ್ಷವೂ ಶೇಕಡ 4 ರಷ್ಟು ದರವನ್ನು ಎಲ್ಲಾ ತೆರನಾದ ಮದ್ಯಗಳ ಮೇಲೆ ನೀಡಬೇಕಾಗುತ್ತದೆ. ಮೋಟಾರ್ ವಾಹನ ತೆರಿಗೆಯನ್ನು ಚದರ ಮೀಟರ್‍ಗೆ ಶೇ.50ರಂತೆ ಹೆಚ್ಚಳ ಮಾಡಿದ್ದಾರೆ. ಜೊತೆಗೆ ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಚಾಲ್ತಿಯಲ್ಲಿರುವ ಶೇ.6ರಿಂದ 9ಕ್ಕೆ ಹೆಚ್ಚಿಸಿರುವುದರಿಂದ ಪ್ರತಿ ಯುನಿಟ್ ದರ 10 ಪೈಸೆಯಿಂದ 20 ಪೈಸೆಗೆ ಹೆಚ್ಚಳವಾಗಲಿದೆ.

ಮುಖ್ಯಮಂತ್ರಿಯವರು ರೈತರ ಪರ ನಿರ್ಧಾರ ಕೈಗೊಂಡಿದ್ದರಿಂದ 34 ಸಾವಿರ ಕೋಟಿ ರೂ. ಮೊತ್ತದ ಪ್ರಯೋಜನ ಅವರಿಗೆ ಲಭ್ಯವಾಗಲಿದೆ. ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ, ಹಾಗೂ ಸುಸ್ತಿದಾರರಲ್ಲದ ರೈತರಿಗೆ ಉತ್ತೇಜನಕಾರಿಯಾಗಿ ಮರು ಪಾವತಿ ಮಾಡಿದ ಸಾಲದ ಮೊತ್ತ ಇಲ್ಲವೆ 25 ಸಾವಿರ ರೂ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ರೈತರ ಖಾತೆಗಳಿಗೆ ಜಮೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ರೈತರಿಗೆ ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಅವರ ಸುಸ್ತಿ ಖಾತೆಯಲ್ಲಿರುವ ಬಾಕಿಯನ್ನು ಮನ್ನಾ ಮಾಡಿ, ಋಣಪತ್ರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕಾಗಿ ಬಜೆಟ್‍ನಲ್ಲಿ 6500 ಕೋಟಿ ಎತ್ತಿಡಲಾಗಿದ್ದು, ಹಿಂದಿನ ಸರ್ಕಾರ ಉಳಿಸಿಕೊಂಡಿದ್ದ ಸಾಲ ಮನ್ನಾ ಬಾಕಿಗೆ 4000 ಕೋಟಿ ರೂ. ಮೀಸಲಿಡಲಾಗಿದೆ.
ರೈತರು ಇದುವರೆಗೂ ಸಹಕಾರಿ ಪತ್ತಿನ ಬ್ಯಾಂಕುಗಳಲ್ಲಿ ಮೂರು ಲಕ್ಷದವರೆಗೆ ಶೂನ್ಯ ಬಡ್ಡಿದರ ಸಾಲ ಪಡೆಯಬಹುದಿತ್ತು.

ಇನ್ನು ಮುಂದೆ ಅದನ್ನು ಐದು ಲಕ್ಷಕ್ಕೆ ವಿಸ್ತರಿಸಿದ್ದಾರೆ. ಅದೇ ರೀತಿ ಐದರಿಂದ ಹತ್ತು ಲಕ್ಷ ರೂ.ವರೆಗೂ ಕೃಷಿ ಸಾಲ ಪಡೆಯುವ ರೈತರಿಗೆ ಶೇ.4ರಷ್ಟು ಬಡ್ಡಿ ದರದಲ್ಲಿ ವಿತರಿಸುವ ಮಹತ್ವದ ತೀರ್ಮಾನವನ್ನು ಕುಮಾರಸ್ವಾಮಿ ಮುಂಗಡ ಪತ್ರದಲ್ಲಿ ಪ್ರಕಟಿಸಿದ್ದಾರೆ.

ಇಸ್ರೇಲ್ ಮಾದರಿ ನೀರಾವರಿ ವ್ಯವಸ್ಥೆ ಮೂಲಕ ನಮ್ಮ ರೈತರ ಬೆಳೆಗಳನ್ನು ಕಾಪಾಡಿ, ಅವರ ಜೀವನ ಹಸನು ಮಾಡುವುದರಲ್ಲಿ ಸಂಶಯವಿಲ್ಲ. ಈ ನಂಬಿಕೆಯಿಂದ ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಐದು ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ಒದಗಿಸಿದ್ದಾರೆ.

ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ನೀರಾವರಿ ಕಾಮಗಾರಿಗಳನ್ನು ಅಳವಡಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಪದ್ಧತಿಯಡಿ ನೀರಾವರಿ ಒದಗಿಸಲು 150 ಕೋಟಿ ರೂ. ನಿಗದಿಪಡಿಸಿದ್ದಾರೆ. ರೈತರ ನೆರವಿನ ಜೊತೆಗೆ ಹೆಣ್ಣು ಮಕ್ಕಳು ಮತ್ತು ವೃದ್ಧರ ಕೈಹಿಡಿದಿರುವ ಮುಖ್ಯಮಂತ್ರಿಯವರು ಇದಕ್ಕಾಗಿ ಹೊಸದಾಗಿ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ಜಾರಿಗೆ ತಂದಿದ್ದು, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಹೆಣ್ಣು ಮಕ್ಕಳಿಗೆ ತಲಾ ಆರು ಸಾವಿರ ರೂ ಭತ್ಯೆ ನೀಡುವುದು,ವೃದ್ಧಾಪ್ಯ ವೇತನದ ಪ್ರಮಾಣವನ್ನು 600 ರೂ.ಗಳಿಂದ ಒಂದು ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವುದು,ಈ ಯೋಜನೆ ತಾಯಿಯ ಎರಡು ಮಕ್ಕಳಿಗೆ ಅನ್ವಯವಾಗಲಿದೆ ಎಂದ ಅವರು, ನವೆಂಬರ್ ಒಂದರಿಂದ ಜಾರಿಯಾಗಲಿರುವ ಈ ಯೋಜನೆಗೆ ಮುನ್ನೂರೈವತ್ತು ಕೋಟಿ ರೂ. ನೀಡಲಾಗುವುದು ಎಂದು ವಿವರಿಸಿದರು.

ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಫಲಾನುಭವಿಗಳು ಪಡೆಯುತ್ತಿರುವ ಆರುನೂರು ರೂ.ಗಳ ಮಾಸಾಶನವನ್ನು ಒಂದು ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು, ನವೆಂಬರ್ 1 ರಿಂದ 65 ವರ್ಷ ಮೀರಿದ 32.92 ಲಕ್ಷ ವೃದ್ಧರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ. ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೋಸ್ಕರ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದಾಗಿ ಘೋಷಿಸಿ, ಇದಕ್ಕಾಗಿ 25 ಕೋಟಿ ರೂ.ಗಳನ್ನು ಒದಗಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ, ಗೋಧಿಯ ಜತೆ ಅರ್ಧ ಕೆಜಿ ತೊಗರಿ ಬೇಳೆ, ಒಂದು ಕೆಜಿ ಪಾಮ್ ಆಯಿಲ್, ಒಂದು ಕೆಜಿ ಅಯೋಡಿನ್ ಉಪ್ಪು ಮತ್ತು ಒಂದು ಕೆಜಿ ಸಕ್ಕರೆಯನ್ನು ಒದಗಿಸುವುದಾಗಿ ಪ್ರಕಟಿಸಿದ್ದಾರೆ.

ರೈತರ ಗೋಳು ಕೇಳಲು ಸಲಹಾ ಸಮಿತಿ, ಕೃಷಿ ಸಮನ್ವಯ ಸಮಿತಿ

ಕೃಷಿ ಚಟುವಟಿಕೆಗಳಲ್ಲಿ ರೈತರ ಸಹಭಾಗಿತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿಯನ್ನು ರಚಿಸುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದು, ಪ್ರತಿ ಎರಡು ತಿಂಗಳಿಗೊಮ್ಮೆ ಈ ಸಮಿತಿಯ ಜತೆ ಚರ್ಚಿಸಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಯತ್ನ ನಡೆಸುವುದಾಗಿ ಹೇಳಿದ್ದಾರೆ.

ರೈತರ ಸಂಕಷ್ಟವನ್ನು ನಿವಾರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಸಮನ್ವಯ ಉನ್ನತ ಸಮಿತಿಯನ್ನು ರಚಿಸಲಾಗುವುದು ಮತ್ತು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಇಲಾಖೆಗಳಲ್ಲಿ ನಡೆದಿರುವ ಕಾರ್ಯಕ್ರಮಗಳ ಸಮನ್ವಯತೆ ಹೇಗಿದೆ ಎಂಬುದನ್ನು ಪರಿಶೀಲಿಸಲಾಗುವುದು.

ಪ್ರತಿ ಜಿಲ್ಲೆಗಳಲ್ಲಿ ರೈತರು ಬೆಳೆಯುವ ಬೆಳೆಗೆ ಅನುಗುಣವಾಗಿ ಉತ್ತೇಜನ ನೀಡಲು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಬಳಸಿಕೊಂಡು ನಾವು ಕೂಡಾ ನೆರವು ನೀಡುವ ಕೆಲಸ ಮಾಡುತ್ತೇವೆ ಎಂದರು.

ಪರಿಸರಕ್ಕೆ ಹಾನಿಕಾರಕವಾದ ಪೌಡರ್, ಡಿಟರ್ಜೆಂಟ್‍ಗಳ ಬಳಕೆ ಹೆಚ್ಚಿರುವುದರಿಂದ ಪರಿಸರಕ್ಕೆ ಅಪಾರ ಪ್ರಮಾಣದ ಹಾನಿಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅಂಟುವಾಳ ಕಾಯಿಯನ್ನು ಬಳಸಿ ತಯಾರಿಸುವ ಡಿಷ್ ಸೋಪು, ವಾಷಿಂಗ್ ಸೋಪುಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲು ತಮ್ಮ ಸರ್ಕಾರ ರೈತರಿಗೆ ಉತ್ತೇಜನ ನೀಡಲಿದೆ ಎಂದರು.

ಶೇಂಗಾ ಹಾಗೂ ಸೂರ್ಯಕಾಂತಿ ಎಣ್ಣೆಗಳನ್ನು ಬೃಹತ್ ಕೈಗಾರಿಕೆಗಳು ತಯಾರಿಸುತ್ತಿದ್ದು ಇದರಿಂದ ಸಣ್ಣ ಮಟ್ಟದ ಉತ್ಪಾದಕರು ತೊಂದರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ಸಣ್ಣ ಸಣ್ಣ ಯಂತ್ರಗಳನ್ನು ಒದಗಿಸಿ ಶುದ್ಧ,ಆರೋಗ್ಯ ಪೂರ್ಣ ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ತಯಾರಿಸಲು ಉತ್ತೇಜನ ನೀಡಲಾಗುವುದು ಎಂದರು.

ಕೃಷಿ ವ್ಯವಸ್ಥೆಯಲ್ಲಿ ನಾವು ಬಿತ್ತುವ ಬೀಜವೇ ಮುಖ್ಯ. ಉತ್ತಮ ಬೀಜವಿದ್ದಾಗ ಉತ್ತಮ ಬೆಳೆ ಸಾಧ್ಯ. ಹೀಗಾಗಿ ಉತ್ತಮ ಗುಣಮಟ್ಟದ ಬೀಜ ಧೃಢೀಕರಣ ಕೇಂದ್ರವನ್ನು ಸ್ಥಾಪಿಸಲಾಗುವುದು. ತೋಟಗಾರಿಕಾ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿಯ ನೀರಾವರಿ ಪದ್ಧತಿಯನ್ನು ಅನುಸರಿಸಲು ನಿರ್ಧರಿಸಿದ್ದು ಈ ವಿಷಯದಲ್ಲಿ ಕೂಡಾ ನಾಲ್ಕು ಜಿಲ್ಲೆಗಳ ತಲಾ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.

ರಾಜ್ಯದ ಪ್ರಮುಖ ನಗರ, ಹೆದ್ದಾರಿಗಳನ್ನು ಸಂಪರ್ಕಿಸುವ ಹತ್ತು ಕಡೆ ಎಪಿಎಂಸಿ ವತಿಯಿಂದ ಇಲ್ಲವೇ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ರೈತರು ಸಿರಿಧಾನ್ಯಗಳು ಸೇರಿದಂತೆ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗುವುದು.

ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು ಈ ಹಿನ್ನೆಲೆಯಲ್ಲಿ ಒಣಗಿರುವ ತೆಂಗಿನ ತೋಟಗಳಲ್ಲಿ ಮಾವು,ಗೋಡಂಬಿ,ಹುಣಸೆ,ಸೀತಾಫಲ,ನೇರಳೆ ಇತ್ಯಾದಿ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.

ನಿರುದ್ಯೋಗಿಗಳಿಗೆ ‘ಕಾಯಕ’ ವರದಾನ

ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಿ, ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ‘ಕಾಯಕ’ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು ಇದರಡಿ ಸ್ವ ಉದ್ಯೋಗ ಕೈಗೊಳ್ಳುವ ಸ್ವಸಹಾಯ ಗುಂಪುಗಳಿಗೆ ತಲಾ ಹತ್ತು ಲಕ್ಷ ರೂ ಸಾಲ ಒದಗಿಸಲಾಗುವುದು.

ಬೀದಿಬದಿ ವ್ಯಾಪಾರಿಗಳಿಗೆ ಬಡವರ ಬಂಧು ಸಂಚಾರಿ ಹಣಕಾಸು ಸೇವೆ

ಬೀದಿ ಬದಿಯ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅವರಿಗೆ ಸಾಂಸ್ಥಿಕ ಹಣಕಾಸು ಲಭ್ಯವಿಲ್ಲ. ಹೀಗಾಗಿ ರಾಜ್ಯದ ಐದು ನಗರಗಳಲ್ಲಿ ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ಬಡವರ ಬಂಧು ಸಂಚಾರಿ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ವೆಬ್ ಪೋರ್ಟೆಲ್

ರಾಜ್ಯದ ಎಲ್ಲ ಶಾಲಾ, ಕಾಲೇಜುಗಳ ವೆಬ್ ಪೋರ್ಟೆಲ್ ಆರಂಭಿಸಲಾಗುವುದು ಮತ್ತು ಅಲ್ಲಿನ ಸ್ಥಿತಿಯನ್ನು ವಿವರವಾಗಿ ನೀಡಲಾಗುವುದು. ಇದನ್ನು ಗಮನಿಸಿ ಅಲ್ಲಿ ಓದಿದ ವಿದ್ಯಾರ್ಥಿಗಳು ಅಗತ್ಯದ ನೆರವು ನೀಡಲು ಮುಂದಾಗುವಂತೆ ಮಾಡುವ ಉದ್ದೇಶ ನನ್ನ ಸರ್ಕಾರದ್ದು ಎಂದು ಅವರು ವಿವರ ನೀಡಿದರು.

ತಾವು ಓದಿದ ಶಾಲೆಯ, ಶಿಕ್ಷಕರ ಅಗತ್ಯಗಳನ್ನು ಗಮನಿಸಿ ಅಲ್ಲಿ ಓದಿದ ವಿದ್ಯಾರ್ಥಿಗಳು ಆಯಾ ಶಾಲೆಗಳಿಗೆ ನೆರವು ನೀಡುವುದು ಒಳ್ಳೆಯದು. ಆ ಮೂಲಕ ಮಾನವ ಸಂಬಂಧಗಳ ಮರುಸ್ಥಾಪನೆಯಾಗುತ್ತದೆ. ಅದೇ ಕಾಲಕ್ಕೆ ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗುತ್ತದೆ ಎಂದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಡಿಪ್ಲೋಮಾ ಕೋರ್ಸ್ ತೆರೆಯಲಾಗುವುದು, ಆ ಮೂಲಕ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.

ಪ್ರವಾಸಿ ಕೇಂದ್ರಗಳಲ್ಲಿ ಐನೂರು ಕೊಠಡಿಗಳ ಸೌಲಭ್ಯವಿರುವ ತ್ರೀ ಸ್ಟಾರ್ ಹೋಟೆಲ್ ಕಟ್ಟಲು ಮುಂದೆ ಬರುವ ಉದ್ಯಮಿಗಳಿಗೆ ತಲಾ ಮೂರು ಕೋಟಿ ರೂ ಷೇರು ಬಂಡವಾಳ ನೀಡಲಾಗುವುದು ಮತ್ತು ಅದೇ ರೀತಿ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಸರ್ವಿಸ್ ಅಪಾರ್ಟ್‍ಮೆಂಟ್‍ಗಳನ್ನು ತೆರೆಯಲು ಮುಂದೆ ಬರುವವರಿಗೆ ಶೇಕಡಾ ಮೂವತ್ತರಷ್ಟು ಷೇರು ಬಂಡವಾಳ ಒದಗಿಸಲಾಗುವುದು ಎಂದು ಹೇಳಿದರು.

ರಸ್ತೆ ಬದಿ ಸೌಲಭ್ಯ

ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರು ವಿಶ್ರಾಂತಿ ಪಡೆದು ಊಟ, ತಿಂಡಿ ಮಾಡಿಕೊಂಡು ಪ್ರಯಾಣ ಮುಂದುವರಿಸಲು ಅನುಕೂಲವಾಗುವ ರೀತಿಯಲ್ಲಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಒದಗಿಸಲಾಗುತ್ತಿದ್ದ ಎರಡೂವರೆ ಲಕ್ಷ ರೂಗಳ ನೆರವನ್ನು ಮೂರು ಲಕ್ಷ ರೂಗಳಿಗೆ, ಮೂರೂವರೆ ಲಕ್ಷ ರೂಗಳ ನೆರವನ್ನು ನಾಲ್ಕು ಲಕ್ಷ ರೂಗಳಿಗೆ ಹೆಚ್ಚಳ ಮಾಡಲಾಗುವುದು ಎಂದರು.

ಭೂ ಒಡೆತನ ಯೋಜನೆಯಡಿ ಜಮೀನನ್ನು ಪಡೆದ ರೈತ ಮಹಿಳೆಯರ ಜಮೀನುಗಳಿಗೆ ಕೊಳವೆ ಬಾವಿ ಮತ್ತು ಕೃಷಿ ಯಂತ್ರೋಪಕರಣಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಜಾತ್ಯಾತೀತವಾಗಿ ದಾಸೋಹ ಯೋಜನೆಯನ್ನು ಜಾರಿಗೊಳಿಸುತ್ತಿರುವ ರಾಜ್ಯದ ವಿವಿಧ ಮಠ ಮಾನ್ಯಗಳಿಗೆ ಇಪ್ಪತ್ತೈದು ಕೋಟಿ ರೂ ನೆರವು ನೀಡುವುದಾಗಿ ಪ್ರಕಟಿಸಿದರು.
ಉಪ ವಿಭಾಗವೊಂದಕ್ಕೆ ವೃದ್ಧಾಶ್ರಮ: ಆಧಾರ ಸ್ವಯಂ ಉದ್ಯೋಗ ಯೋಜನೆಯ ಘಟಕ ವೆಚ್ಚವನ್ನು ಮೂವತ್ತೈದು ಸಾವಿರ ರೂಗಳಿಂದ ಒಂದು ಲಕ್ಷ ರೂಗಳಿಗೆ ಹೆಚ್ಚಳ ಮಾಡಲಾಗುವುದು, ಪ್ರಸ್ತುತ ಜಿಲ್ಲೆಗೊಂದರಂತೆ ಇರುವ ವೃದ್ಧಾಶ್ರಮಗಳನ್ನು ರಾಜ್ಯದ ಎಲ್ಲ ಉಪವಿಭಾಗಗಳಿಗೆ ಒಂದರಂತೆ ವಿಸ್ತರಿಸಲಾಗುವುದು ಎಂದರು.

ಮೈಸೂರಲ್ಲಿ ಐಸಿ ಚಿಪ್ ಘಟಕ

ಚೀನಾ ದೇಶವು ತನ್ನ ಗೊನ್ ಶಾವ್ ಮತ್ತು ಪೊಶಾನ್ ಪ್ರದೇಶಗಳಲ್ಲಿ ಜಾಗತಿಕವಾಗಿ ಬೇಡಿಕೆ ಇರುವ ವಸ್ತುಗಳ ಉತ್ಪಾದನೆ ಮಾಡುತ್ತಿದೆ. ಆ ಮೂಲಕ ಪೀಠೋಪಕರಣದಿಂದ ಹಿಡಿದು ಎಲೆಕ್ಟ್ರಿಕ್ ವಸ್ತುಗಳ ತನಕ ಹಲವು ಚೀನಾ ವಸ್ತುಗಳು ದೇಶದೊಳಗೆ ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ. ಇದಕ್ಕೆ ಪ್ರತಿಯಾಗಿ ನಾವು ಸ್ಪರ್ಧೆ ನೀಡದಿದ್ದರೆ ನಮ್ಮ ಉದ್ಯಮಗಳು ಸಾಯುತ್ತವೆ. ಹೀಗಾಗಿ ಚೀನಾದೊಂದಿಗೆ ಸಕಾರಾತ್ಮಕ ಸ್ಪರ್ಧೆ ಏರ್ಪಡಿಸಬೇಕು ಎಂಬ ನೆಲೆಯಲ್ಲಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟಗಳ ತನಕ ಉತ್ಪಾದನಾ ಘಟಕಗಳು ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಲು ನಿರ್ಧರಿಸಲಾಗಿದೆ.

ಐಸಿಬಿ ಚಿಪ್‍ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು ನಮ್ಮ ರಾಜ್ಯದಲ್ಲೇ ಹಲವು ಐಸಿ ಚಿಪ್ ಉತ್ಪಾದನಾ ಕಂಪನಿಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ನಾವೂ ಮೈಸೂರಿನಲ್ಲಿ ಒಂದು ಐಸಿ ಚಿಪ್ ಉತ್ಪಾದನಾ ಘಟಕವನ್ನು ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಚೀನಾದಿಂದ ಭಾರತಕ್ಕೆ ಪ್ರತಿ ವರ್ಷ ಐದು ಕೋಟಿ ಮೊಬೈಲ್ ಫೋನ್‍ಗಳು ಆಮದಾಗುತ್ತಿದ್ದು ಇದಕ್ಕೆ ಪೂರಕವಾದ ಬಿಡಿ ಭಾಗಗಳ ಘಟಕ ನಡೆಯುತ್ತಿದೆ. ಹೀಗಾಗಿ ನಾವು ಕೂಡಾ ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಫೋನ್ ಬಿಡಿ ವಸ್ತುಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದರು.

ಸಾರ್ವಜನಿಕರು ಹಾಗೂ ಸಾರ್ವಜನಿಕ ಗುತ್ತಿಗೆದಾರರಿಗೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಗಣಿಗುತ್ತಿಗೆ ಮತ್ತು ಕ್ರಷರ್‍ಗಳ ಮಾಹಿತಿಯನ್ನು ಒದಗಿಸಲಾಗುವುದು ಮತ್ತು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಜಲ್ಲಿ, ಮರಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಲಕ್ಷ ಮನೆ ಯೋಜನೆ ವಿಸ್ತರಣೆ

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯನ್ನು ಈ ಹಿಂದೆ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿತ್ತು. ಇದನ್ನು ಮುಂದಿನ ವರ್ಷಗಳಲ್ಲಿ ಎಲ್ಲ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯ ಮಹದೇವಪುರ, ಚಿಕಂಕನಹಳ್ಳಿ, ಕೆ.ಶೆಟ್ಟಿಹಳ್ಳಿ ಮತ್ತಿತರ ಹದಿನಾರು ಗ್ರಾಮಗಳಿಗೆ ಇಪ್ಪತ್ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಮತ್ತು ಗಾಮನಹಳ್ಳಿ ಮತ್ತಿತರ ಹದಿಮೂರು ಗ್ರಾಮಗಳಲ್ಲಿ 88.90 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.

ಮಂಡ್ಯ ಜಿಲ್ಲೆಯ ಲೋಕಪಾವನಿ ನದಿಯಿಂದ ದುದ್ದ ಮತ್ತಿತರ ಕೆರೆಗಳಿಗೆ ಕುಡಿಯುವ ನೀರು ತುಂಬಿಸಲು ಹಾಗೂ ಮಂಡ್ಯ ತಾಲೂಕಿನ ಬಹುಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಮೂವತ್ತು ಕೋಟಿ ರೂ.ಗಳ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

Translate »