ಕಾಂಗ್ರೆಸ್-ಜೆಡಿಎಸ್‍ನ ಪ್ರಮುಖ ನಾಯಕರ ಸೋಲು: ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ
ಮೈಸೂರು

ಕಾಂಗ್ರೆಸ್-ಜೆಡಿಎಸ್‍ನ ಪ್ರಮುಖ ನಾಯಕರ ಸೋಲು: ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ

May 21, 2019

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ದೋಸ್ತಿ ಪಕ್ಷಗಳ ಘಟಾನುಘಟಿ ನಾಯಕರು ಸೋತು ಮನೆಗೆ ಹೋಗ ಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿವೆ. ದೇಶದ ಜನರು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಲು ಕಾತುರರಾಗಿದ್ದಾರೆ ಎಂದರು.

300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದನ್ನು ಯಾವ ಶಕ್ತಿಗಳೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಕೇಂದ್ರದಲ್ಲಿ ಕಳೆದ ಐದು ವರ್ಷ ಎನ್‍ಡಿಎ ಸರ್ಕಾರ ಜನರ

ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಿದೆ. ದೇಶವನ್ನು ಮುನ್ನಡೆಸಲು ಮೋದಿಯಂತಹ ಸಮರ್ಥ ನಾಯಕ ಅಗತ್ಯ ಎಂಬುದು ಮತದಾರರಿಗೆ ಮನವರಿಕೆಯಾಗಿದೆ. ಹೀಗಾಗಿಯೇ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬ ದೃಢ ನಿಶ್ಚಯದಿಂದ ನಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು. ಕಳೆದ ಒಂದು ವರ್ಷಗಳ ಸತತ ಹೋರಾಟ, ಕಾರ್ಯಕರ್ತರ ಪರಿಶ್ರಮ, ಸಂಘಟನೆ, ಸಮ್ಮಿಶ್ರ ಸರ್ಕಾರದ ವೈಫಲ್ಯಗಳಿಂದ ಜನರು ಬೇಸತ್ತು ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ನಮ್ಮ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನಗಳು ಬರುವ ಸಂಭವವಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರು ಸೋಲಲಿದ್ದಾರೆ ಎಂದು ಭವಿಷ್ಯ ನುಡಿದರು.

ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರ ಗೊಂದಲಕ್ಕೆ ಸಿಲುಕಲಿದೆ. ಈಗಾಗಲೇ ಎರಡೂ ಪಕ್ಷಗಳ ಮುಖಂಡರು ಫಲಿತಾಂಶಕ್ಕೂ ಮುನ್ನವೇ ಹಾದಿಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ. 23ರ ನಂತರ ಏನಾಗುತ್ತದೆ ಎಂಬುದನ್ನು ನೀವೇ ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು. ಸಮೀಕ್ಷೆಗಳು ಬಿಜೆಪಿ ಹೇಳಿ ಮಾಡಿಸಿದಂತಿದೆ ಎಂಬ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್‍ವೈ, ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Translate »