ಮೈಸೂರು,ಜೂ.24(ಪಿಎಂ)-ಚೀನಾ ದಾಳಿಯಿಂದ ಹುತಾತ್ಮರಾದ ಭಾರತೀಯ ಯೋಧರಿಗೆ ಆನ್‍ಲೈನ್ ಮೂಲಕ ವಿಶಿಷ್ಟ ರೀತಿಯಲ್ಲಿ ಕಾಂಗ್ರೆಸ್ ಮೈಸೂರು ಜಿಲ್ಲಾ ಸಮಿತಿಯಿಂದ ನಮನ ಸಲ್ಲಿಸಲಾಯಿತು.
ಮೈಸೂರಿನ ದಾಸಪ್ಪ ವೃತ್ತದ ಬಳಿಯಿರುವ ಕಾಂಗ್ರೆಸ್ ಭವನದ ವೇದಿಕೆಯಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಕೆಆರ್‍ನಗರ, ಪಿರಿಯಾಪಟ್ಟಣ, ಹುಣಸೂರು, ವರುಣಾ, ಟಿ.ನರಸೀಪುರ, ನಂಜನಗೂಡು ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಮುಖಂಡರೊಂದಿಗೆ ವಿಡಿಯೋ ಸಂಪರ್ಕ ಸಾಧಿಸಿ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಸಲಾಯಿತು. ಜು.2ರಂದು ನಡೆಯಲಿರುವ ಕೆಪಿಸಿಸಿ ಅಧ್ಯ ಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವ ಸಿದ್ಧತಾ ವಿಡಿಯೋ ಕಾನ್‍ಫೆರೆನ್ಸ್ ಆಗಿಯೂ ಈ ಕಾರ್ಯಕ್ರಮ ನಡೆಸಲಾಯಿತು.
ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಇತಿಹಾಸ ಹೊಂದಿದೆ. ಹೀಗಾಗಿ ಪಕ್ಷದ ಕಾರ್ಯ ಕರ್ತರು ಸಿಪಾಯಿಗಳು ಇದ್ದಂತೆ. ದೇಶದ ಯೋಧರೊಂದಿಗೆ ನಾವೂ ಇದ್ದೇವೆ. ನಾವು ಪಕ್ಷದ ಸೈನಿಕರು ಮಾತ್ರವಲ್ಲ, ದೇಶದ ಯೋಧರೂ ಹೌದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ರಾಷ್ಟ್ರ ಇಂದು ಸಂಕಷ್ಟದ ಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಯೋಧರ ಜೀವ ಅಮೂಲ್ಯ. ದೇಶದ ವಿಚಾರ ಬಂದಾಗ ಸರ್ವ ಪಕ್ಷಗಳು ಒಂದಾಗಿ ಇರಬೇಕು. ಆ ಮೂಲಕ ನಮ್ಮ ಯೋಧರಿಗೆ ಸ್ಥೈರ್ಯ ತುಂಬಬೇಕು ಎಂದರು. ಕೆಪಿಸಿಸಿ ಕಾರ್ಯದರ್ಶಿ ಶಿವ ನಾಗಪ್ಪ, ಡಿಸಿಸಿ ಉಪಾಧ್ಯಕ್ಷ ಪ್ರೊ.ಶಿವ ಕುಮಾರ್, ಮುಖಂಡರಾದ ಹೆಡತಲೆ ಮಂಜುನಾಥ್, ಪ್ರಕಾಶ್ ಕುಮಾರ್, ಶಿವಪ್ರಸಾದ್, ಹುಣಸೂರು ಬಸವಣ್ಣ, ಬಸವರಾಜ್ ನಾಯಕ್, ಮಧ್ಯಮ ವಕ್ತಾರ ಮಹೇಶ್ ಮತ್ತಿತರರು ಹಾಜರಿದ್ದರು.