ಮೈಸೂರು, ಜೂ.24(ವೈಡಿಎಸ್)- `ನಮೋ ವೆಂಕಟೇಶ, ನಮೋ ತಿರುಮ ಲೇಶ’…. ಭಕ್ತಿಗೀತೆ ಸುಶ್ರಾವ್ಯವಾಗಿ ಮೊಳಗು ತ್ತಲೇ ಅಲ್ಲಿ ನೆರೆದಿದ್ದವರಲ್ಲಿ ಬಹುತೇಕರ ಕಣ್ಣಾಲಿಗಳು ತುಂಬಿಬಂದವು. ತಿರು ಪತಿಯ ತಿಮ್ಮಪ್ಪನನ್ನು ಸ್ತುತಿಸುವುದ ರೊಂದಿಗೆ ಮೈಸೂರಿನ ಪ್ರಸಿದ್ಧ `ಶಾಂತಲಾ’ ಚಿತ್ರಮಂದಿರದ ಕಾರ್ಯಚಟುವಟಿ ಕೆಯೂ ಪರಿಸಮಾಪ್ತಿಯಾಯಿತು.
`ನಗರದ ಅನಾಥಾಲಯ ಟ್ರಸ್ಟ್‍ನೊಡನೆ ಮಾಡಿಕೊಂಡಿದ್ದ ಗುತ್ತಿಗೆ ಕರಾರು ಅವಧಿ ಮುಗಿದಿದೆ. ಹೀಗಾಗಿ ಶಾಂತಲಾ ಚಿತ್ರ ಮಂದಿರವನ್ನು ನೋವಿನಿಂದಲೇ ಮುಚ್ಚು ತ್ತಿದ್ದೇವೆ’ ಎಂದು ಪಾಲುದಾರ ಪದ್ಮನಾಭ ಪದಕಿ ತಿಳಿಸಿದರು.
ಚಿತ್ರಮಂದಿರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಶಾಂತಲಾ ಚಿತ್ರಮಂದಿರ ನಗರದ ಮಲ್ಟಿಫ್ಲೆಕ್ಸ್ ಚಿತ್ರ ಮಂದಿರದಷ್ಟೇ ಗುಣಮಟ್ಟದ ಸಿನಿಮಾ ಪ್ರದರ್ಶನ, ಆಸನಗಳ ವ್ಯವಸ್ಥೆ ಹೊಂದಿತ್ತು. ಇಂದು ಶಾಂತಲಾ ಎಂಬುದು ಬ್ರಾಂಡ್ ಆಗಿದ್ದು, ಅದನ್ನು ಕಳೆದುಕೊಳ್ಳಲು ಇಷ್ಟ ವಿಲ್ಲ. ಹಾಗಾಗಿ ನಾವು ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ ಚಿತ್ರಮಂದಿರ ಮಾಡುತ್ತೇವೆ. ಗುತ್ತಿಗೆ ಕರಾರನ್ನು ನವೀಕರಿಸಿ ಕೊಡುವಂತೆ ಮನವಿ ಮಾಡಿದೆವು. ಆದರೆ, ಟ್ರಸ್ಟ್‍ನವರು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ 46 ವರ್ಷಗಳ ಕಾಲ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ ಚಿತ್ರಮಂದಿರವನ್ನು ಮುಚ್ಚಬೇಕಾಯಿತು. ಕೊರೊನಾ ಅಥವಾ ಆರ್ಥಿಕ ಸಮಸ್ಯೆಯಿಂದ ಮುಚ್ಚುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನಮಗೆ ಗೊತ್ತಿಲ್ಲದಂತೆ ಶಾಂತಲಾ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಆಗಿದೆ. ಹಲವರು ಕರೆ ಮಾಡಿ ಯಾಕೆ ಮುಚ್ಚುತ್ತೀರಾ? ಎಂದು ಪ್ರಶ್ನಿಸಿದರು. ರಾಜಸ್ಥಾನದಿಂದ ಒಬ್ಬರು ಟ್ವೀಟ್ ಮಾಡಿದ್ದಾರೆ. `ನಾನು ಮೈಸೂರಿನಲ್ಲಿ ಓದುತ್ತಿದ್ದ ವೇಳೆ ಸಿನಿಮಾ ನೋಡಲು ಶಾಂತಲಾ ಚಿತ್ರಮಂದಿರಕ್ಕೆ ಬರುತ್ತಿದ್ದೆ. ಆ ದಿನಗಳನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ. ದಯವಿಟ್ಟು ಥಿಯೇಟರ್ ಮುಚ್ಚಬೇಡಿ’ ಎಂದಿದ್ದಾರೆ. ಜನರು ಶಾಂತಲಾ ಚಿತ್ರಮಂದಿರವನ್ನು ಎಷ್ಟು ಪ್ರೀತಿಸಿದ್ದರು ಎಂಬುದು ನಮಗೆ ಈಗ ಗೊತ್ತಾಗಿದೆ. ಇದುವರೆಗೆ ಚಿತ್ರಮಂದಿರವನ್ನು ಪ್ರೋತ್ಸಾಹಿಸಿ, ಪ್ರೀತಿ ಸಿದ ಜನರಿಗೆ ಕೃತಜ್ಞತೆ ಅರ್ಪಿಸುತ್ತಿದ್ದೇವೆ. ಸದ್ಯಕ್ಕೆ ಹೊಸ ಚಿತ್ರಮಂದಿರ ಮಾಡುವುದಿಲ್ಲ.
ಮುಂದೇನಾಗುತ್ತದೊಗೊತ್ತಿಲ್ಲ. ಒಂದು ವೇಳೆ ಟ್ರಸ್ಟ್‍ನವರು ಮುಂದು ವರೆಸಿ ಎಂದು ಹೇಳಿದರೆ ಖಂಡಿತ ಮುಂದು ವರೆಸುತ್ತೇವೆ ಎಂದರು. 1972ರಲ್ಲಿ ವರನಟ ಡಾ.ರಾಜ್‍ಕುಮಾರ್ ಅಭಿನಯದ `ಬಂಗಾರದ ಪಂಜರ’ ಸಿನಿಮಾ ಮೂಲಕ ಆರಂಭವಾದ ನಮ್ಮ ಪಯಣ, ನಟ ರಮೇಶ್ ಅರವಿಂದ್ ಅಭಿನಯದ `ಶಿವಾಜಿ ಸೂರತ್ಕಲ್’ವರೆಗೂ ಸಾಗಿ ಬಂದಿದೆ. ಆರಂಭದಲ್ಲಿ ಮುಂದಿನ ನೆಲ ಹಾಸಿಗೆ 1 ರೂ., ಕೆಳಗಿನ ಕುರ್ಚಿಗೆ 2 ರೂ. ಮತ್ತು ಬಾಲ್ಕನಿಗೆ 3 ರೂ. ಇತ್ತು. ಇತ್ತೀಚೆಗೆ ಬಾಲ್ಕನಿಗೆ 100 ರೂ., ಕೆಳಮಹಡಿಗೆ 80 ರೂ. ದರ ನಿಗದಿಯಾಗಿತ್ತು. ಈ ಚಿತ್ರ ಮಂದಿರದಲ್ಲಿ ಅಮೆರಿಕಾ ಅಮೆರಿಕಾ, ಒಲ ವಿನ ಉಡುಗೊರೆ, ಟಗರು ಮತ್ತಿತರೆ ಸಿನಿಮಾಗಳು 30-35 ವಾರ ಪ್ರದರ್ಶನ ಕಂಡಿವೆ ಎಂದು ವಿವರಿಸಿದರು.
ಗೀತೆಗೆ ಭಾವುಕ: ಇದಕ್ಕೂ ಮುನ್ನ ಚಿತ್ರಮಂದಿರ ಆರಂಭವಾದ ದಿನದಿಂದ ಇಂದಿನವರೆಗೂ ಪ್ರದರ್ಶನ ಮೊದಲು `ನಮೋ ವೆಂಕಟೇಶ, ನಮೋ ತಿರುಮ ಲೇಶ’ ಗೀತೆ ಹಾಕಲಾಗುತ್ತಿತ್ತು. ಬೆಳ್ಳಿತೆರೆ ಮುಂದಿನ ರಕ್ಷಣಾ ಪರದೆ ನಿಧಾನವಾಗಿ ಮೇಲಕ್ಕೇರುತ್ತಿತ್ತು. ಹಾಡು ಮುಗಿಯುವ ವೇಳೆಗೆ ಪರದೆಯೂ ಮೇಲಕ್ಕೇರಿ ನಿಲ್ಲು ತ್ತಿತ್ತು. ಹಲವು ಚಿತ್ರಾಸಕ್ತರಿಗೆ ತಿರುಪತಿ ತಿಮ್ಮಪ್ಪನ ಚಿತ್ರ ಪ್ರೊಜೆಕ್ಟರ್‍ನಿಂದ ಪರದೆ ಮೇಲೆ ಬಿದ್ದು, ಮಡಿಕೆಗಳ ಪರದೆ ನಿಧಾನ ವಾಗಿ ಮೇಲಕ್ಕೇರಿ ತಾರಸಿಗೆ ಅಂಟಿಕೊಳ್ಳುವು ದನ್ನು ನೋಡುವುದೇ ಒಂದು ಸೊಗಸು.
ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚು ತ್ತಿರುವುದರಿಂದ ಇಂದು ಅದೇ `ನಮೋ ವೆಂಕಟೇಶ’ ಭಕ್ತಿಗೀತೆಯನ್ನು ಪ್ಲೇ ಮಾಡ ಲಾಯಿತು. ಆಗ ಮಾಲೀಕರ ಕುಟುಂಬ ದವರು ಭಾವುಕರಾದರು. ಅವರೆಲ್ಲರ ಕಣ್ಣಲ್ಲಿ ನೀರು ಜಿನುಗಿದವು. ಪಾಲುದಾರರಾದ ಮಧು ಸೂದನ, ಅನಿಲ್, ಹನುಮಂತು, ಪ್ರಕಾಶ್, ವ್ಯವ ಸ್ಥಾಪಕ ದೇವರಾಜ್ ಗೋಷ್ಠಿಯಲ್ಲಿದ್ದರು.