ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಚಾಮರಾಜನಗರ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

July 17, 2021

ಹನೂರು, ಜು.16(ಸೋಮು)-ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಹನೂರು ಹಾಗೂ ರಾಮಾಪುರ ಬ್ಲಾಕ್ ಕಾಂಗ್ರೆಸ್‍ನಿಂದ ಪಟ್ಟಣದಲ್ಲಿ ಪ್ರತಿಭಟಿಸಲಾಯಿತು.

ಪಟ್ಟಣದ ಮಹದೇಶ್ವರ ಕ್ರೀಡಾಂಗಣ ದಿಂದ ಸೈಕಲ್ ಹಾಗೂ ಎತ್ತಿನ ಗಾಡಿಗಳ ಮೂಲಕ ಪ್ರತಿಭಟನಾ ಜಾಥಾ ಆರಂಭಿ ಸಿದ ಕಾರ್ಯಕರ್ತರು, ಖಾಸಗಿ ಬಸ್ ನಿಲ್ದಾಣ ವೃತ್ತದಲ್ಲಿ ಕೆಲಕಾಲ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಬಳಿಕ ಮೆರವಣಿಗೆ ಮೂಲಕ ಸಾಗಿ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿ ಪ್ರತಿಭಟಿಸಿದರು.

ಶಾಸಕ ಆರ್.ನರೇಂದ್ರ ಮಾತನಾಡಿ, ಬಿಜೆಪಿಯವರು ತಮ್ಮ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಚ್ಛೆ ದಿನ ಬರುತ್ತದೆ ಎಂದು ಹೇಳಿದರು. ಆದರೆ ಇಂದು ಪೆಟ್ರೋಲ್, ಡೀಸೆಲ್ ಬೆಲೆ ನೂರರ ಗಡಿ ದಾಟಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುವಂತೆ ಮಾಡಿದೆ. ಬಡವರು, ಮಧ್ಯಮ ವರ್ಗದವರು ಸೇರಿದಂತೆ ದೇಶದ ಜನತೆಯನ್ನು ಆರ್ಥಿಕ ದುಸ್ಥಿತಿಗೆ ತಳ್ಳಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ತೋರುತ್ತದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕೊರೊನಾ ನೆಪದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ. ಅಲ್ಲದೆ ದೇಶದಲ್ಲಿ ಕೊರೊನಾ ಸಂಕಷ್ಟ ನಿರ್ವಹಿಸುವಲ್ಲಿಯೂ ವಿಫಲಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರೀಸ್ವಾಮಿ, ಜಿಪಂ ಮಾಜಿ ಉಪಾ ಧ್ಯಕ್ಷ ಬಸವರಾಜು, ದೇವರಾಜು, ಚಾಮುಲ್ ಮಾಜಿ ನಿರ್ದೇಶಕ ನಂಜುಂಡ ಸ್ವಾಮಿ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್ ದೊರೆರಾಜ್, ಸದಸ್ಯ ಮಾದೇಶ್ ಗುಂಡಾ ಪುರ, ತಾಪಂ ಮಾಜಿ ಸದಸ್ಯ ಜವಾದ್ ಅಹಮದ್, ನಟರಾಜು, ಮುಖಂಡರಾದ ಸಿದ್ದರಾಜು, ಪುಟ್ಟ ರಾಜು, ಪಾಳ್ಯಕೃಷ್ಣ, ಮುರುಡೇಶ್ವರ ಸ್ವಾಮಿ, ಪಪಂ ಸದಸ್ಯರು, ವಿವಿಧ ಗ್ರಾಮ ಗಳ ಮುಖಂಡರು, ಕಾರ್ಯಕರ್ತರಿದ್ದರು.

Translate »