ಟಿಕೆಟ್ ಹಂಚಿಕೆ ಮುನ್ನವೇ ಬಂಡಾಯ ಶಮನಕ್ಕೆ ಕಾಂಗ್ರೆಸ್ ಕಾರ್ಯತಂತ್ರ
News

ಟಿಕೆಟ್ ಹಂಚಿಕೆ ಮುನ್ನವೇ ಬಂಡಾಯ ಶಮನಕ್ಕೆ ಕಾಂಗ್ರೆಸ್ ಕಾರ್ಯತಂತ್ರ

December 6, 2022

ಬೆಂಗಳೂರು, ಡಿ.5 (ಕೆಎಂಶಿ)-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮುನ್ನ ಆಯಾ ಕ್ಷೇತ್ರಗಳ ಬಂಡಾಯವನ್ನು ಶಮನಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಗಳಿಂದ ರಾಜ್ಯ ನಾಯಕರು ಹೌಹಾರಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಕನಿಷ್ಠ 3 ರಿಂದ 24 ಆಕಾಂಕ್ಷಿಗಳು ಇದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಂಡಾಯ ಏಳಬಾರದೆಂಬ ಉದ್ದೇಶದಿಂದ ಇದೇ 15 ರಿಂದ ಪ್ರತಿ ಕ್ಷೇತ್ರದ ಆಕಾಂಕ್ಷಿಗಳ ಸಭೆ ಕರೆಯಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ದಂಡೇ ಇರುವುದರಿಂದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಅಧಿಕೃತ ಅಭ್ಯರ್ಥಿಗಳ ವಿರುದ್ಧ ಟಿಕೆಟ್ ದೊರೆಯದವರು ಬಂಡಾಯ ಏಳಬಾರದೆಂಬ ಕಾರಣಕ್ಕೆ ಪ್ರತಿ ಕ್ಷೇತ್ರದ ಆಕಾಂಕ್ಷಿಗಳ ಸಭೆಯನ್ನು ರಾಜ್ಯ ನಾಯಕರು ಕರೆದಿದ್ದಾರೆ.  ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷ 3 ರಿಂದ ಐದು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ತದನಂತರ ಅಲ್ಪಾವಧಿಯಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ ನಂತರವೂ ಒಂದು ಸಮೀಕ್ಷೆ ನಡೆದಿದೆ. ಈ ಸಮೀಕ್ಷೆಗಳನ್ನು ಮುಂದಿಟ್ಟುಕೊಂಡೇ ಅಭ್ಯರ್ಥಿ ಆಯ್ಕೆ ಮಾಡುವುದು ಮತ್ತು ಟಿಕೆಟ್ ದೊರೆಯದವರಿಗೆ ಸಮಾಧಾನಪಡಿಸಿ, ಪಕ್ಷದ ಪರ ಕೆಲಸ ಮಾಡುವಂತೆ ಅವರ ಮನವೊಲಿಸುವ ಕಾರ್ಯ ನಡೆಯಲಿದೆ. ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಸಾರಥ್ಯದಲ್ಲಿ ಸಭೆ ನಡೆಯ ಲಿದ್ದು, ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಭಾಗವಹಿ ಸಲಿದ್ದಾರೆ. ಪೂರ್ವ ಸಮೀಕ್ಷೆಯಲ್ಲಿ ಬಂದಿರುವ ವರದಿಯನ್ನಾಧಾರವಾಗಿಟ್ಟುಕೊಂಡು ನಿಮ್ಮ ಕ್ಷೇತ್ರದಲ್ಲಿ ಇಂತಹವರಿಗೆ ಜನ ಬೆಂಬಲವಿದೆ. ನಾವು ಅವರನ್ನೇ ಅಭ್ಯರ್ಥಿಯನ್ನಾಗಿ ಪರಿಗಣಿಸಬೇಕೆಂದು ವರಿಷ್ಠರಿಗೆ ಶಿಫಾರಸು ಮಾಡುತ್ತೇವೆ.

ನಿಮಗೆ ಸ್ಥಳೀಯವಾಗಿ ಮತದಾರರ ಬೆಂಬಲ ಇಲ್ಲದಿರುವುದರಿಂದ ನೀವು ಉಳಿದ ಅನ್ಯ ಚುನಾವಣೆಗಳ ಕಡೆ ಗಮನ ಹರಿಸಿ, ಇದೀಗ ಪಕ್ಷದ ಅಭ್ಯರ್ಥಿ ಪರ ಒಗ್ಗಟ್ಟಿನಿಂದ ಕೆಲಸಮಾಡಿ ಎಂದು ಟಿಕೆಟ್ ದೊರೆಯದ ಆಕಾಂಕ್ಷಿಗಳಿಗೆ ನಾಯಕರು ವಾಸ್ತವಾಂಶವನ್ನು ವಿವರಿಸಿ, ಅವರ ಮನವೊಲಿಸಲಿದ್ದಾರೆ.
2023ರ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದೆ. ಇಂತಹ ಭವಿಷ್ಯವನ್ನು ನಾವುಗಳು ಹಾಳು ಮಾಡಿಕೊಳ್ಳಬಾರದು. ಅಭ್ಯರ್ಥಿ ಯಾರೇ ಆಗಲಿ, ಅವರ ಪರ ಕೆಲಸ ಮಾಡಿ, ಪಕ್ಷವನ್ನು ಮೊದಲು ಅಧಿಕಾರಕ್ಕೆ ತರೋಣ, ನಂತರ ಅದರಲ್ಲಿ ನಾವೇಲ್ಲಾ ಭಾಗಿಯಾಗೋಣ ಎಂದು ತಿಳಿಹೇಳಲೆಂದೇ ಸಭೆ ಕರೆಯಲಾಗಿದೆ.

ಪ್ರತಿ ದಿನ ಒಂದ ರಿಂದ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಪ್ರತಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳ ಜೊತೆ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಪೂರ್ವ ಸಮೀಕ್ಷೆ ವರದಿಯ ಆಧಾರದ ಮೇಲೆ ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದ ನೂರೈವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಕುರಿತು ಕೆಪಿಸಿಸಿ ಪ್ರಾಥಮಿಕ ಚರ್ಚೆ ನಡೆಸಿದೆ. ಆದರೆ ಚುನಾವಣಾ ಕಣದಲ್ಲಿ ಮುಂದಿರುವವರು ಯಾರು ಎಂಬುದರ ಆಧಾರದ ಮೇಲೆ ಟಿಕೆಟ್ ಹಂಚಿಕೆ ಕಾರ್ಯವನ್ನು ಪೂರ್ಣಗೊಳಿಸಿ ದರೆ, ಸ್ಪರ್ಧಿಸಲು ಪಕ್ಷದ ಟಿಕೆಟ್ ಸಿಗದವರು ಅಸಮಾಧಾನಗೊಳ್ಳುತ್ತಾರೆ. ಈ ಪೈಕಿ ಹಲವರು ಬೇರೆ ಪಕ್ಷಗಳಿಗೆ ಹೋಗುವ ಇಲ್ಲವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಸಾಧ್ಯತೆಗಳು ಸ್ಪಷ್ಟವಾಗಿವೆ. ಹೀಗಾಗಿ ಆಯಾ ಕ್ಷೇತ್ರದಲ್ಲಿ ಯಾರಿಗೆ ಪಕ್ಷದ ಟಿಕೆಟ್ ನೀಡುತ್ತೇವೆ ಎಂಬುದನ್ನು ನಿರ್ಧರಿಸುವ ಮುನ್ನ ಬೇರೆ ಪಕ್ಷಗಳಿಗೆ ಹೋಗುವ, ಬಂಡಾಯವೇಳುವ ಸಾಧ್ಯತೆ ಇರುವವರನ್ನು ಕರೆಸಿ ಚರ್ಚಿಸುವುದು ಕೆಪಿಸಿಸಿ ಯೋಚನೆಯಾಗಿದೆ.

Translate »