ಕಾಂಗ್ರೆಸ್‍ಗೆ ಒಲಿದ ರಾಜರಾಜೇಶ್ವರಿ
ಮೈಸೂರು

ಕಾಂಗ್ರೆಸ್‍ಗೆ ಒಲಿದ ರಾಜರಾಜೇಶ್ವರಿ

June 1, 2018

ಬೆಂಗಳೂರು: ರಾಜ್ಯದಲ್ಲಿ ಮೊದಲಿಗೆ ನಡೆದ ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮರು ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್‍ನ ಮುನಿರತ್ನ 108064 ಮತ ಪಡೆದು, ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರನ್ನು 25492 ಮತಗಳ ಅಂತರದಿಂದ ಪರಾಭವಗೊಳಿಸಿ, ಮರು ಆಯ್ಕೆಗೊಂಡಿದ್ದಾರೆ.

ಜೆಡಿಎಸ್‍ನ ರಾಮಚಂದ್ರ 60,360 ಮತ ಪಡೆದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಿಂದ ಆ ಪಕ್ಷ ವಿಧಾನಸಭೆಯಲ್ಲಿ 78 ಸಂಖ್ಯಾ ಬಲ ಉಳಿಸಿಕೊಂಡಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿದ್ದರೂ, ಈ ಕ್ಷೇತ್ರದಲ್ಲಿ ವೈರಿಗಳ ರೀತಿ ಯಲ್ಲಿ ಪೈಪೋಟಿ ನಡೆಸಿದರು. ಚುನಾ ವಣೆಗೂ ಮುನ್ನ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಪ್ರಯತ್ನ ನಡೆಸಿದರಾದರೂ, ಅದು ಫಲಪ್ರದವಾಗಲಿಲ್ಲ. ಒಂದು ಹಂತದಲ್ಲಿ ಆರ್.ಆರ್.ನಗರವನ್ನು ತಮಗೆ ಬಿಟ್ಟುಕೊಡು ವಂತೆ, ಜಯನಗರ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್‍ಗೆ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು. ಆದರೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳೇ ಚುನಾವಣೆ ಎದುರಿಸಿ, ಅದೇ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಮತ ಎಣ ಕೆ ಆರಂಭದಿಂದ ಕೊನೆಯವರೆಗೂ, ಮುನಿರತ್ನ ಅವರೇ ಅಂತರವನ್ನು ಕಾಯ್ದುಕೊಂಡಿದ್ದರು. ಒಂದು ಹಂತದಲ್ಲಿ ಅವರ ಅಂತರ 50 ಸಾವಿರ ಮುಟ್ಟಿತ್ತು. ಆದರೆ ಕೊನೆ ಸುತ್ತಿಗೆ ಬರುವ ವೇಳೆಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಹೆಚ್ಚು ಮತ ಪಡೆದಿದ್ದರಿಂದ ಅವರ ಅಂತರ ಕುಸಿದಿದ್ದರೂ, ಗೆಲುವು ಸಾಧಿಸಿದರು.

ಪ್ರಸ್ತುತ ವಿಧಾನಸಭೆಯ 221 ಕ್ಷೇತ್ರಗಳಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37 ಹಾಗೂ ಇಬ್ಬರು ಪಕ್ಷೇತರರಿದ್ದಾರೆ. ಕಾಂಗ್ರೆಸ್‍ನ ಮುನಿರತ್ನ- 10,8,064, ಬಿಜೆಪಿಯ ಮುನಿರಾಜು-82,572, ಜೆಡಿಎಸ್‍ನ ರಾಮಚಂದ್ರ-60,360. ಮುನಿರತ್ನಗೆ 25,492 ಮತಗಳ ಅಂತರದ ಗೆಲುವು. ಹುಚ್ಚ ವೆಂಕಟ್‍ಗೆ 193 ಮತಗಳು, ನೋಟಾಗೆ 799 ಮತಗಳು ಚಲಾವಣೆಯಾಗಿವೆ. ಗೆಲುವು ಖಾತ್ರಿಯಾಗುತ್ತಿದ್ದಂತೆ ಮುನಿರತ್ನ ಅವರು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರೊಂದಿಗೆ ಸುದ್ದಿಗೋಷ್ಠಿ ಮಾಡಿ, ಮತದಾರರರಿಗೆ ಧನ್ಯವಾದ ಸಲ್ಲಿಸಿದರು. ನಾನು ಈ ಜನ್ಮದಲ್ಲಿ ನಿಮ್ಮ ಋಣ ತೀರಿಸುವುದು ಅಸಾಧ್ಯ ಎಂದರು.

Translate »