ಕೋಟ್ಯಾಂತರ ರೂ. ಮೌಲ್ಯದ ಹಳೇ ನೋಟು ಬದಲಾವಣೆ ಪ್ರಕರಣ: ಡಿಕೆಶಿ ಬ್ರದರ್ಸ್ ಆಪ್ತರ ಮೇಲೆ ಸಿಬಿಐ ದಾಳಿ
ಮೈಸೂರು

ಕೋಟ್ಯಾಂತರ ರೂ. ಮೌಲ್ಯದ ಹಳೇ ನೋಟು ಬದಲಾವಣೆ ಪ್ರಕರಣ: ಡಿಕೆಶಿ ಬ್ರದರ್ಸ್ ಆಪ್ತರ ಮೇಲೆ ಸಿಬಿಐ ದಾಳಿ

June 1, 2018

ಬೆಂಗಳೂರು: ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಹಳೇ ನೋಟು ಗಳನ್ನು ಬದಲಾವಣೆ ಮಾಡಿದ ಆರೋ ಪದ ಮೇಲೆ ಕಾಂಗ್ರೆಸ್‍ನ ಹಿರಿಯ ಮುಖಂಡ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಅವರ ಸಹೋದರ ಸಂಸದ ಡಿ.ಕೆ.ಸುರೇಶ್‍ಗೆ ಬಂಧನದ ಭೀತಿ ಎದುರಾಗಿದೆ.

ನೋಟು ಅಮಾನ್ಯೀಕರಣಕ್ಕೆ ಸಂಬಂಧಿ ಸಿದಂತೆ ರಾಮನಗರದ ಕಾರ್ಪೋರೇಷನ್ ಬ್ಯಾಂಕ್, ರಾಷ್ಟ್ರೀಕೃತ ಮತ್ತೊಂದು ಬ್ಯಾಂಕ್ ಹಾಗೂ ಕನಕಪುರ, ರಾಮನಗರ ವ್ಯಾಪ್ತಿಯ ಕೆಲವು ಸಹಕಾರಿ ಬ್ಯಾಂಕುಗಳ ಸಿಬ್ಬಂದಿ ಹಾಗೂ ಅಮಾನ್ಯೀಕರಣಕ್ಕೆ ಸಹಕಾರ ನೀಡಿದವರ ಮೇಲೆ ಸಿಬಿಐ ತನಿಖೆ ಕೈಗೆತ್ತಿ ಕೊಂಡಿದೆ. ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಜಯಪ್ರಕಾಶ್, ಅಲ್ಲದೆ, ಶಿವಾನಂದ ಪದ್ಮ ನಾಭಯ್ಯ, ನಂಜಯ್ಯ ಎಂಬ ವ್ಯಕ್ತಿಗಳಿಗೆ ಸೇರಿದ ಮನೆ, ಕಚೇರಿ ಮತ್ತು ಚುನಾವಣಾ ಕೋಶದ ಕಚೇರಿಯ ಮೇಲೂ ದಾಳಿ ನಡೆಸಿ, ದಾಖಲೆಪತ್ರಗಳನ್ನು ವಶಪಡಿಸಿ ಕೊಂಡಿದ್ದಾರೆ. ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕರು ಆ ಸಂದರ್ಭದಲ್ಲಿ ಹತ್ತು ಲಕ್ಷ ರೂ. ಮೌಲ್ಯದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ, ಬದಲಾವಣೆ ಮಾಡಿ ಕೊಟ್ಟಿದ್ದಾರೆ. ಈ ಸಂಬಂಧ ಬಂದ ದೂರನ್ನು ಆಧರಿಸಿ, ಸಿಬಿಐ ಬೆಂಗಳೂರು, ಕನಕಪುರ, ರಾಮನಗರ ವ್ಯಾಪ್ತಿಯಲ್ಲಿ ತಡರಾತ್ರಿಯಿಂದ ತನಿಖೆ ಆರಂಭಿಸಿದೆ. ಆದಾಯಕ್ಕಿಂತ ಹೆಚ್ಚು ಸಂಪನ್ಮೂಲ ಸಂಗ್ರಹಿಸಿದ್ದಾರೆ ಎಂದು ಈಗಾಗಲೇ ಆದಾಯ ತೆರಿಗೆ ಇಲಾಖೆ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಹಾಗೂ ಅವರ ಆಪ್ತರ ನೂರಕ್ಕೂ ಹೆಚ್ಚು ಮಂದಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆದಾಯ ತೆರಿಗೆ ಇಲಾಖೆ ನೀಡಿದ ವರದಿ ಆಧಾ ರದ ಮೇಲೆ ಇಡಿ ಕೆಲವು ಪ್ರಕರಣಗಳನ್ನು ತನಿಖೆಗೆ ಕೈಗೆತ್ತಿಕೊಂಡಿದೆ.

ಇಡಿ ನೀಡಿದ ಸುಳಿವಿನ ಆಧಾರದ ಮೇಲೆ ಸಿಬಿಐ ಈಗ ನೋಟು ಬದಲಾ ವಣೆ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದೆ. ಸಿಬಿಐ ತನಿಖೆ ಕೈಗೆತ್ತಿಕೊಂಡು ಕೆಲವರ ವಿರುದ್ಧ ನೋಟೀಸ್ ಹಾಗೂ ಸರ್ಚ್‍ವಾರೆಂಟ್ ನೀಡುತ್ತಿದ್ದಂತೆ ಡಿ.ಕೆ. ಸಹೋದರರು ಎಚ್ಚೆತ್ತು ಕಾನೂನು ತಜ್ಞ ರೊಟ್ಟಿಗೆ ಸಮಾಲೋಚನೆ ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರ ಸಂಚು ಹೂಡಿದೆ…

ಸಿಬಿಐ ತಮ್ಮ ಆಪ್ತರ ಮೇಲೆ ದಾಳಿ ನಡೆಸುತ್ತಿದ್ದಂತೆ ಸದಾ ಶಿವನಗರ ನಿವಾಸದಲ್ಲಿ ಇಂದು ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್ ಮತ್ತು ಸುರೇಶ್ ‘ನಮ್ಮ ಮೇಲೆ ಕೇಂದ್ರ ಸರ್ಕಾರ ಸಂಚು ಹೂಡಿದೆ, 11 ಮಂದಿ ನಮ್ಮ ಆಪ್ತರ ಮನೆ ಮೇಲೆ ಸರ್ಚ್ ವಾರಂಟ್ ಹೊರಡಿಸಲಾಗಿದೆ’ ಎಂದು ಆರೋಪಿ ಸಿದರು. ರಾಜಕೀಯವಾಗಿ ನಮ್ಮನ್ನು ತೇಜೋವಧೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಈ ತಂತ್ರ ಹೆಣೆದಿದ್ದಾರೆ. ನಾವು ಕಾನೂನು ಹೋರಾಟದ ಮೂಲಕ ಇದಕ್ಕೆ ಉತ್ತರ ಕೊಡುತ್ತೇವೆ ಎಂದು ಹೇಳಿದ್ದರು. ನರೇಂದ್ರ ಮೋದಿ, ಅಮಿತ್ ಷಾ ಅವರು ನಮ್ಮ ರಾಜಕೀಯ ಬೆಳವಣ ಗೆ ಸಹಿಸದೆ ಸಿಬಿಐನಿಂದ ನಮ್ಮನ್ನು ಟಾರ್ಗೆಟ್ ಮಾಡುವ ಸಂಚು ರೂಪಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ಅವರ ವಿರುದ್ಧ ಧ್ವನಿ ಎತ್ತುವವರನ್ನು ದಮನ ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಐಟಿ ದುರ್ಬಳಕೆ ಯಾಗಿರುವುದನ್ನು ನಾವು ಕಾಣಬಹುದು. ಐಟಿ ಮೂಲಕ ಬೆದರಿಕೆ ಹಾಕಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ ಎಂದರು. ನಮ್ಮ ಕುಟುಂಬದ ಮೇಲೆ ಸರ್ಚ್ ವಾರೆಂಟ್ ಪಡೆದು ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ಮಾಡಿಸುತ್ತಿದ್ದಾರೆ. ನಿಮ್ಮ ಈ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಸವಾಲು ಹಾಕಿದರು. ಅವರ ಧೂತರ ಮೂಲಕ ನನಗೆ ಹಾಗೂ ನನ್ನ ಸಹೋದರ ಡಿ.ಕೆ.ಶಿವಕುಮಾರ್ ಮೇಲೆ

ಬೆದರಿಕೆ ಹಾಕಿದ್ದಾರೆ. ಐಟಿ, ಇಡಿ, ಸಿಬಿಐ ಬಳಕೆ ಮಾಡಿ ಡಿಕೆಶಿ ಕುಟುಂಬದ ಮೇಲೆ ಬೆದರಿಕೆ ಹಾಕಲಾಗುತ್ತಿದೆ. ಅವರ ವಿರುದ್ಧ ಧ್ವನಿ ಎತ್ತುವವರ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ನಮ್ಮ ಮೇಲೆ ಯಾವ ಕೇಸ್ ಆಧಾರ ಇಟ್ಟುಕೊಂಡು ಸರ್ಚ್ ವಾರಂಟ್ ಪಡೆದಿದ್ದಾರೆಂದು ಗೊತ್ತಾಗಿಲ್ಲ. ಮೇನ್ ಟಾರ್ಗೆಟ್ ನಾನು ಮತ್ತು ಶಿವಕುಮಾರ್. ಇದರ ಜತೆಗೆ ಕುಟುಂಬದ ನಮ್ಮ 11 ಮಂದಿಯ ಮೇಲೆ ಸರ್ಚ್ ವಾರಂಟ್ ಪಡೆದಿದ್ದಾರೆಂದು ಗೊತ್ತಾಗಿದೆ ಎಂದು ಸುರೇಶ್ ತಿಳಿಸಿದರು. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಈವರೆಗೆ ನಮಗೆ ಯಾವುದೇ ವಾರಂಟ್ ಬಂದಿಲ್ಲ. ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಶರಣಾಗುವ ಮಾತೇ ಇಲ್ಲ ಎಂದು ಹೇಳಿದರು. ನಾವು ಯಾವುದೇ ತಪ್ಪು ಮಾಡಿಲ್ಲ. ಕಾನೂನಿನ ಚೌಕಟ್ಟಿನೊಳಗೆ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ಇದು ರಾಜಕೀಯ ಪ್ರೇರಿತ ಕೃತ್ಯ. ರಾಜಕೀಯವಾಗಿ ನಮ್ಮನ್ನು ಮಣ ಸಲು ಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ನ್ಯಾಯಬದ್ಧ ಬದುಕು ಹಾಗೂ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ರಾಜಕೀಯ ಉದ್ದೇಶ ಇಟ್ಟುಕೊಂಡು ನಮಗೆ ಬೆಂಬಲ ಕೊಟ್ಟ ಕುಟುಂಬದವರಿಗೆ ಚಿತ್ರಹಿಂಸೆ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.

ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಸುಳ್ಳು ಕೇಸು ಮೂಲಕ ಜೈಲಿಗೆ ಕಳುಹಿಸುತ್ತೇವೆ ಎನ್ನುವುದು ನಿಮ್ಮ ಭ್ರಮೆ. ನಮಗೆ ಯಾರು ರಕ್ಷಣೆ ಕೊಡುತ್ತಾರೆ ಎಂಬುದು ಬೇರೆ ವಿಚಾರ. ನಮಗೆ ಭಗವಂತ ಇದ್ದಾನೆ ಎಂಬ ನಂಬಿಕೆ ಇದೆ. ನಮ್ಮ ಜನ ಇದ್ದಾರೆ. ಸರ್ಚ್ ವಾರಂಟ್ ಸುದ್ದಿ ತಿಳಿದು ಜನರು ನಮ್ಮ ಮನೆ ಮುಂದೆ ದೌಡಾಯಿಸಿದ್ದಾರೆ. ಇವರೇ ನಮಗೆ ಆಸ್ತಿ ಎಂದರು. ತಮ್ಮ ವಿರುದ್ಧ ನಿಲ್ಲುವವರನ್ನು ಹತ್ತಿಕ್ಕಲು ಕೇಂದ್ರದ ನಾಯಕರು ಮಾಡುತ್ತಿದ್ದಾರೆ. ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕು. ಆದರೆ ಈ ರೀತಿ ದುರ್ಬಳಕೆ ಮಾಡುವುದು ಸರಿಯಲ್ಲ. ಈ ಹಿಂದೆಯೂ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ದಾಳಿ ಸಂದರ್ಭದಲ್ಲಿ ಹಣ ಸಿಗದಿದ್ದರೂ, ಒತ್ತಡ ಹೇರಿ ಹಣ ಇದೆ ಎಂದು ಪ್ರಕರಣ ದಾಖಲಿಸುತ್ತಿದ್ದಾರೆ.

ಇದೀಗ ನಮ್ಮ ಮನೆಗಳ ಮೇಲೂ ಸರ್ಚ್ ವಾರಂಟ್ ಹೊರಡಿಸಿ, ನಮ್ಮ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಈ ಬೆದರಿಕೆಗಳಿಗೆ ನಾವು ಅಲುಗಾಡುವುದಿಲ್ಲ. ಏನೇ ಇದ್ದರೂ ನಾವು ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ. ಎಲ್ಲಿಯೂ ತಪ್ಪು ಹೆಜ್ಜೆ ಇಟ್ಟಿಲ್ಲ. ಸದ್ಯ 11 ಜನರ ಮೇಲೆ ಯಾವ ಕೇಸನ್ನು ಆಧಾರವಾಗಿಟ್ಟು ಕೊಂಡು ದಾಳಿ ನಡೆಸುತ್ತಾರೆ ಎನ್ನುವುದು ಗೊತ್ತಿಲ್ಲ. ಒಟ್ಟಾರೆ ದಾಳಿ ನಡೆಯುತ್ತದೆ ಎನ್ನುವುದು ತಿಳಿದಿದೆ. ನಾನು ಹಾಗೂ ಡಿಕೆಶಿ ಕೇಂದ್ರ ಸರ್ಕಾರದ ಮುಖ್ಯ ಟಾರ್ಗೆಟ್. 11 ಮಂದಿಯಲ್ಲಿ ಯಾರ್ಯಾರು ಇದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.

Translate »