ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ  ವಾಪಸ್‍ಗೆ ಕರ್ನಾಟಕ ಪ್ರಜಾ ಪಾರ್ಟಿ ಆಗ್ರಹ
ಮೈಸೂರು

ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ವಾಪಸ್‍ಗೆ ಕರ್ನಾಟಕ ಪ್ರಜಾ ಪಾರ್ಟಿ ಆಗ್ರಹ

September 26, 2021

ಮೈಸೂರು,ಸೆ.25(ಎಂಟಿವೈ)-ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆತುರದಲ್ಲಿ ಜಾರಿಗೊಳಿಸಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳು ಸಂರಕ್ಷಣೆ ವಿಧೇಯಕವನ್ನು ಹಿಂಪಡೆಯುವಂತೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ರಾಜ್ಯಾಧ್ಯಕ್ಷ ಬಿ.ಶಿವಣ್ಣ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಸÀರ್ಕಾರದ ಕರ್ತವ್ಯ. ಅಲ್ಲದೆ, ನ್ಯಾಯಾಲಯದ ಆದೇಶವನ್ನು ಗೌರವಿಸದೇ ಸರ್ಕಾರ, ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ, ಆತುರದಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯದೇ ಸದನದಲ್ಲಿ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ವಿಧೇಯಕ ಮಂಡಿಸಿರುವುದು ಖಂಡನೀಯ. ರಾಜ್ಯದಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಸಕ್ರಮಗೊಳಿಸಲು ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡನೆ ಮಾಡಿರುವುದು ಸರಿಯಲ್ಲ. ಇದು ನ್ಯಾಯಾಲಯದ ಆದೇಶವನ್ನು ಅಗೌರವಿಸುವಂತದ್ದಾಗಿದೆ. ಜೊತೆಗೆ, ಈ ವಿಧೇಯಕವನ್ನು ರಾಜ್ಯ ಪಾಲರಾಗಲೀ, ನ್ಯಾಯಾಲಯವಾಗಲೀ ಮಾನ್ಯ ಮಾಡುವ ಸಾಧ್ಯತೆಯಿಲ್ಲ. ಅಲ್ಲದೆ, ವಿಧೇಯಕ ಅಂಗೀಕಾರವಾದಲ್ಲಿ ಇನ್ನಷ್ಟು ಅನಧಿಕೃತ ಧಾರ್ಮಿಕ ಕಟ್ಟಡಗಳು ತಲೆಯೆತ್ತಲಿವೆ. ಹೀಗಾಗಿ ವಿಧೇಯಕವನ್ನು ವಾಪಸು ಪಡೆಯಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ತೇಜಸ್ ಪಾಟೀಲ್, ಕೆ.ಜೆ.ಯೋಗೇಶ್‍ಗೌಡ, ಬಿ.ಆರ್.ಲೋಕೇಶ್, ಎಂ.ಕುಮಾರಸ್ವಾಮಿ, ಗಿರೀಶ್ ಉಪಸ್ಥಿತರಿದ್ದರು.

Translate »