7ನೇ ವೇತನ ಆಯೋಗ ರಚನೆ
News

7ನೇ ವೇತನ ಆಯೋಗ ರಚನೆ

November 10, 2022

ಬೆಂಗಳೂರು, ನ. 9(ಕೆಎಂಶಿ)- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿದೆ.

ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗ ರಚಿಸಲಾಗಿದೆ. ಇದರಿಂದ ಮಧ್ಯಂತರ ವರದಿ ತರಿಸಿ, ಮುಂದಿನ ಬಜೆಟ್‍ನಲ್ಲಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ. ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಬೇಕು. ಆದರೆ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅವಧಿಗೂ ಮುನ್ನ ಮೂರು ತಿಂಗಳ ಮುಂಚೆಯೇ ಆಯೋಗ ರಚನೆ ಮಾಡುತ್ತಿದೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರನೇ ವೇತನ ಆಯೋಗ ರಚಿಸಿ, ಅದನ್ನು ಅನುಷ್ಠಾನಗೊಳಿಸಿದ್ದರು. ಈ ಆಯೋಗದ ಶಿಫಾರಸ್ಸಿನ ಮೇಲೆ 2018ರ ಬಜೆಟ್ ಮೂಲಕ ನೌಕರರ ವೇತನ ಮತ್ತು ಭತ್ಯೆಯನ್ನು ಸಿದ್ದರಾಮಯ್ಯ ಹೆಚ್ಚಳ ಮಾಡಿದ್ದರು. ರಾಜ್ಯದಲ್ಲಿ ಸುಮಾರು 5.23 ಲಕ್ಷ ಮಂದಿ ಹಾಲಿ ಸರ್ಕಾರಿ ನೌಕರರಿದ್ದು, ಉಳಿದಂತೆ ಮೂರು ಲಕ್ಷಕ್ಕೂ ಅಧಿಕ ಮಂದಿ ಪಿಂಚಣಿದಾರರು ಮತ್ತು ನಿಗಮ ಮಂಡಳಿ ಪ್ರಾಧಿಕಾರದ ನೌಕರರಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸ್ಸನ್ನು ರಾಜ್ಯ ಸರ್ಕಾರ ಅನು ಷ್ಠಾನಗೊಳಿಸಿದಲ್ಲಿ, ಸರ್ಕಾರದ ಬೊಕ್ಕಸದ ಮೇಲೆ 12 ಸಾವಿರ ಕೋಟಿ ರೂಗಳ ಹೊರೆ ಬೀಳಲಿದೆ. ತುಟ್ಟಿಭತ್ಯೆ ಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸು ವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಬೇಡಿಕೆ ಇರಿಸಿದೆ. ಒಂದು ವೇಳೆ ಬೇಡಿಕೆಯನ್ನು ಅನುಷ್ಠಾನಗೊಳಿಸಿದರೆ, ಮೂಲ ವೇತನದ ಪ್ರಮಾಣ ಶೇಕಡ 30 ರಿಂದ 40ಕ್ಕೆ ಹೆಚ್ಚಳವಾಗಲಿದೆ. ರಾಜ್ಯ ವಿಧಾನಸಭೆಗೆ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆ ಸಂದರ್ಭದಲ್ಲೇ ಏಳನೇ ವೇತನ ಆಯೋಗ ಮಧ್ಯಂತರ ವರದಿಯನ್ನು ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿ, ಈ ಎಂಟು ಲಕ್ಷ ಕುಟುಂಬದ ಲಾಭ ಪಡೆಯಲು ಮುಖ್ಯ ಮಂತ್ರಿಯವರು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಆಯೋಗ ರಚನೆಯಾ ಗುತ್ತದೆ. ಆಯೋಗವು ಬೆಲೆ ಏರಿಕೆ, ಇತರೆ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ, ಕೇಂದ್ರದ ಕ್ರಮಗಳನ್ನು ಪರಿಶೀಲಿಸಿ, ವೇತನ ಪರಿಷ್ಕರಣೆಗೆ ಶಿಫಾರಸ್ಸು ಮಾಡುತ್ತದೆ.

Translate »