ಸಿದ್ದರಾಮಯ್ಯ ರಾಜಕೀಯ ಅಲೆಮಾರಿ
ಚಾಮರಾಜನಗರ

ಸಿದ್ದರಾಮಯ್ಯ ರಾಜಕೀಯ ಅಲೆಮಾರಿ

November 10, 2022

ಚಾಮರಾಜನಗರ, ನ.9- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಕೇವಲ ವೀರಾವೇಶದ ಮಾತುಗಳನ್ನು ಆಡ್ತಾರೆ. ಆತ ರಾಜಕೀಯ ಅಲೆಮಾರಿ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತನಗೆ ಸಹಾಯ ಮಾಡಿದವರನ್ನು ನೆನೆಯವುದಿಲ್ಲ. ಆತನಿಗೆ ಉಪಕಾರ ಸ್ಮರಣೆ ಇಲ್ಲ. ಸಭೆ ಸಮಾರಂಭಗಳಲ್ಲಿ ಕೇವಲ ವೀರಾ ವೇಶದ ಮಾತುಗಳನ್ನು ಆಡುತ್ತಾರೆ ಅಷ್ಟೇ ಎಂದು ತಮ್ಮದೇ ಧಾಟಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಬಾದಾಮಿಗೆ ಹೋದರು. ಈಗ ನನ್ನನ್ನು ಚಾಮರಾಜನಗರ, ಕೋಲಾರ, ಚಿಕ್ಕನಾಯಕನಹಳ್ಳಿ ಎಲ್ಲಾ ಕಡೆ ಸ್ಪರ್ಧಿಸಿ ಎಂದು ಕರೆಯುತ್ತಿದ್ದಾರೆ ಎನ್ನುತ್ತಾರೆ. ಆದರೆ, ಅವರು ನಾನು ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ. ಈ ಮೂಲಕ ಸಿದ್ದರಾಮಯ್ಯ ರಾಜಕೀಯ ಅಲೆಮಾರಿ ಆಗಿದ್ದಾರೆ. ನಿರ್ದಿಷ್ಟವಾಗಿ ಕ್ಷೇತ್ರ ಹೇಳುವುದಕ್ಕೆ ಸಿದ್ದರಾಮಯ್ಯಗೆ ಧೈರ್ಯ ಇಲ್ಲ ಎಂದರು.

ಮರದ ಕತ್ತಿ: ಎಐಸಿಸಿಯಲ್ಲಿ ಏನಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏನು ಕೊಟ್ಟಿದ್ದಾರೆ. ಯುದ್ಧಕ್ಕೆ ಹೋಗು ಎಂದು ಮರದ ಕತ್ತಿ ಕೊಟ್ಟಿದ್ದಾರೆ ಎಂದು ಪ್ರಸಾದ್ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾ ಮಣ್ಣು ಮುಕ್ಕಿದರು. ಮೊದಲು ಪಾರ್ಟಿಯನ್ನು ಕಟ್ಟಲಿ. ಭಾರತ ಜೋಡೋ ಯಾತ್ರೆಗೆ ತೆಲಂಗಾಣದಲ್ಲಿ ಜನರೇ ಇಲ್ಲ.

ಎಂಟು ಲಕ್ಷ ಮೈಸೂರು ಪಾಕ್ ಮಾಡ್ಕೊಂಡು ದಾವಣಗೆರೆಯಲ್ಲಿ ಹುಟ್ಟುಹಬ್ಬ ಮಾಡ್ಕೊಂಡರು. ವಿರೋಧ ಪಕ್ಷದ ನಾಯಕರಾಗಿದ್ದಾರೆ. ಐದು ವರ್ಷ ಸಿಎಂ ಆಗಿದ್ದರು. ಹಿರಿಯ ರಾಜಕಾರಣಿ. ಇಂಥ ಕಡೆ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳೋಕೆ ಧೈರ್ಯ ಇಲ್ಲ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು. ಸತೀಶ್ ಜಾರಕಿಹೊಳಿ ಹಿಂದೂ ಪದ ಕುರಿತು ವಿವಾದಾತ್ಮಕ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿ. ಶ್ರೀನಿವಾಸಪ್ರಸಾದ್, ತಮ್ಮ ಹೇಳಿಕೆ ಕುರಿತು ಕ್ಷಮೆ ಕೇಳುವುದಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಬೇಕಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ. ಅವರ ಬಗ್ಗೆ ಮಾತನಾಡುವುದು ಎಷ್ಟು ಸರಿ. ಪಕ್ಷಾತೀತವಾಗಿ ಎಲ್ಲರೂ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ ಎಂದರು.

Translate »