ಮುಡಾ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ 14 ಕೋಟಿ ಸಾಲ ಪಡೆದ ಭೂಗಳ್ಳರು!
ಮೈಸೂರು

ಮುಡಾ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ 14 ಕೋಟಿ ಸಾಲ ಪಡೆದ ಭೂಗಳ್ಳರು!

November 10, 2022

ಮೈಸೂರು, ನ. 9- ನಕಲಿ ದಾಖಲೆ ಸೃಷ್ಟಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) 5,700 ಚದರಡಿ (285×200 ಅಡಿ) ವಿಸ್ತೀರ್ಣದ ಕೈಗಾ ರಿಕಾ ನಿವೇಶನ ಅಡವಿಟ್ಟು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಬರೋಬ್ಬರಿ 14 ಕೋಟಿ ಸಾಲ ಪಡೆದಿರುವುದಲ್ಲದೇ ಸದರಿ ಸ್ವತ್ತನ್ನು ಬೇರೆ ವ್ಯಕ್ತಿಗೆ ದಾನಪತ್ರದ ಮೂಲಕ ಪರಭಾರೆ ಮಾಡಿರುವ ಭಾರೀ ಅಕ್ರಮ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಆರ್‍ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ಸೂಕ್ತ ದಾಖಲೆಗಳೊಂದಿಗೆ ಹಗರಣವನ್ನು ಬಯಲಿಗೆ ತಂದ ಹಿನ್ನೆಲೆ ಯಲ್ಲಿ ಎಚ್ಚೆತ್ತ ಮುಡಾ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ನಿರ್ದೇಶನದಂತೆ ಪ್ರಾಧಿಕಾರ ನೀಡಿದ ಲಿಖಿತ ದೂರಿನನ್ವಯ ಮೈಸೂರಿನ ವಿದ್ಯಾರಣ್ಯಪುರಂ ಠಾಣೆ ಪೊಲೀಸರು, ನಕಲಿ ದಾಖಲೆ ಸೃಷ್ಟಿಸಿ ವಂಚಿ ಸಿದ್ದ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 420, 465, 468, 471 ರೆಡ್‍ವಿತ್ 34 ರೀತ್ಯಾ ಮಂಗಳವಾರ ಪ್ರಕರಣ ದಾಖಲಿ ಸಿದ್ದಾರೆ. ಮೈಸೂರಿನ ಎಂ. ನಂಜಪ್ಪ, ಹಾಸನದ ಎಲ್.ಜಗದೀಶ್, ಶಶಿ ಹಾಗೂ ಲಕ್ಷ್ಮೇಗೌಡ, ಅಕ್ರಮವಾಗಿ ಮುಡಾ ನಿವೇಶನವನ್ನು ಬ್ಯಾಂಕ್ ಆಫ್ ಬರೋಡಾ ಹಾಸನ ಶಾಖೆಯಲ್ಲಿ ಅಡವಿಟ್ಟು 14 ಕೋಟಿ ರೂ. ಸಾಲ ಪಡೆದಿ ದ್ದಾರೆ. ಇವರ ವಿರುದ್ಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ವಿಶ್ವೇಶ್ವರನಗರದ ಇಂಡಸ್ಟ್ರಿಯಲ್ ಸಬರ್ಬ್ 2ನೇ ಹಂತದ ಬಡಾವಣೆಯ ಲ್ಲಿರುವ 285×200 ಅಡಿಯ ಒಟ್ಟು 5,700 ಚದರಡಿ ವಿಸ್ತೀರ್ಣದ ಕೈಗಾರಿಕಾ ನಿವೇಶನ ಸಂಖ್ಯೆ 36/ಎ ಮುಡಾ ನಿವೇಶನವಿದ್ದು, ಈವರೆಗೂ ಯಾರಿಗೂ ಮಂಜೂರಾಗಿಲ್ಲ ಎಂದು ಮುಡಾ ತಹಸೀಲ್ದಾರ್ ಆರ್. ಮಂಜುನಾಥ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 2016ರಿಂದ ಈವರೆಗೆ ಹಲವು ಬಾರಿ ಹರಾಜು ಮಾಡಿದರೂ ಈವರೆಗೆ ನಿಗದಿತ ದರಕ್ಕೆ ಯಾರೂ ಬಿಡ್ ಮಾಡದ ಕಾರಣ ಈ ನಿವೇಶನ (ಚದ ರಡಿಗೆ 2,600 ರೂ. ಬೆಲೆ ನಿಗದಿಯಾ ಗಿತ್ತು) ಹಾಗೆಯೇ ಬಿದ್ದಿದೆ. ಈ ಹಂತದಲ್ಲಿ ಇಸಿ ತೆಗೆಸಿ ಪರಿಶೀಲಿಸಿದಾಗ 2018ರ ಸೆಪ್ಟೆಂಬರ್ 28ರಂದು ಮೆ. ಆರ್‍ಜೆಡಿಜೆ ಪ್ರಾಪರ್ಟೀಸ್ ಪಾಲುದಾರರಾದ ಜಗದೀಶ್, ಶಶಿ, ಎಂ. ನಂಜಪ್ಪ ಹಾಗೂ ಲಕ್ಷ್ಮೇಗೌಡ ಎಂಬುವರಿಂದ ಬ್ಯಾಂಕ್ ಆಫ್ ಬರೋಡಾ, ಹಾಸನ ಶಾಖೆಯಲ್ಲಿ ಆಧಾರ ಎಂಬು ದಾಗಿ ನೋಂದಣಿಯಾಗಿದ್ದು, 14 ಕೋಟಿ ರೂ. ಸಾಲ ಪಡೆದು ನಂತರ 2018ರ ಅಕ್ಟೋಬರ್ 20ರಂದು ಸಾಲ ಹಿಂತಿರುಗಿ ಸಿರುವ ವಿಷಯ ತಿಳಿಯಿತು ಎಂದು ಮಂಜು ನಾಥ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಸ್ವತ್ತಿನ ಮೇಲೆ ಸಾಲ ಪಡೆಯುವಾಗ ಸಲ್ಲಿಸಲಾಗಿದ್ದ ನಿವೇಶನದ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಒದಗಿಸುವಂತೆ ತಾವು ಬ್ಯಾಂಕ್ ಆಫ್ ಬರೋಡಾ, ಹಾಸನ ಶಾಖಾ ಮ್ಯಾನೇಜರ್‍ಗೆ 2022ರ ಜನವರಿ 13ರಿಂದ ಅಕ್ಟೋಬರ್ 25ರವರೆಗೆ 4 ಬಾರಿ ಪತ್ರ ಬರೆದಿದ್ದರೂ ಅವರಿಂದ ಈವರೆವಿಗೂ ಉತ್ತರ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ನಿವೇಶನ ಸಂಖ್ಯೆ 36/ಎ ಸಂಬಂಧ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ನಿವೇಶನವನ್ನು ಬ್ಯಾಂಕ್‍ನಲ್ಲಿ ಅಡಮಾನ ಇಟ್ಟಿದ್ದಲ್ಲದೇ, ನಂತರ ನಂಜಪ್ಪ ಎಂಬುವರು ಹೇಮಂತಕುಮಾರ್ ಎಂಬುವರಿಗೆ ದಾನಪತ್ರ ಮಾಡಿದ್ದಾರೆ. ಆ ಸಂದರ್ಭ ನೋಂದಾಯಿತವಲ್ಲದ ವಿಲ್ ಯಾ ಮರಣ ಶಾಸನ ಪತ್ರವನ್ನೂ ಸಲ್ಲಿಸಿದ್ದಾರೆಂಬುದು ಆರ್‍ಟಿಐ ಕಾರ್ಯಕರ್ತ ನಾಗೇಂದ್ರ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬಂದಿದೆ ಎಂದು ವಿಶೇಷ ತಹಸೀಲ್ದಾರ್ ಮಂಜುನಾಥ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಾಧಿಕಾರದ ಸುಮಾರು 25 ಕೋಟಿ ರೂ. ಬೆಲೆ ಬಾಳುವ ನಿವೇಶನವನ್ನು ಬ್ಯಾಂಕ್‍ಗೆ ಅಡಮಾನವಿರಿಸಿ ಸಾಲ ಪಡೆದಿರುವ ಬಗ್ಗೆ ಡಿಜಿಟಲ್ ಸಹಿ ಮಾಡಿದ ಆನ್‍ಲೈನ್ ದಾಖಲೆಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ಪಡೆಯಲಾಗಿದೆ. ಪ್ರಾಧಿಕಾರದ ಆಸ್ತಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಚು ನಡೆಸಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರುದಾರರು ಕೋರಿದ ಹಿನ್ನೆಲೆಯಲ್ಲಿ ನಿನ್ನೆ (ಮಂಗಳವಾರ) ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, 2018ರಲ್ಲೇ ಕೋಟ್ಯಾಂತರ ರೂ. ಬೆಲೆ ಬಾಳುವ ಪ್ರಾಧಿಕಾರದ ಸ್ವತ್ತಿನ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‍ನಲ್ಲಿ 14 ಕೋಟಿ ಸಾಲ ಪಡೆದಿದ್ದರೂ, ನಂತರ ಅದನ್ನು ದಾನಪತ್ರದ ಮೂಲಕ ಪರಭಾರೆ ಮಾಡಿದ್ದರೂ, ಆರ್‍ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ 2022ರ ಅಕ್ಟೋಬರ್ 11ರಲ್ಲಿ ಅರ್ಜಿ ಸಲ್ಲಿಸುವವರೆಗೆ ಮುಡಾ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದು ಭಾರೀ ಸಂಶಯ ಮೂಡಿಸಿದೆ.

ಸಾಲ ನೀಡಿದ ಬ್ಯಾಂಕ್ ಅಧಿಕಾರಿಗಳಾದರೂ, ಸದರಿ ನಿವೇಶನದ ನೈಜತೆ ಬಗ್ಗೆ ಮುಡಾದಿಂದ ದೃಢೀಕರಣ ಪತ್ರ ಪಡೆಯದೇ, ಕಾನೂನು ಅಭಿಪ್ರಾಯ (ಐegಚಿಟ ಔಠಿeಟಿioಟಿ) ಪಡೆಯದೇ ಯಾವ ಆಧಾರದ ಮೇಲೆ 14 ಕೋಟಿ ರೂ. ಕೊಟ್ಟರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲದೇ ಅಡಮಾನ ಪತ್ರ ನೋಂದಾಯಿಸಿರುವ ಉಪನೋಂದಣಾಧಿಕಾರಿಗಳೂ ಸ್ವತ್ತಿನ ಮಾಲೀಕರು ಯಾರು ಎಂಬುದರ ಬಗ್ಗೆ ದಾಖಲೆಗಳನ್ನು ಪರಿಶೀಲಿಸದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

Translate »