ನಾಗರಿಕರ ನಾನಾ ಸಮಸ್ಯೆ ನಿವಾರಣೆಗೆ `ಪಾಲಿಕೆ ಅದಾಲತ್’
ಮೈಸೂರು

ನಾಗರಿಕರ ನಾನಾ ಸಮಸ್ಯೆ ನಿವಾರಣೆಗೆ `ಪಾಲಿಕೆ ಅದಾಲತ್’

November 10, 2022

ಮೈಸೂರು, ನ.9(ಎಸ್‍ಪಿಎನ್)- ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ 9 ಕ್ಕೂ ಹೆಚ್ಚು ನಾಗರಿಕ ಸನ್ನದು ಮತ್ತು ಸೇವಾ ಸೌಲಭ್ಯಗಳನ್ನು ಒಂದೇ ವೇದಿಕೆ ಯಲ್ಲಿ ಒದಗಿ ಸಲು `ಪಾಲಿಕೆ ಅದಾಲತ್’ ಹಮ್ಮಿ ಕೊಂಡಿದ್ದು, ಈ ಸೇವೆ ಪಡೆಯಲು ನ.14ರಿಂದ ನ.19 ರೊಳಗೆ ಸಾರ್ವ ಜನಿಕರು ಅರ್ಜಿ ಸಲ್ಲಿಸಬಹುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು. ಮೈಸೂರು ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಜನತೆ ಎದುರಿಸುತ್ತಿರುವ ನಾನಾ ಸಂಬಂಧ ದೂರು ಗಳ ಶೀಘ್ರ ಪರಿಹಾರ ಕಂಡುಕೊಳ್ಳಲು ಒಂದು ವೇದಿಕೆ ಕಲ್ಪಿಸುವ ಕಾರ್ಯಕ್ರಮ ಇದಾಗಿದೆ ಎಂದು ಸ್ಪಷ್ಟ ಪಡಿಸಿದರು. ಪಾಲಿಕೆ ಅದಾಲತ್‍ನಲ್ಲಿ ನಿವೇಶನ ಅಥವಾ ಮನೆ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಈ ಸಂಬಂಧ ಆಶ್ರಯ ಯೋಜನೆಯಡಿ ಅಧಿಕೃತ ಪ್ರಕಟಣೆ ಹೊರಡಿಸಿ ಅರ್ಜಿಗಳನ್ನು ಕರೆದಾಗ ಮಾತ್ರ ಅರ್ಜಿ ಸಲ್ಲಿಸಬೇಕು. ಆದಾಲತ್ ಕಾರ್ಯ ಕ್ರಮದಲ್ಲಿ ಈಗಾಗಲೇ ವಲಯ ಕಚೇರಿಗಳು ಅಥವಾ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಯಾವುದೇ ನಾಗರಿಕ ಸನ್ನದು ಅಥವಾ ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಕೋರಿ ಈ ಹಿಂದೆಯೇ ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಈ ಸೇವೆ ಪಡೆಯಲು ಪಾಲಿಕೆ ಅಧಿಕಾರಿ/ಸಿಬ್ಬಂದಿಗಳಿಂದ ಅನಗತ್ಯ ವಿಳಂಬವಾಗಿದ್ದಲ್ಲಿ ಅಥವಾ ಹೊಸ ಸಾರ್ವಜನಿಕ ಸಮಸ್ಯೆಗಳು ಮತ್ತು ದೂರುಗಳೇನಾದರೂ ಇದ್ದಲ್ಲಿ ಮಾತ್ರ ಅಗತ್ಯ ದಾಖಲಾತಿಗಳೊಂದಿಗೆ `ಪಾಲಿಕೆ ಅದಾಲತ್’ಗೆ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಮಾಹಿತಿ ನೀಡಿದರು.

ನ.14ರಿಂದ ನ.19ರೊಳಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ, ಅಂತಹ ಅರ್ಜಿಗಳನ್ನು ನ.27ರೊಳಗಾಗಿ ಇತ್ಯರ್ಥಪಡಿಸಲಾಗುವುದು. ತಿರಸ್ಕಾರವಾಗುವ ಅರ್ಜಿಗಳಿಗೆ ಅಗತ್ಯ ಕಾರಣ ನೀಡಿ ಹಿಂಬರಹ ನೀಡಲಾಗುವುದು. ಈ ಅದಾಲತ್‍ನಲ್ಲಿ ಅರ್ಜಿದಾರರಿಗೆ ತಮ್ಮ ಅರ್ಜಿ ವಸ್ತುಸ್ಥಿತಿ ಕುರಿತು ಯಾವುದೇ ಮಾಹಿತಿ ನ.27ರಂದು ಲಭ್ಯವಾಗದಿದ್ದಲ್ಲಿ. ಅಂತಹ ನಾಗರಿಕರು ನ.30ರಂದು ನಡೆಯುವ `ಅಂತಿಮ ಅದಾಲತ್’ ಕಾರ್ಯಕ್ರಮಕ್ಕೆ ಸ್ವೀಕೃತಿಯೊಂದಿಗೆ ಹಾಜರಾಗಿ, ಕಾರಣ ತಿಳಿದು ಕೊಳ್ಳಬಹುದು ಎಂದು ತಿಳಿಸಿದರು. ಈ ವೇಳೆ ಮೈಸೂರು ನಗರ ಪಾಲಿಕೆ ಉಪಮೇಯರ್ ರೂಪ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮತ್ತು ಒಂಬತ್ತು ವಲಯ ಕಚೇರಿ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಮೇಲ್ಕಂಡ ಪ್ರಕರಣಗಳಿಗೆ ಈಗಾಗಲೇ ಸಂಬಂಧಪಟ್ಟ ವಲಯಕಚೇರಿ ಹಾಗೂ ಮುಖ್ಯ ಕಚೇರಿಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ವಿಳಂಬವಾಗಿರುವ ಪ್ರಕರಣಗಳಲ್ಲಿ ಮಾತ್ರ ಅರ್ಜಿ ಸ್ವೀಕೃತಿ ಮತ್ತು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಸದರಿ ಅದಾಲತ್ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮೇಯರ್ ಶಿವಕುಮಾರ್ ಮನವಿ ಮಾಡಿದರಲ್ಲದೆ ಮೈಸೂರಿನಲ್ಲಿ ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ವಿಶೇಷ ಅನುದಾನ ಬಿಡುಗಡೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Translate »