ಹಳೇ ಕೆಸರೆ, ರಾಯನಕೆರೆ ತ್ಯಾಜ್ಯ ವಿಲೇವಾರಿ ಘಟಕಗಳ ಆರಂಭದೊಂದಿಗೆ ಜನರಿಗೆ ಸಿವೇಜ್ ಫಾರಮ್ ದುರ್ವಾಸನೆಗೆ ಮುಕ್ತಿ
ಮೈಸೂರು

ಹಳೇ ಕೆಸರೆ, ರಾಯನಕೆರೆ ತ್ಯಾಜ್ಯ ವಿಲೇವಾರಿ ಘಟಕಗಳ ಆರಂಭದೊಂದಿಗೆ ಜನರಿಗೆ ಸಿವೇಜ್ ಫಾರಮ್ ದುರ್ವಾಸನೆಗೆ ಮುಕ್ತಿ

November 10, 2022

ಮೈಸೂರು, ನ.9(ಎಂಟಿವೈ)- ಮೈಸೂರು ತಾಲೂಕಿನ ರಾಯನಕೆರೆಯಲ್ಲಿ ನಿರ್ಮಿಸುತ್ತಿ ರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಜನವರಿ 2ನೇ ವಾರದಿಂದ ಕಾರ್ಯಾರಂಭ ಮಾಡುವುದರಿಂದ ವಿದ್ಯಾರಣ್ಯಪುರಂ ಸಿವೇಜ್ ಪ್ಲಾಂಟ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

9.50 ಕೋಟಿ ರೂ. ವೆಚ್ಚದಲ್ಲಿ ರಾಯನಕೆರೆ ಯಲ್ಲಿ ನಿರ್ಮಿಸಲಾಗುತ್ತಿರುವ 200 ಟನ್ ಸಾಮಥ್ರ್ಯದ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಪ್ರತಿದಿನ 450 ರಿಂದ 500 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡು ವುದೇ ಪಾಲಿಕೆಗೆ ಸವಾಲಾಗಿ ಪರಿಣಮಿಸಿತ್ತು. ಹಲವು ವರ್ಷದಿಂದ ಮೈಸೂರಲ್ಲಿ ಸಂಗ್ರಹವಾ ಗುವ ಕಸವನ್ನು ವಿದ್ಯಾರಣ್ಯಪುರಂನಲ್ಲಿರುವ ಸಿವೇಜ್ ಫಾರಂನಲ್ಲಿ ಸಂಗ್ರಹಿಸಲಾಗುತ್ತಿತ್ತು. ಅಲ್ಲದೆ ಪೂರ್ಣ ಪ್ರಮಾಣದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ, 7 ಲಕ್ಷಕ್ಕೂ ಅಧಿಕ ಟನ್ ಕಸದ ರಾಶಿ ಅಲ್ಲಿ ಬಿದ್ದಿದೆ. ಮೈಸೂರು ನಗರ ಬೆಳೆದಂತೆ ಕಸ ಸಂಗ್ರಹಣೆ ಪ್ರಮಾಣವೂ ಹೆಚ್ಚಾ ಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮೈಸೂರಲ್ಲಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಉದ್ಭವವಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಹೊಸದಾಗಿ ಹಳೆ ಕೆಸರೆ ಹಾಗೂ ರಾಯನಕೆರೆ ಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗುತ್ತಿದೆ ಎಂದರು. ಹಳೆ ಕೆಸರೆಯಲ್ಲಿ ಸ್ಥಾಪಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 300 ಟನ್ ಕಸ ವಿಲೇವಾರಿ ಮಾಡಬಹುದು. ಆದರೆ ಈಗ ಪ್ರಾಯೋಗಿಕವಾಗಿ 150 ಟನ್ ವಿಲೇವಾರಿ ಮಾಡು ವಂತೆ ಸೂಚಿಸಲಾಗಿದೆ. ರಾಯನಕೆರೆಯಲ್ಲಿ 200 ಟನ್ ಕಸ ವಿಲೇವಾರಿ ಮಾಡಬಹುದಾಗಿದೆ. ಈಗಾ ಗಲೇ ಘಟಕ ನಿರ್ಮಾಣಕ್ಕೆ ತಳಪಾಯ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ 15 ದಿನದೊಳಗೆ ಶೆಡ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ನವೆಂಬರ್ ಅಂತ್ಯದೊಳಗೆ ಯಂತ್ರಗಳ ಜೋಡಣೆ, ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ ಕಲ್ಪಿಸಲು ಸೂಚನೆ ನೀಡಲಾಗುತ್ತದೆ. ಡಿಸೆಂಬರ್ ಅಂತ್ಯದ ವೇಳೆಗೆ ರಾಯನಕೆರೆ ಘಟಕದಲ್ಲಿ ಪ್ರಾಯೋಗಿಕ ಕಾರ್ಯ ಪೂರ್ಣಗೊಳಿಸಿ, 2023ರ ಜನವರಿ ಎರಡನೇ ವಾರದಲ್ಲಿ ಉದ್ಘಾಟಿಸಲಾಗುವುದು ಎಂದರು. ಕೆಸರೆ ಹಾಗೂ ರಾಯನಕೆರೆಯ ಘನತ್ಯಾಜ್ಯ ವಿಲೇವಾರಿ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದರಿಂದ ಜನವರಿ ಎರಡನೇ ವಾರದಿಂದ ವಿದ್ಯಾರಣ್ಯಪುರಂನಲ್ಲಿನ ಸಿವೇಜ್ ಫಾರಂಗೆ ಕಸ ಸಾಗಣೆ ನಿಲ್ಲಿಸಲಾಗುತ್ತದೆ. ಮೈಸೂರು ನಗರದ 65 ವಾರ್ಡ್‍ಗಳಲ್ಲಿ ಸಂಗ್ರಹ ವಾಗುವ ಕಸವನ್ನು ಪ್ರತ್ಯೇಕಿಸಿ, ಕೆಸರೆ ಹಾಗೂ ರಾಯನಕೆರೆ ಘಟಕಕ್ಕೆ ರವಾನಿಸಲಾಗುವುದು. ಇದರಿಂದ ಸಿವೇಜ್ ಫಾರಂ ಮೇಲಿನ ಒತ್ತಡ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ಈ ಎರಡು ಹೊಸ ಘಟಕಗಳು ಕಾರ್ಯಾರಂಭ ಮಾಡಿದ ನಂತರ ಸಿವೇಜ್ ಫಾರಂನಲ್ಲಿರುವ ಸಂಗ್ರಹವಾಗಿರುವ 7 ಲಕ್ಷ ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕಾರ್ಯ ಆರಂಭಿಸಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಕಸ ವಿಲೇವಾರಿಯಾದ ಬಳಿಕ ಸಿವೇಜ್ ಫಾರಂ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಬೇಕು ಎಂದು ಪಾಲಿಕೆಯಲ್ಲಿ ಚರ್ಚಿಸಿ, ನಿರ್ಧರಿಸಲಾಗುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ ಸಿವೇಜ್ ಫಾರಂ ಸಮಸ್ಯೆಯಿಂದ ಸ್ಥಳೀಯರು ಶಾಶ್ವತವಾಗಿ ಪಾರಾಗಲಿದ್ದಾರೆ ಎಂದು ವಿವರಿಸಿದರು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಸ್ವಚ್ಛನಗರ ಪ್ರಶಸ್ತಿಗೆ ಇಂಧೋರ್ ಸೇರಿದಂತೆ ದೇಶದ ವಿವಿಧ ಮಹಾನಗರಗಳು ಸ್ಪರ್ಧೆಯೊಡ್ಡುತ್ತಿವೆ. ಮೈಸೂರು ನಗರ ಮತ್ತೆ ದೇಶದ ನಂಬರ್ ಒನ್ ಸ್ವಚ್ಛ ನಗರವಾಗಬೇಕು ಎಂಬುದು ನಮ್ಮ ಮಹಾ ಉದ್ದೇಶ. ಇದಕ್ಕಾಗಿ ಎರಡು ಹೊಸ ಘನತ್ಯಾಜ್ಯ ವಿಲೇವಾರಿ ಘಟಕಗಳ ಸೇವೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ಲೀನ್ ಸಿಟಿ ಪರಿಕಲ್ಪನೆಯೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದರು.

ಮನೆ ಮನೆ ಕಸವನ್ನೂ ಲಾಭದಾಯಕವಾಗಿಸಬಹುದು ಎಂದು ತೋರಿಸಿಕೊಟ್ಟಿದ್ದೇ ಮೈಸೂರು ಮಹಾನಗರ ಪಾಲಿಕೆ. ಕಸದಿಂದ ಕಾಂಪೋಸ್ಟ್ ಗೊಬ್ಬರ ಮಾಡಿ ಲಾಭ ಗಳಿಸುವ ಪ್ರಯತ್ನ ಇದಾಗಿದೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ರೀತಿಯಲ್ಲಿ ಕೆಲಸ ನಡೆಯುತ್ತಿದೆ. ಜನರ ಮಧ್ಯೆ ಕಸ ಇರಬಾರದು ಎಂಬುದು ನಮ್ಮ ನಿಲುವು. ಆ ಮೂಲಕ ಮತ್ತೊಮ್ಮೆ ಮೈಸೂರು ಸ್ವಚ್ಛನಗರ ಪಟ್ಟ ಪಡೆಯಬೇಕೆಂಬ ಆಸೆ ಇಟ್ಟುಕೊಂಡು ಈ ಕೆಲಸ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ರಂಜಿತ್ ಕುಮಾರ್, ಮಧುಸೂದನ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತ್ಯಮೂರ್ತಿ, ಮೋಹನ್, ಕವನ್ ಇನ್ನಿತರರು ಹಾಜರಿದ್ದರು.

Translate »