ಡಿ.25ರೊಳಗೆ ಶ್ವಾನ ಪುನರ್ವಸತಿ ಕೇಂದ್ರ ಉದ್ಘಾಟನೆ
ಮೈಸೂರು

ಡಿ.25ರೊಳಗೆ ಶ್ವಾನ ಪುನರ್ವಸತಿ ಕೇಂದ್ರ ಉದ್ಘಾಟನೆ

November 10, 2022

ಮೈಸೂರು, ನ.9(ಎಂಟಿವೈ)- ಬೀದಿನಾಯಿಗಳ ರಕ್ಷಣೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಲ್ಲಿ ನಿರ್ಮಿಸುತ್ತಿರುವ ಶ್ವಾನಗಳ ಪುನರ್ವಸತಿ ಕೇಂದ್ರ ಡಿ.25ರೊಳಗೆ ಆರಂಭವಾಗಲಿದೆ ಎಂದು ಶಾಸಕ ಎಸ್.ಎ.ರಾಮ ದಾಸ್ ತಿಳಿಸಿದ್ದಾರೆ. ಮೈಸೂರು ತಾಲೂಕಿನ ರಾಯನಕೆರೆ ಬಳಿ 3.20 ಎಕರೆ ಜಾಗದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಶ್ವಾನಗಳ ಪುನರ್ವಸತಿ ಕೇಂದ್ರದ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮೈಸೂರು ನಗರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ದೂರು ಕೇಳಿ ಬರುತ್ತಿದೆ.

ಅಲ್ಲದೇ ಶ್ವಾನಗಳಿಗೆ ಆಗುತ್ತಿರುವ ನಾನಾ ತೊಂದರೆಯ ಬಗ್ಗೆಯೂ ಸಾರ್ವಜನಿಕರು ದೂರು ನೀಡುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಬೀದಿ ನಾಯಿಗಳಿಗಾಗಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಅವುಗಳ ಉಪಟಳದ ದೂರು ಬಂದ ಸ್ಥಳದಿಂದ ಬೀದಿನಾಯಿಗಳನ್ನು ಹಿಡಿದು, ಪುನರ್ವಸತಿ ಕೇಂದ್ರದಲ್ಲಿ ಪಾಲನೆ ಮಾಡಲಾಗುತ್ತದೆ ಎಂದರು.

ಕೊರೊನಾ ಸಂದರ್ಭದಲ್ಲಿ ಆಹಾರವಿಲ್ಲದೇ ನಾಯಿಗಳು ನರಳಿದ್ದವು. ಶ್ವಾನ ಪ್ರಿಯರ ಸಹಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವು ಪಡೆದು, ಕೋವಿಡ್ ಸಂದರ್ಭದಲ್ಲಿ ಬೀದಿ ನಾಯಿಗಳಿಗೆ ಆಹಾರ ಪೂರೈಸಲಾಗಿತ್ತು. ಸಾಕಷ್ಟು ಶ್ವಾನಗಳು ಆಹಾರವಿಲ್ಲದೇ, ಅನಾರೋಗ್ಯದಿಂದ, ಅಪಘಾತ ಕ್ಕೀಡಾಗಿ ಮೃತಪಟ್ಟಿದ್ದವು. ಇದನ್ನು ಮನಗಂಡು, ಅವುಗಳ ಕಾಪಾಡುವ ದೃಷ್ಟಿಯಿಂದ ಶ್ವಾನಗಳ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಲಾಗಿತ್ತು.
ರಾಯನಕೆರೆ ಬಳಿಯ ಈ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿದ್ದು, ಅದಕ್ಕೆ ಬೇಕಾದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಈ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರದೊಂದಿಗೆ ಶ್ವಾನ ಪ್ರಿಯರು ನೆರವು ನೀಡಬಹುದಾಗಿದೆ. ಹುಟ್ಟುಹಬ್ಬ ಆಚರಣೆ ಅಂಗವಾಗಿ ಶ್ವಾನಗಳಿಗೆ ಏನನ್ನಾದರೂ ನೀಡಲು ಬಯಸಿದರೆ ಅಂತಹವರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆರೋಗ್ಯವಂತ, ಅನಾರೋಗ್ಯಕ್ಕೀಡಾದ, ಚಿಕಿತ್ಸೆಗೀಡಾಗಿರುವ ಶ್ವಾನ ಹಾಗೂ ಮರಿಗಳಿಗೆ ಪ್ರತ್ಯೇಕ ವಿಭಾಗ ಮಾಡಿ ಅವುಗಳನ್ನು ಆರೈಕೆ ಮಾಡಲಾಗುತ್ತದೆ. ಶ್ವಾನ ಪ್ರಿಯರೊಂದಿಗೆ ಬರುವ ಮಕ್ಕಳು ನಾಯಿಮರಿಗಳೊಂದಿಗೆ ಆಟವಾಡಲು ಪಾರ್ಕ್‍ವೊಂದನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಸ್ಥಳದಲ್ಲಿ ಶ್ವಾನ ಪಾಲಕರು ಹಾಗೂ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡುವವರಿಗೂ ವ್ಯವಸ್ಥೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಡಾ.ರೂಪ, ಪಶು ಸಂಗೋಪನಾ ಉಪನಿರ್ದೇಶಕ ಡಾ.ಷಡಕ್ಷರಮೂರ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »