ಮೈಸೂರು ಸಂಪರ್ಕಿಸುವ 7 ಮುಖ್ಯ ರಸ್ತೆಗಳಲ್ಲಿ ಮಹಾದ್ವಾರ ನಿರ್ಮಾಣ
ಮೈಸೂರು

ಮೈಸೂರು ಸಂಪರ್ಕಿಸುವ 7 ಮುಖ್ಯ ರಸ್ತೆಗಳಲ್ಲಿ ಮಹಾದ್ವಾರ ನಿರ್ಮಾಣ

April 1, 2022

ಮೈಸೂರು: ಪ್ರವಾಸೋದ್ಯಮಕ್ಕೆ ಪೂರಕವಾದ ಪಾರಂಪರಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ 7 ಪ್ರಮುಖ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಮಹಾದ್ವಾರ ನಿರ್ಮಿಸಲು ಮುಡಾ ತೀರ್ಮಾನಿ ಸಿದೆ. ಎಲ್ಲಾ ದಿಕ್ಕುಗಳ ಪ್ರಮುಖ ರಸ್ತೆಗಳಲ್ಲಿ ರಾಜ ಮನೆತನದವರು ನೀಡಿದ ಕೊಡುಗೆಯ ಸ್ಮರಣಾರ್ಥ ಜೈಪುರ ಮಾದರಿಯಲ್ಲಿ ಮಹಾದ್ವಾರಗಳನ್ನು ಪಾರಂ ಪರಿಕ ಶೈಲಿಯಲ್ಲಿ ನಿರ್ಮಿಸಲುದ್ದೇಶಿಸಲಾಗಿದ್ದು, ಯೋಜ ನೆಗೆ ಡಿಪಿಆರ್ ತಯಾರಿಸಲು 2 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿ, ಹುಣಸೂರು ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ಗದ್ದಿಗೆ ರಸ್ತೆ ಹಾಗೂ ಬನ್ನೂರು ರಸ್ತೆಗಳಲ್ಲಿ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಹಾಗೂ ಪಂಚಾಯತ್ ರಾಜ್ ಸಹಭಾಗಿತ್ವದಲ್ಲಿ ನಿರ್ಮಿಸಲುದ್ದೇಶಿಸಿರುವ ಮಹಾದ್ವಾರಗಳಿಗೆ ರಾಜಮನೆತನದವರ ಹೆಸರಿಡಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಡಾ ಮುಂದಾಗಿದೆ.

ಆಟೋನಗರ ನಿರ್ಮಾಣ: ಮಂಡಕಳ್ಳಿ ಬಳಿ 15 ಎಕರೆ ಪ್ರದೇಶದಲ್ಲಿ ಆಟೋನಗರ ಯೋಜನೆಯನ್ನು ಜಾರಿಗೊಳಿಸಲು ಮುಡಾ ಮುಂದಾಗಿದೆ. ಒಂದೇ ಸೂರಿನಡಿ ನೂರಕ್ಕೂ ಹೆಚ್ಚು ವಾಹನ ದುರಸ್ತಿದಾರರಿಗೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಒದಗಿಸಿ, ಆಟೋನಗರ ನಿರ್ಮಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ 20,000 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಮೆಟ್ರೋ ಯೋಜನೆ ಪ್ರಸ್ತಾಪ: ಅತೀ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರಕ್ಕೆ ದಶಪಥ ರಸ್ತೆ, ವಿಮಾನ ನಿಲ್ದಾಣ ಅಭಿವೃದ್ಧಿಗೊಂಡಿರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ಬುಲೆಟ್ ರೈಲು ಸಂಪರ್ಕ ಕಲ್ಪಿಸಲು ಯೋಜಿಸಿರುವ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಮೈಸೂರು ನಗರಕ್ಕೆ ಮೆಟ್ರೋ ಯೋಜನೆ ಅಗತ್ಯ ಇದೆ ಎಂದು ಪ್ರಸ್ತಾಪಿಸಲಾಗಿದೆ. ಅದಕ್ಕಾಗಿ ನಿಯೋ ಮೆಟ್ರೋ ಅಥವಾ ಮೆಟ್ರೋಲೈಟ್ ಅಥವಾ ಮೆಟ್ರೋ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನೈಪುಣ್ಯತೆ ಹೊಂದಿರುವ ಸಂಸ್ಥೆಗಳಿಂದ ಕಾರ್ಯಸಾಧಕ ವರದಿ ತಯಾರಿಸಲು 1 ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ.

ಕುಪ್ಪಣ್ಣ ಪಾರ್ಕ್ ಅಭಿವೃದ್ಧಿ: ಕೇವಲ ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗುತ್ತಿರುವ ಮೈಸೂರಿನ ಹೃದಯ ಭಾಗದಲ್ಲಿರುವ ಕುಪ್ಪಣ್ಣ ಪಾರ್ಕ್‍ನಲ್ಲಿ ವರ್ಷವಿಡೀ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ಗಳಿಗೆ ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ 3 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಏರ್ ಕ್ವಾಲಿಟಿ ಮಾನಿಟರಿಂಗ್ ಸಿಸ್ಟಂ: ಅಭಿವೃದ್ಧಿಯತ್ತ ಸಾಗುತ್ತಿರುವ ಮೈಸೂರು ನಗರದಲ್ಲಿ ಪರಿಸರದ ಮೇಲೆ ಆಗುವ ಪರಿಣಾಮವನ್ನು ತಪ್ಪಿಸಲು ಹಾಗೂ ಗಾಳಿಯ ಗುಣಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಿ ಉತ್ತಮ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ಮೈಸೂರು ನಗರದಿಂದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಏರ್ ಕ್ವಾಲಿಟಿ ಮಾನಿಟರಿಂಗ್ ಸಿಸ್ಟಂ ಅಳವಡಿಸಲು 50 ಲಕ್ಷ ರೂ.ಗಳನ್ನು ಕಾಯ್ದಿರಿಸಿರುವ ಮುಡಾ, ಸುಮಾರು 50 ಉದ್ಯಾನವನಗಳಲ್ಲಿ ಹಸಿರೀಕರಣ ಮತ್ತು ಅರಣ್ಯೀಕರಣ ಮಾಡುವ ಮೂಲಕ ಪ್ರಾಣಿ-ಪಕ್ಷಿ ಸಂಕುಲಗಳಿಗೆ ಅನುಕೂಲವಾಗುವಂತೆ 50 ಸಾವಿರ ಸಸಿಗಳನ್ನು ನೆಟ್ಟು, ಪೋಷಿಸಲು ಉದ್ದೇಶಿಸಿ, ಅದಕ್ಕಾಗಿ 150 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಅನಧಿಕೃತ ಕಟ್ಟಡಗಳ ಸಕ್ರಮ: ಪ್ರಾಧಿಕಾರದಿಂದ ನಿರ್ಮಿಸಲಾಗಿರುವ ಬಡಾವಣೆ ಗಳಿಗೆ ಭೂ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸುವಾಗ ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಖಾಸಗಿ ವ್ಯಾಜ್ಯಗಳಿಂದಾಗಿ ನೂರಾರು ಎಕರೆ ಭೂಮಿ ಅಂತಿಮ ಅಧಿಸೂಚನೆಯಲ್ಲಿ ಸೇರಿದ್ದರೂ ಸಂಪೂರ್ಣ ಸ್ವಾಧೀನಕ್ಕೆ ಒಳಪಟ್ಟಿರುವುದಿಲ್ಲ. ಅಂತಹ ಭೂಮಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣ ವಾಗಿದ್ದು, ಕಟ್ಟಡ ನಕ್ಷೆ ಮತ್ತು ಖಾತಾ ವರ್ಗಾವಣೆಗೆ ತಾಂತ್ರಿಕ ತೊಡಕು ಉಂಟಾಗಿ ರುವುದರಿಂದ ಅಂತಹ ಕಟ್ಟಡಗಳನ್ನು ಬಿಡಿಎ ಮಾದರಿಯಲ್ಲಿ ಆಸ್ತಿ ಮಾಲೀಕರಿಗೇ ರೀ-ಕನ್ವೆ ಮೂಲಕ ಹಕ್ಕುಪತ್ರ ನೀಡಲು ಪ್ರಸ್ತುತ ಮಾರುಕಟ್ಟೆ ದರದ ಶೇ.25, ಶೇ.30, ಶೇ.35 ಹಾಗೂ ಶೇ.40ರಷ್ಟನ್ನು ವಿವಿಧ ಅಳತೆಯ ನಿವೇಶನಗಳಿಗೆ ದಂಡ ರೂಪದಲ್ಲಿ ಪಾವತಿಸಿಕೊಂಡು ವಿಶೇಷ ನಿಯಮದಡಿ ಅಂತಹ ಕಟ್ಟಡಗಳನ್ನು ಸಕ್ರಮಗೊಳಿಸಿದ್ದಲ್ಲಿ ಪ್ರಾಧಿಕಾರಕ್ಕೆ ನೂರಾರು ಕೋಟಿ ಸಂಪನ್ಮೂಲ ಕ್ರೋಢೀಕರಣ ವಾಗುತ್ತದೆಯಲ್ಲದೇ, ಯೋಜನಾಬದ್ಧ ಕಾರ್ಯಸೂಚಿ ನಿರೂಪಿಸಬಹುದಾಗಿದೆ ಎಂದು ಅಭಿಪ್ರಾಯಿಸಿ, ಪ್ರಸ್ತಾವನೆ ತಯಾರಿಸಲು ಅಗತ್ಯವಿರುವ ಸರ್ವೆ ಕಾರ್ಯ ಮತ್ತು ಆ್ಯಸ್ ಬಿಲ್ಟ್ ಪ್ಲಾನ್ ತಯಾರಿಸಲು 50 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ.

Translate »