ಮೈಸೂರು, ಜು.22(ಆರ್‍ಕೆ)-ಕೊರೊನಾ ಸೋಂಕು ಹರಡದಂತೆ ತಡೆಯಲು ಮೈಸೂರಿನ ಎನ್.ಆರ್.ವಿಧಾನಸಭಾ ಕ್ಷೇತ್ರದ ಕೆಲ ಭಾಗಗಳಲ್ಲಿ ಜಿಲ್ಲಾ ಡಳಿತ ವಿಧಿಸಿರುವ ನಿರ್ಬಂಧ ಜು.24ರವರೆಗೆ ಮುಂದುವರಿಯ ಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.
ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾಜ್ಯದ ಜನತೆಯನ್ನುದ್ದೇಶಿಸಿ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಲಾಕ್‍ಡೌನ್ ಇರುವುದಿಲ್ಲ ಎಂದು ಹೇಳಿರುವ ಜೊತೆಗೆ ಯಾವ ಯಾವ ಸ್ಥಳಗಳಲ್ಲಿ ಕೊರೊನಾ ಸೋಂಕು ಮತ್ತು ಸಾವು ಹೆಚ್ಚುತ್ತಿವೆಯೋ ಆ ಪ್ರದೇಶದಲ್ಲಿ ಮಾತ್ರ ನಿರ್ಬಂಧ ವಿಧಿಸಿ ಎಂದು ಹೇಳಿದ್ದಾರೆ ಎಂದರು.
ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಸ್ಪಾಟ್ ಟೆಸ್ಟ್ ಮಾಡುತ್ತಿದ್ದು, ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಈ ಮೊದಲು ಹೊರಡಿಸಿರುವ ಅಧಿಸೂಚನೆಯಂತೆ ಎನ್.ಆರ್.ಕ್ಷೇತ್ರದ ಕೆಲ ಭಾಗಗಳಲ್ಲಿ ಜುಲೈ 24ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದರು.
ಈ ಪಾರ್ಷಿಯಲ್ ಲಾಕ್‍ಡೌನ್ ವೇಳೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಿಲ್ಲ. ಅನಗತ್ಯ ಸಂಚಾರಕ್ಕಷ್ಟೇ ಬ್ರೇಕ್ ಹಾಕಲಾಗಿದೆ. ಡೆತ್ ರೇಟ್ ಇರುವ ಕಡೆ ಮಾತ್ರ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಆ ಭಾಗದಲ್ಲಿ 550ಕ್ಕೂ ಹೆಚ್ಚು ಆ್ಯಂಟಿಜೆನ್ ಕಿಟ್ ಮೂಲಕ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ. ಈವರೆಗೆ 115 ಪಾಸಿಟಿವ್ ಬಂದಿದೆ. ಸಾವಿನ ಪ್ರಕರಣ ತಪ್ಪಿಸಲು ಇದು ಸಹಕಾರಿಯಾಗಿದೆ. ಜನರು ಕೊರೊನಾ ಟೆಸ್ಟ್ ಮಾಡಿಸಿಕೊಂಡು ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು. ಈಗಾಗಲೇ ಎನ್.ಆರ್.ಕ್ಷೇತ್ರದಲ್ಲಿ 3 ಕೋವಿಡ್ ಕೇರ್ ಸೆಂಟರ್‍ಗಳನ್ನು ಧಾರ್ಮಿಕ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳ ಸಹಯೋಗದೊಂದಿಗೆ ಸ್ಥಾಪಿಸಿರುವುದರಿಂದ ವೈದ್ಯಕೀಯ ಚಿಕಿತ್ಸೆ ಪಡೆದು ಗುಣ ಮುಖರಾಗುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.