ನರ್ಮ್ ಯೋಜನೆಯಡಿ ನಿರ್ಮಿಸಿದ ಮನೆಗಳ ಅಧ್ವಾನ ಖಂಡಿಸಿ ಕಾಪೋರೇಟರ್ ಎಸ್‍ಬಿಎಂ ಮಂಜು ನೇತೃತ್ವದಲ್ಲಿ ಪ್ರತಿಭಟನೆ
ಮೈಸೂರು

ನರ್ಮ್ ಯೋಜನೆಯಡಿ ನಿರ್ಮಿಸಿದ ಮನೆಗಳ ಅಧ್ವಾನ ಖಂಡಿಸಿ ಕಾಪೋರೇಟರ್ ಎಸ್‍ಬಿಎಂ ಮಂಜು ನೇತೃತ್ವದಲ್ಲಿ ಪ್ರತಿಭಟನೆ

June 21, 2018

ಮೈಸೂರು:  ಶಿಥಿಲಾವಸ್ಥೆಯಲ್ಲಿರುವ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆಗಳಲ್ಲಿ ದುರಸ್ಥಿ ಮಾಡುವುದರೊಂದಿಗೆ, ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಬನ್ನಿಮಂಟಪದ ಹೈವೇ ವೃತ್ತದ ಬಳಿ ಇರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂದೆ ಬುಧವಾರ ಬೆಳಿಗ್ಗೆ ಪಾಲಿಕೆ ಸದಸ್ಯ ಎಸ್‍ಎಬಿಎಂ ಮಂಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನರ್ಮ್ ಯೋಜನೆಯಲ್ಲಿ ಕೊಳಗೇರಿ ನಿವಾಸಿಗಳಿಗಾಗಿ ನಿರ್ಮಿಸಿರುವ ವಸತಿ ಸಮುಚ್ಛಯಗಳು ಕಳಪೆ. ಇದರಿಂದ ಅಲ್ಲಿನ ನಿವಾಸಿಗಳು ಆತಂಕದಲ್ಲಿ ದಿನದೂಡುವಂತಾಗಿದೆ. ನಿರ್ಮಿಸಿರುವ ಮನೆಗಳಿಗೆ ಅಳವಡಿಸಿರುವ ಪೈಪ್ ಲೈನ್‍ಗಳು ಒಡೆದು ನೀರು ಸುರಿಯುತ್ತಿದೆ. ಮನೆಯ ಮೇಲಿನ ಟ್ಯಾಂಕ್‍ಗಳು ಒಡೆದಿದ್ದು, ಹೊರಗಿನಿಂದ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ನರ್ಮ್ ಯೋಜನೆಯ ವಸತಿ ಸಮುಚ್ಛಯಗಳಲ್ಲಿ ತಾರಸಿಗಳಲ್ಲಿ ನೀರು ಸೋರುತ್ತಿದೆ. ಯುಜಿಡಿ ಪೈಪ್ ಲೈನ್‍ಗಳು ಒಡೆದು ನೀರು ಹೊರಬರುತ್ತಿದೆ. ಟ್ರಾನ್ಸ್‍ಫಾರ್ಮರ್‍ಗಳು ಕೆಳಮಟ್ಟದಲ್ಲಿಯೇ ಅಳವಡಿಸಿದ್ದು, ಮಕ್ಕಳ ಕೈಗೆ ಎಟಕುವಂತಿವೆ. ಮನೆಯ ಸುತ್ತಮುತ್ತಲಿನ ಮೋರಿಗಳಿಂದ ಸೊಳ್ಳೆಗಳ ಕಾಟ ಹೆಚ್ಚಿದ್ದು, ಮಲೇರಿಯಾ, ಚಿಕುನ್ ಗುನ್ಯಾ ಭೀತಿ ಎದುರಾಗಿದೆ ಎಂದು ವಿಷಾದಿಸಿದರಲ್ಲದೆ, ಹಲವರು ಮನೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಮನೆ ವಿತರಿಸದೇ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ. ಪೌರಕಾರ್ಮಿಕರು, ಬಡವರಿಗೆ ಮನೆ ವಿತರಿಸಿ ಸ್ವಾಧೀನ ಪತ್ರ, ಹಕ್ಕುಪತ್ರ ವಿತರಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಗರಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ನಿಂಗಯ್ಯ, ಶ್ರೀನಿವಾಸಗೌಡ, ಮನೋಹರ್, ಶ್ರೀನಿವಾಸೇ ಗೌಡ, ಫಾಲ್ಕನ್ ಬೋರೇಗೌಡ, ಕೃಷ್ಣ, ರಾಧಮ್ಮ, ಲಕ್ಷ್ಮಮ್ಮ, ಜ್ಯೋತಿ, ಶ್ರೀರಂಗ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Translate »