ಕಾಂಗ್ರೆಸ್‍ನಿಂದ ಜನಾಂದೋಲನ ಸಮಾವೇಶ
ಮೈಸೂರು

ಕಾಂಗ್ರೆಸ್‍ನಿಂದ ಜನಾಂದೋಲನ ಸಮಾವೇಶ

January 4, 2022

ಮೈಸೂರು,ಜ.3(ಪಿಎಂ)- ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ನೇತೃತ್ವದಲ್ಲಿ ಜ.9ರಿಂದ 19ರವರೆಗೆ ಹಮ್ಮಿ ಕೊಂಡಿರುವ ಕಾಂಗ್ರೆಸ್ ಪಾದಯಾತ್ರೆ ಪ್ರಯುಕ್ತ ಮೈಸೂರಿನಲ್ಲಿ ಜನಾಂದೋಲನ ಸಮಾವೇಶದೊಂದಿಗೆ ಪಾದಯಾತ್ರೆಯನ್ನೂ ನಡೆಸಲಾಯಿತು.

ಮೇಕೆದಾಟು ಬಳಿಯಿಂದ ಬೆಂಗಳೂರಿನ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದರ ಪೂರ್ವ ಭಾವಿಯಾಗಿ ಮೈಸೂರಿನಲ್ಲಿ ಇಂದು ಜನಾಂದೋಲನ ಸಮಾವೇಶ ನಡೆಸಲಾಯಿತು. ಸಮಾವೇಶಕ್ಕೂ ಮುನ್ನ ಮೈಸೂರಿನ ಗನ್‍ಹೌಸ್ ವೃತ್ತ ಸಮೀಪದ ಬಸವೇಶ್ವರರ ಪ್ರತಿಮೆ ಬಳಿಯಿಂದ ಕಾಂಗ್ರೆಸ್ ಭವನದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಯಿತು. ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಭಾಗವಾಗಿಯೂ ನಡೆದ ಪಾದ ಯಾತ್ರೆಗೆ ಬಸವೇಶ್ವರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ವಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರು ಇಲ್ಲಿನ ಬಸವೇಶ್ವರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ದರು. ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ವೇಳೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪರವಾಗಿ ಜಯ ಕಾರ ಮೊಳಗಿಸಿದರು. ಆ ಮೂಲಕ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸಿಗರೊಂದಿಗೆ ಪಕ್ಷದ ನಾಯಕರು ಪಾದಯಾತ್ರೆ ಆರಂಭಿಸಿದರು. ಜಾನಪದ ಕಲಾತಂಡಗಳ ಮೆರಗು ಮತ್ತು ತಮಟೆ ಸದ್ದು, ಬ್ಯಾಂಡ್‍ನ ಸಂಗೀತದೊಂದಿಗೆ ಪಾದಯಾತ್ರೆ ಮುನ್ನಡೆಯಿತು. ಪಾದ ಯಾತ್ರೆ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ಧ್ವಜ ಮಾತ್ರವಲ್ಲದೆ, ಪಕ್ಷದ ವಿವಿಧ ಘಟಕಗಳ ಧ್ವಜಗಳೂ ರಾರಾಜಿಸಿದವು.

ಬೃಹತ್ ಸೇಬಿನ ಹಾರ: ಬಸವೇಶ್ವರರ ವೃತ್ತಕ್ಕೆ (ಪಾಠ ಶಾಲಾ ವೃತ್ತ) ಪಾದಯಾತ್ರೆಯಲ್ಲಿ ಆಗಮಿಸಿದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಕ್ರೇನ್ ಮತ್ತು ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಅರ್ಪಿಸಲಾಯಿತು. ಅಲ್ಲದೆ, ಹೂ ಮಳೆ ಸುರಿಸಿ, ಅಭಿಮಾನ ವ್ಯಕ್ತಪಡಿಸಲಾಯಿತು. ಬಳಿಕ ಸದರಿ ಸೇಬಿನ ಹಾರದಲ್ಲಿನ ಹಣ್ಣುಗಳನ್ನು ಕಿತ್ತುಕೊಳ್ಳಲು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಮುಗಿಬಿದ್ದರು. ಸಾವಿರಾರು ಹಣ್ಣುಗಳನ್ನು ಪೋಣಿಸಿದ್ದ ಹಾರದಲ್ಲಿ ಅಲ್ಲಲ್ಲಿ ಕೇವಲ ದಾರವಷ್ಟೇ ಕಾಣುವಂತೆ ಹಣ್ಣುಗಳನ್ನು ಕಸಿದು ಕೊಳ್ಳಲಾಗಿತ್ತು. ಪಾದಯಾತ್ರೆ ಕಾಂಗ್ರೆಸ್ ಭವನ ಸಮೀಪಿ ಸುತ್ತಿದ್ದಂತೆ ದಾಸಪ್ಪ ವೃತ್ತದಲ್ಲಿ ಮತ್ತೊಂದು ಬೃಹತ್ ಸೇಬಿನ ಹಾರವನ್ನು ನಾಯಕರಿಗೆ ಅರ್ಪಿಸಲಾಯಿತು.

ದಾರಿಯುದ್ದಕ್ಕೂ ರಾರಾಜಿಸಿದ ಫ್ಲೆಕ್ಸ್‍ಗಳು: ಬಸವೇಶ್ವರರ ಪ್ರತಿಮೆ ಬಳಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿ ಸಾಗಿದ ಪಾದಯಾತ್ರೆಯು, ರಾಮಸ್ವಾಮಿ ವೃತ್ತದ ಮೂಲಕ ಜೆಎಲ್‍ಬಿ ರಸ್ತೆಯಲ್ಲಿ ಸಾಗಿ, ದಾಸಪ್ಪ ವೃತ್ತದ ಬಳಿಯ ಕಾಂಗ್ರೆಸ್ ಭವನದ ಬಳಿ ಸಮಾಪ್ತಿಗೊಂಡಿತು. ಪಾದಯಾತ್ರೆ ಸಾಗಿದ ರಸ್ತೆಗಳು, ವೃತ್ತಗಳಲ್ಲಿ ಸಿದ್ದ ರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ನಾಯಕರ ಭಾವಚಿತ್ರಗಳು ಒಳಗೊಂಡ ಫ್ಲೆಕ್ಸ್‍ಗಳು ಹಾಗೂ ಬ್ಯಾನರ್‍ಗಳು ರಾರಾಜಿಸಿದವು. ಪಾದಯಾತ್ರೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸುಮಾರು ಮಧ್ಯಾಹ್ನ 12 ಗಂಟೆಗೆ ಚಾಲನೆ ಪಡೆದ ಪಾದಯಾತ್ರೆಯು, ಮಧ್ಯಾಹ್ನ 1.10ರ ವೇಳೆಗೆ ಮುಕ್ತಾಯ ಕಂಡಿತು. ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಕೆ.ವೆಂಕಟೇಶ್, ಕಳಲೆ ಕೇಶವ ಮೂರ್ತಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕಾಂಗ್ರೆಸ್ ಮುಖಂಡ ಕೆ.ಮರೀಗೌಡ, ಕೆ.ಹರೀಶ್‍ಗೌಡ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‍ಗೌಡ, ಮೊಹಮ್ಮದ್ ನಲಪಾಡ್ ಸೇರಿದಂತೆ ಮೈಸೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಸೇರಿದಂತೆ ಸಾವಿ ರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Translate »