ರಾಮನಗರದಲ್ಲಿ ರಾಜಕೀಯ ಎದುರಾಳಿಗಳ ಜಿದ್ದಾಜಿದ್ದಿ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಮೇಲೆ  ಹರಿಹಾಯ್ದ ಸಂಸದ ಸುರೇಶ್, ಎಂಎಲ್‍ಸಿ ರವಿ
News

ರಾಮನಗರದಲ್ಲಿ ರಾಜಕೀಯ ಎದುರಾಳಿಗಳ ಜಿದ್ದಾಜಿದ್ದಿ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಮೇಲೆ ಹರಿಹಾಯ್ದ ಸಂಸದ ಸುರೇಶ್, ಎಂಎಲ್‍ಸಿ ರವಿ

January 4, 2022

ರಾಮನಗರ, ಜ.3- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಚಿವ ಡಾ. ಅಶ್ವತ್ಥ್‍ನಾರಾಯಣ ಮತ್ತು ಸಂಸದ ಡಿ.ಕೆ. ಸುರೇಶ್ ನಡುವೆ ಜಟಾಪಟಿ ಏರ್ಪಟ್ಟು ಕೈ ಕೈ ಮಿಲಾಯಿಸುವ ಹಂತ ತಲುಪಿದ ವಿಲಕ್ಷಣ ಘಟನೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು. ಸಚಿವ ಅಶ್ವತ್ಥ್ ನಾರಾಯಣ ಅವರು ವೀರಾವೇಶವಾಗಿ ಮಾತನಾಡುತ್ತಿ ದ್ದಾಗ ಸಿಡಿದೆದ್ದ ಸಂಸದ ಡಿ.ಕೆ. ಸುರೇಶ್ ತಮ್ಮ ಆಸನದಿಂದ ಎದ್ದುಬಂದು ಸಚಿವರ ಜೊತೆ ಮಾತಿನ ಘರ್ಷಣೆಗಿಳಿದು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸ್ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಸುರೇಶ್ ಅವರನ್ನು ಕೆಲ ಅಡಿಗಳಷ್ಟು ದೂರ ಕರೆದೊಯ್ಯುತ್ತಿರುವಾಗಲೇ ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯ ರವಿ ಅವರು ನುಗ್ಗಿ ಬಂದು ಅಶ್ವತ್ಥ್‍ನಾರಾಯಣ ಜೊತೆ ವಾಗ್ವಾದಕ್ಕಿಳಿದು, ಮೈಕ್ ಕಿತ್ತುಕೊಂಡರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ವೇದಿಕೆಗೆ ನುಗ್ಗಿ ಈ ಗಣ್ಯರನ್ನು ಸಮಾಧಾನಪಡಿಸಲು ಹೆಣಗಾಡಬೇಕಾಯಿತು.

ಆದರೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳು ಮೂಕ ಪ್ರೇಕ್ಷಕರಂತೆ ಕುಳಿತಿದ್ದರು. ಪೊಲೀಸರು ಮಧ್ಯೆ ಪ್ರವೇಶಿಸಿ ಘರ್ಷಣೆಯನ್ನು ತಹಬದಿಗೆ ತರುತ್ತಿದ್ದಂತೆಯೇ ಸಂಸದ ಡಿ.ಕೆ. ಸುರೇಶ್ ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಕುಳಿತು ಧರಣಿ ಆರಂಭಿಸಿ ಬಿಟ್ಟರು. ಈ ವೇಳೆ ಅವರನ್ನು ಮುಖ್ಯಮಂತ್ರಿಗಳು ಸಮಾಧಾನಪಡಿಸಿ ಆಸನದಲ್ಲಿ ಕುಳಿತುಕೊಳ್ಳು ವಂತೆ ಮಾಡಿದರು. ವೇದಿಕೆಯಲ್ಲಿದ್ದ ಸಚಿವರಾದ ಡಾ. ಕೆ.ಸುಧಾಕರ್, ಭೈರತಿ ಬಸವರಾಜ್, ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಮೂಕಪ್ರೇಕ್ಷಕರಾಗಿದ್ದರು. ವಿವರ: ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆಗಳ ಅನಾವರಣ ಹಾಗೂ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಯವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್‍ನಾರಾಯಣ ಪ್ರಾಸ್ತಾವಿಕ ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಡಿಕೆ… ಡಿಕೆ… ಜಯಕಾರದೊಂದಿಗೆ ಅಶ್ವಥ್‍ನಾರಾಯಣ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕೆರಳಿದ ಸಚಿವರು, ‘ಯಾರಪ್ಪ ಗಂಡು… ಕೆಲ್ಸ ಮಾಡಿ ತೋರುಸ್ರೋ. ಬರೀ ನಾಲ್ಕು ಜನ ಕಟ್ಕೊಂಡು ಬಂದು ಸಭೆಯಲ್ಲಿ ಗಲಾಟೆ ಮಾಡೋದಾ?, ನಾನ್ ಕೆಲ್ಸ ಮಾಡಿದ್ದೀನಿ ಅಂತ ತೊಡೆತಟ್ಟಿ ಹೇಳು ನೋಡೋಣ… ನಾವ್ ಹೇಳ್ತೀವಿ ಏನ್ ಮಾಡಿದ್ದೀವಿ ಅಂತ’ ಎಂದು ಹೇಳುತ್ತಿದ್ದಂತೆಯೇ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ನಗುತ್ತಲೇ, ರಾಜಕೀಯ ಮಾಡಬೇಡಿ ಎಂದು ಹೇಳಿದಾಗ ಸಚಿವರು, ನಾವ್ ರಾಜಕೀಯ ಮಾಡ್ತೀಲ್ಲಾ ಮೇಡಂ ಎಂದು ಹೇಳಿ ಮತ್ತೆ ಕೆರಳುತ್ತಾ ಜೀವನಪರ್ಯಂತ ಅಧಿಕಾರ… ಅಧಿಕಾರ. ಈ ಅಧಿಕಾರ ಏತಕ್ಕೆ ಬೇಕು. ಜನರ ಕೆಲಸ ಮಾಡೋದಕ್ಕೆ ಅಧಿಕಾರ ಬೇಕು. ನಾಯಕ ಅಂದ್ರೆ ಜನರ ಕೆಲಸ ಮಾಡೋನು. ನಮಗೆ ನಾವೇ ಕೆಲ್ಸ ಮಾಡೋರನ್ನ ಏನಂತಾರೆ? ಎಂದು ಕೇಳಿದಾಗ, ಸಭಿಕರಲ್ಲಿ ಕೆಲವರು ಆಕ್ಷೇಪಾರ್ಹ ಪದವನ್ನು ಬಳಸಿ ಕೂಗಿದರು. ಅದನ್ನು ಅನುಮೋದಿಸಿದಂತೆ ತಲೆ ಅಲ್ಲಾಡಿಸಿದ ಸಚಿವರು ಮುಂದುವರೆದು ‘ನಿಮ್ಮ ಓಟ್ ತಗೋಳೋದು ಕೆಲ್ಸ ಅಂತು ಮಾಡಲ್ಲ. ನಾವು ನಿಮ್ಮ ಕೆಲ್ಸ ಮಾಡೋಕೆ ಬಂದಿದ್ದೇವೆ. ಯಾರ ಜಮೀನಿಗೂ ನಾವ್ ಕೈಹಾಕಲ್ಲ. ನಿಮ್ಮ ಜಮೀನಿಗೆ ನಾವ್ ಕೈಹಾಕಲ್ಲ’ ಎಂದು ಹೇಳುತ್ತಿದ್ದಂತೆಯೇ ಕೆರಳಿ ಕೆಂಡವಾದ ಡಿ.ಕೆ. ಸುರೇಶ್ ತಮ್ಮ ಆಸನದಿಂದ ಮೇಲೆದ್ದು ಅಶ್ವಥ್‍ನಾರಾಯಣರತ್ತ ನುಗ್ಗಿ ವಾಗ್ವಾ ದಕ್ಕಿಳಿದರು. ಅವರನ್ನು ಪೊಲೀಸರು ಕೆಲ ಅಡಿಗಳಷ್ಟು ದೂರ ಕರೆದೊಯ್ಯುತ್ತಿದ್ದಂತೆಯೇ ವಿಧಾನ ಪರಿಷತ್ ಸದಸ್ಯ ರವಿ ಸಚಿವರ ಮುಂದಿನ ಮೈಕ್ ಕಿತ್ತರು.

ರಾಮನಗರದಲ್ಲಿ ಘರ್ಷಣೆ, ಮಾಗಡಿಯಲ್ಲಿ ಸೌಜನ್ಯತೆ: ಇತ್ತ ರಾಮನಗರದಲ್ಲಿ ಪರಸ್ಪರ ಕಿತ್ತಾಡಿದ ಸಂಸದ ಡಿ.ಕೆ. ಸುರೇಶ್ ಮತ್ತು ಸಚಿವ ಅಶ್ವಥ್‍ನಾರಾಯಣ ನಂತರ ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಸ್ಪರ ಸೌಜನ್ಯತೆ ಮೆರೆದರು. ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ಸಚಿವ ಅಶ್ವಥ್‍ನಾರಾಯಣ ‘ನಿಮ್ಮೆಲ್ಲರ ಜನಪ್ರಿಯರಾದ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಸಂಸದರು ಡಿ.ಕೆ. ಸುರೇಶ್ ಅವರೇ’ ಎಂದು ಸಂಬೋಧಿಸಿದರು. ನಂತರ ಅವರು ಮಾತನಾಡಲು ಆರಂಭಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ಡಿಕೆ… ಡಿಕೆ… ಎಂದು ಕೂಗುತ್ತಾ ಗದ್ದಲವೆಬ್ಬಿಸಿದರು. ಅವರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹೆಣಗಾಡುತ್ತಿರುವಾಗ ತಮ್ಮ ಮಾತು ನಿಲ್ಲಿಸಿದರು. ತಕ್ಷಣವೇ ತಮ್ಮ ಆಸನದಿಂದ ಎದ್ದು ಬಂದ ಡಿ.ಕೆ. ಸುರೇಶ್ ಸಚಿವರನ್ನು ಪಕ್ಕಕ್ಕೆ ಸರಿಸಿ ಮೈಕ್ ಮುಂದೆ ನಿಂತು ‘ನೀವ್ ಹೀಗೆಲ್ಲಾ ಮಾಡಿದ್ರೆ ನಾನೆ ಇಲ್ಲಿಂದ ಆಚೆ ಹೋಗ್ತೀನಿ… ಮೊದ್ಲು ಗೌರವ ಕಲ್ಕ್ತೊಳ್ಳಿ’ ಎಂದು ಘರ್ಜಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಆರ್ಭಟ ಅಲ್ಲಿಗೆ ಸ್ಥಗಿತಗೊಂಡಿತು. ನಂತರ ಸಚಿವರು ತಮ್ಮ ಭಾಷಣ ಮುಂದುವರೆಸಿದರು.

Translate »