ಮೈಸೂರು, ಜ. 3(ಆರ್‍ಕೆ)-ಕೊರೊನಾ ರೂಪಾಂತರಿ ಒಮಿಕ್ರಾನ್ ಮಾರಣಾಂತಿಕ ಸೋಂಕು ಹರಡದಂತೆ ತಡೆಯಲು ಮುಂದಾಗಿರುವ ಮೈಸೂರು ಜಿಲ್ಲಾಡಳಿ ತವು ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ಆರಂಭಿಸಿದೆ.
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯ್ತಿ ಮತ್ತು ಮೈಸೂರು ಮಹಾನಗರ ಪಾಲಿಕೆ ಸಂಯು ಕ್ತಾಶ್ರಯದಲ್ಲಿ ಆಯೋಜಿಸಿರುವ ಅಭಿಯಾನದಲ್ಲಿ ಸಿಬ್ಬಂದಿಗಳು ಮೈಸೂರು ನಗರ ಮತ್ತು ಜಿಲ್ಲೆಯಾ ದ್ಯಂತ ಇರುವ ಖಾಸಗಿ ಹಾಗೂ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ತೆರಳಿ 15 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಸಾರ್ವ ಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಪೋಷಕರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಮಕ್ಕಳ ಆಧಾರ್ ಕಾರ್ಡ್ ಕೊಂಡೊಯ್ದು ಲಸಿಕೆ ಕೊಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ನೀಡಿದ್ದಾರೆ.
ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಮೇಯರ್ ಸುನಂದಾ ಪಾಲನೇತ್ರ, ಕಾರ್ಪೋರೇಟರ್ ಪ್ರಮೀಳಾ ಭರತ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಡಿಷನಲ್ ಡಿಸಿ ಮಂಜುನಾಥಸ್ವಾಮಿ, ಜಿಪಂ ಸಿಇಓ ಎನ್.ಎಂ ಯೋಗೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್, ಪ್ರಸಾದ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಡಾ.ಜಯಂತ್, ಡಾ.ಡಿ.ಜಿ. ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇಂದು ಮತ್ತು ನಾಳೆ ಮೈಸೂರು ನಗರದಲ್ಲಿ 30 ಹಾಗೂ ಗ್ರಾಮಾಂತರ ಪ್ರದೇಶದ ಪ್ರತೀ ತಾಲೂಕಿನಲ್ಲಿ ತಲಾ 10 ಲಸಿಕಾ ತಂಡಗಳು ಕಾರ್ಯನಿರ್ವಹಿಸಲಿವೆ. ಜನವರಿ 5ರ ನಂತರ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ 200 ತಂಡಗಳಿಂದ ಕೊರೊನಾ ಲಸಿಕೆ ನೀಡಲಾ ಗುವುದು. ಮೈಸೂರು ನಗರದ ಶಾಲಾ-ಕಾಲೇಜಿನ 52.943 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1,48,184 ಮಕ್ಕಳನ್ನು ಲಸಿಕೆ ನೀಡಲು ಗುರ್ತಿ ಸಲಾಗಿದ್ದು, 15 ದಿನದೊಳಗಾಗಿ ಶೇ.100 ರಷ್ಟು ಗುರಿ ಸಾಧಿಸಲು ಉದ್ದೇಶಿಸಲಾಗಿದೆ ಎಂದೂ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಮಿಕ್ರಾನ್ ರೂಪಾಂತರಿ ಸೋಂಕಿನ ಭೀತಿ ಎದುರಾಗಿರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಹಾಗೂ ಸಾರ್ವಜನಿಕರೂ ಸಹ ತಮ್ಮ ಹತ್ತಿರದ ಕೇಂದ್ರದಲ್ಲಿ ಲಸಿಕೆ ಪಡೆದುಕೊಂಡು ಈ ಮಹಾಮಾರಿ ವೈರಸ್‍ನಿಂದ ರಕ್ಷಣೆ ಪಡೆಯಬೇಕೆಂದೂ ಅವರು ಸಲಹೆ ನೀಡಿದರು. ಶಾಲಾ-ಕಾಲೇಜು ಮುಖ್ಯಸ್ಥರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿ ಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಈ ಅಭಿಯಾನದಲ್ಲಿ ಕೈ ಜೋಡಿಸಿ ಯಶಸ್ವಿಗೊಳಿಸಬೇಕೆಂದೂ ಅವರು ಇದೇ ವೇಳೆ ಕರೆ ನೀಡಿದರು.