ಮೈಸೂರು, ಜು.21(ಆರ್‍ಕೆ)-ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿ ಜಿಲ್ಲಾಡಳಿತ ದೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮೈಸೂರಿನ ಎಲ್ಲಾ ಠಾಣೆಗಳಲ್ಲಿ ಅಪರಾಧ ಪ್ರಕರಣಗಳ ತನಿಖಾ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆ. ಕೋವಿಡ್-19 ಲಾಕ್‍ಡೌನ್, ಅದು ಸಡಿಲಗೊಂಡ ಬಳಿಕವೂ ಜನರ ಚಲನ-ವಲನದ ಮೇಲೆ ನಿರ್ಬಂಧ, ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಕಾರ್ಯೋನ್ಮುಖ ರಾಗಿದ್ದರು. ಈ ಮಧ್ಯೆ ಮೈಸೂರಲ್ಲಿ ಅಪ ರಾಧ ಪ್ರಕರಣಗಳ ಸಂಖ್ಯೆಯೂ ಕಡಿಮೆ ಯಾಗಿ, ತನಿಖೆ ಕುಂಠಿತವಾಗಿರುವುದು ಕಂಡು ಬರುತ್ತಿಲ್ಲವಾದರೂ, ಪೊಲೀಸ್ ತನಿಖಾ ಪ್ರಕ್ರಿಯೆಗೆ ಮಾತ್ರ ಹಿನ್ನಡೆಯಾಗಿದೆ.
ಈ ಮೊದಲು ಕಳವು, ಸುಲಿಗೆ, ವಂಚನೆ, ಸರ ಅಪಹರಣ, ಹಲ್ಲೆ, ಕೊಲೆ, ಘರ್ಷಣೆ ಯಂತಹ ಅಪರಾಧ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ದಾಖಲಾಗುತ್ತಿದ್ದವು. ಪೊಲೀಸ್ ಅಧಿಕಾರಿಗಳು ಹಾಗೂ ಅಪ ರಾಧ ವಿಭಾಗದ ಸಿಬ್ಬಂದಿ ಸುಳಿವಿನ ಬೆನ್ನೇರಿ ಅಪರಾಧಿಗಳನ್ನು ಪತ್ತೆ ಮಾಡಿ ಪ್ರಕರಣ ಭೇದಿಸುವತ್ತ ಸದಾ ಕ್ರಿಯಾ ಶೀಲರಾಗುತ್ತಿದ್ದರು. ಪೂರ್ಣ ಪ್ರಮಾಣದಲ್ಲಿ ವೈನ್‍ಸ್ಟೋರ್, ಬಾರ್ ಅಂಡ್ ರೆಸ್ಟೋ ರೆಂಟ್, ಹೋಟೆಲ್, ಕ್ಲಬ್-ಪಬ್‍ಗಳು ನಡೆಯುತ್ತಿದ್ದಾಗ ಅಹಿತಕರ ಘಟನೆ ಗಳು ನಡೆಯುತ್ತಿದ್ದವು. ಇದೀಗ ಅಂತಹ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರುವುದ ರಿಂದ ರಾತ್ರಿ ವೇಳೆಯ ಗಲಾಟೆ, ಹಲ್ಲೆ, ಕೊಲೆಯಂತಹ ಅಪರಾಧಗಳಿಗೆ ಕಡಿವಾಣ ಬಿದ್ದಿದೆ. ಕೇವಲ ಕಾನೂನು-ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆ ಮತ್ತು ಪತ್ತೆ ಕಾರ್ಯದಲ್ಲಿ ನಿರತರಾಗುತ್ತಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಳೆದ ಮಾರ್ಚ್ ಮಾಹೆಯಿಂದ ಕೋವಿಡ್ ಲಾಕ್‍ಡೌನ್ ನಿರ್ಬಂಧ ಮಾರ್ಗಸೂಚಿಯನ್ನು ಪಾಲಿಸುವ ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ತಮ್ಮ ಮೂಲ ಕೆಲಸವೇ ಮರೆತಂತೆ ತೋಚುತ್ತಿದೆ.
ಸಿಸಿಬಿ ಪೊಲೀಸರೂ ಕಳ್ಳಕಾಕರು, ಕೊಲೆಗಡುಕರನ್ನು ಹಿಡಿಯುವುದು, ಜೂಜು, ವೇಶ್ಯಾವಾಟಿಕೆಯಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಪ್ಪಿಸುವ ಕೆಲಸದಲ್ಲಿ ತಲ್ಲೀನರಾಗಿಲ್ಲ ಎಂದು ಹೇಳಲಾಗು ತ್ತಿದೆ. ಇನ್ನು ಸಂಚಾರ ಪೊಲೀಸರೂ ಕೊರೊನಾ ಸಂಕಷ್ಟ ಪರಿಸ್ಥಿತಿ ಇರುವ ಕಾರಣ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ಹಾಗೂ ತಪಾಸಣಾ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿಲ್ಲವಾದ್ದರಿಂದ ರಸ್ತೆ ಅಪಘಾತಗಳ ಸಂಖ್ಯೆಯೂ ಕಡಿಮೆ ಇದೆ.
ಪೊಲೀಸರಿಗೂ ಅಂಟಿದ ಸೋಂಕು: ಸದಾ ಕೋವಿಡ್ ನಿರ್ವಹಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮೈಸೂರಲ್ಲಿ ಪೊಲೀಸರಿಗೂ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ ಕೋವಿಡ್ ಬಂದೋಬಸ್ತ್ ಕರ್ತವ್ಯದಿಂದ ಹಿಂದಿರುಗಿದ್ದ 52 ಮಂದಿ ಕೆಎಸ್‍ಆರ್‍ಪಿ ಪೊಲೀಸರು ಮೈಸೂರು ನಗರ ಘಟಕದ ಓರ್ವ ಎಎಸ್‍ಐ ಸೇರಿದಂತೆ 12 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ತಗುಲಿತ್ತು. ಆ ಪೈಕಿ ಬಹುತೇಕರು ಗುಣಮುಖರಾಗಿದ್ದಾರೆ. ಸೋಂಕು ವಾರಿಯರ್‍ರಂತೆ ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿರುವ ಪೊಲೀಸರನ್ನೂ ಬೆನ್ನೇರುತ್ತಿರುವುದು ಕಂಡುಬರುತ್ತಿದೆ.