ಮರಳಿ ಕಾಡು ಸೇರಿದ `ಬಾವಿ’ ಚಿರತೆ
ಮೈಸೂರು

ಮರಳಿ ಕಾಡು ಸೇರಿದ `ಬಾವಿ’ ಚಿರತೆ

July 22, 2020

ಮೈಸೂರು, ಜು.21(ಎಂಟಿವೈ)- ಆಹಾರ ಅರಸಿ ಬಂದು ಕಾಡಂಚಿನ ಗ್ರಾಮದ 100 ಅಡಿ ಆಳದ ಬಾವಿಗೆ ಬಿದ್ದಿದ್ದ 3 ವರ್ಷದ ಹೆಣ್ಣು ಚಿರತೆಯನ್ನು ರಕ್ಷಿಸಿದ್ದ ಅರಣ್ಯ ಸಿಬ್ಬಂದಿ, ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳವಾರ ಬೆಳಗ್ಗೆ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ, ಹೆಚ್.ಡಿ. ಕೋಟೆ ತಾಲೂಕಿನ ಕಾರಾಪುರದಲ್ಲಿ 100 ಅಡಿ ಆಳದ ಬಾವಿಗೆ ಬಿದ್ದಿತ್ತು. ಸತತ 3 ದಿನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸೋಮವಾರ ಸಂಜೆ ಚಿರತೆಯನ್ನು ಬಾವಿಯಿಂದ ಹೊರತೆಗೆದು ರಕ್ಷಿಸಿದ್ದರು. 100 ಅಡಿ ಆಳದ ಬಾವಿಗೆ ಬಿದ್ದಾಗ ಚಿರತೆಯ ಕಾಲಿನ ಮೂಳೆಗೆ ಹಾನಿಯಾಗಿರಬಹುದು ಎಂದು ಶಂಕಿಸಲಾಗಿತ್ತು. ಸೋಮವಾರ ರಾತ್ರಿ ಚಿರತೆಯನ್ನು ಪರಿಶೀಲಿಸಿ ದಾಗ ಅದು ಆರೋಗ್ಯದಿಂದಿರುವುದು ದೃಢಪಟ್ಟಿತ್ತು. ಬಳಿಕ ವನ್ಯಜೀವಿ ತಜ್ಞರು ಅಭಿಪ್ರಾಯ, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಚಿರತೆಯನ್ನು ಮಂಗಳವಾರ ಬೆಳಗ್ಗೆ 10.20ಕ್ಕೆ ನಾಗರ ಹೊಳೆ ಅಭಯಾರಣ್ಯದ ಕೈಮರ ಪ್ರದೇಶದಲ್ಲಿ ಬಿಡುಗಡೆ ಮಾಡ ಲಾಯಿತು ಎಂದು ಅಂತರಸಂತೆ ವಲಯದ ಆರ್‍ಎಫ್‍ಓ ಎಸ್.ಎಸ್. ಸಿದ್ದರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು

Translate »