ಗಾಯನದ ಮೂಲಕ ಪೊಲೀಸ್ ಇನ್ಸ್‍ಪೆಕ್ಟರ್ ಕೊರೊನಾ ಜಾಗೃತಿ
ಮೈಸೂರು

ಗಾಯನದ ಮೂಲಕ ಪೊಲೀಸ್ ಇನ್ಸ್‍ಪೆಕ್ಟರ್ ಕೊರೊನಾ ಜಾಗೃತಿ

May 10, 2020

ಮೈಸೂರು, ಮೇ 9(ಆರ್‍ಕೆ)- ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕು ತೊಲಗಿಸಲು ಎಲ್ಲರೂ ಹೋರಾಡುತ್ತಿದ್ದಾರೆ. ಇದಕ್ಕೆ ಪೊಲೀಸ್ ಇನ್ಸ್‍ಪೆಕ್ಟರ್‍ವೊಬ್ಬರು ಸಾಥ್ ನೀಡಿದ್ದಾರೆ. ಈ ಮಾರಣಾಂತಿಕ ರೋಗದ ಬಗ್ಗೆ ಗಾಯನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಬಂದೋಬಸ್ತ್ ಕರ್ತವ್ಯದ ನಡುವೆಯೂ ಕೊರೊನಾ ಓಡಿಸಿ ಸುರಕ್ಷಿತವಾಗಿರುವಂತೆ ಸಂದೇಶ ನೀಡುವ ಅರ್ಥಗರ್ಭಿತ ಹಾಗೂ ಮನಮುಟ್ಟುವಂತೆ ಜಾಗೃತಿ ಮೂಡಿಸುವ ಹಾಡೊಂದನ್ನು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಸ್.ಡಿ. ಸುರೇಶ್‍ಕುಮಾರ್ ಹಾಡುವ ಮೂಲಕ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. `ಕಣ್ಣಿಗೆ ಕಾಣದು ಕೊರೊನಾ… ನಾವೆಲ್ಲಾ ಮನೆಯಲ್ಲೇ ಇರೋಣಾ. ಜನ ಸಂಪರ್ಕ ವನ್ನು ನಾವು ತೊರೆಯೋಣಾ… ಸಾಲುಗಳೊಂದಿಗೆ ಆರಂಭವಾಗುವ ಕೊರೊನಾ ಜಾಗೃತಿ ಗಾಯನವು, `ಇಂಡಿಯಾ ಜೀತೇನಾ…., ಕೊರೊನಾ ಆರೇಗಾ….’ ಸಂದೇಶದೊಂದಿಗೆ ಮುಕ್ತಾಯ ವಾಗಿದೆ. ಸ್ವತಃ ಸುರೇಶ್‍ಕುಮಾರ್ ಹಾಡಿರುವ ಕೊರೊನಾ ಜಾಗೃತಿ ಗಾಯನಕ್ಕೆ ಅಶ್ವಿನಿ ಮುರಳಿ ಸಾಹಿತ್ಯ, ಸ್ಟ್ಯಾನ್ಲಿ ದೇವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಮೈಸೂರಿನ ವಿಜಯನಗರ 3ನೇ ಹಂತದ ರಾಕೇಶ್ ಸುಧೀರ್ ಅವರ ಸ್ವರಮುದ್ರಾ ಸ್ಟುಡಿಯೋದಲ್ಲಿ ಈ ಹಾಡನ್ನು ಪವನ ಪ್ರಕಾಶ್ ವೀಡಿಯೋ ರೆಕಾರ್ಡ್ ಮಾಡಿದ್ದಾರೆ.

Translate »