ಕೊರೊನಾ ಹಿನ್ನೆಲೆ: ವನ್ಯಜೀವಿಗಳ ಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸಿ
ಚಾಮರಾಜನಗರ

ಕೊರೊನಾ ಹಿನ್ನೆಲೆ: ವನ್ಯಜೀವಿಗಳ ಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸಿ

April 8, 2020

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ
ಚಾಮರಾಜನಗರ, ಏ.7- ಅಮೆರಿಕಾದ ನ್ಯೂಯಾರ್ಕ್‍ನ ಮೃಗಾಲಯವೊಂದರಲ್ಲಿ ಹುಲಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ 2 ಪ್ರಮುಖ ಹುಲಿ ಸಂರಕ್ಷಿತ ಅಭಯಾರಣ್ಯ ಹೊಂದಿರುವ ಜಿಲ್ಲೆಯ ವನ್ಯಜೀವಿಗಳ ಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸುವಂತೆ ಡಿಸಿ ಡಾ.ಎಂ.ಆರ್.ರವಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲ್ಲಿ ಮಂಗಳವಾರ ನಡೆದ ಅರಣ್ಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯೂಯಾರ್ಕ್‍ನ ಬ್ರಾಂಕ್ಸ್ ಮೃಗಾಲಯದಲ್ಲಿ ಹುಲಿ ಹಾಗೂ ಕೆಲವು ಸಿಂಹಗಳಲ್ಲಿ ಕೊರೊನಾ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಅತೀ ಹೆಚ್ಚು ಹುಲಿಗಳ ಆಶ್ರಯ ತಾಣವಾಗಿರುವ ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾ ಧಾಮ ಹಾಗೂ ಬಂಡೀಪುರ ಹುಲಿ ರಕ್ಷಿತಾ ಅಭಯಾರಣ್ಯದಲ್ಲಿರುವ ವನ್ಯಜೀವಿಗಳ ಆರೋಗ್ಯದ ಮೇಲೆ ನಿಗಾ ಇರಿಸಲು ಸರ್ಕಾರದಿಂದ ಆದೇಶ ಬಂದಿದೆ. ಒಟ್ಟಾರೆ ಹುಲಿ ಗಣತಿ ಪ್ರಕಾರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 218 ಹುಲಿಗಳಿವೆ. ಹೀಗಾಗಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.

ಬೆಕ್ಕಿನ ಪ್ರಭೇದ ಪ್ರಾಣಿಗಳಿಗೆ ಸೋಂಕು ತಗುಲುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಹುಲಿ, ಚಿರತೆ, ಸಿಂಹ ದಂತಹ ಪ್ರಾಣಿಗಳ ಚಲನ ವಲನದ ಮೇಲೆ ನಿಗಾ ಇರಿಸ ಬೇಕು. ರೋಗ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚ ರಿಕೆ ಕ್ರಮಗಳು ಹಾಗೂ ಪ್ರಾಣಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಬಂಡೀಪುರ ಹುಲಿ ಯೋಜನೆ ನಿರ್ದೇ ಶಕರ ನೇತೃತ್ವದ ಟಾಸ್ಕ್‍ಪೋರ್ಸ್ ರಚಿಸಬೇಕು. ಅರಣ್ಯ, ಕಂದಾಯ, ಪಶುಪಾಲನೆ, ಆರೋಗ್ಯ ಇಲಾಖೆ ಅಧಿಕಾರಿ ಗಳು ಇರುವ ಟಾಸ್ಕ್‍ಫೋರ್ಸ್ ಸಮಿತಿ ಕೂಡಲೇ ಅಸ್ತಿತ್ವಕ್ಕೆ ಬಂದು ಕಾರ್ಯಾರಂಭ ಮಾಡಬೇಕು ಎಂದರು.

ಕಾಡುಪ್ರಾಣಿಗಳ ವರ್ತನೆ ಬಗ್ಗೆ ನಿತ್ಯ ಗಮನ ಹರಿಸ ಬೇಕು. ಅರಣ್ಯದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಹಾಗೂ ಇನ್ನಿತರ ಅತ್ಯಾಧುನಿಕ ಸಲಕರಣೆಗಳ ಸಹಾಯದಿಂದ ಪ್ರಾಣಿಗಳ ಚಲನವಲನ ಸಹಜ ಸ್ಥಿತಿ ಬಗ್ಗೆ ಖಾತರಿಪಡಿಸಿ ಕೊಳ್ಳಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಅಥವಾ ಶಂಕಿತ ಪ್ರಕರಣಗಳು ಕಂಡು ಬಂದರೆ ಕೂಡಲೇ ಔಷಧೋಪಚಾರ, ಸಂರಕ್ಷಣೆ ಕ್ರಮಕ್ಕೆ ಮುಂದಾಗಬೇಕು. ವನ್ಯಜೀವಿಗಳ ಆರೋಗ್ಯ ಸಂಬಂಧ ನಿಗಾ ವಹಿಸಲು ನೋಡೆಲ್ ಅಧಿಕಾರಿ ನೇಮಿಸ ಬೇಕು. ಅಲ್ಲದೇ ಯಾವುದೇ ಮಾಹಿತಿ ವಿಷಯ, ಅಲ್ಲದೆ ದೂರುಗಳು, ನೆರವಿಗೆ ಅರಣ್ಯ ಇಲಾಖೆಯ 1926 ಸಂಖ್ಯೆ ಉಚಿತ ದೂರವಾಣಿಗೆ ಕರೆ ಮಾಡಲು ಜಾಗೃತಿ ಮೂಡಿಸ ಬೇಕು ಎಂದರು. ಪ್ರಸ್ತುತ ಯಾವುದೇ ಆತಂಕವಿಲ್ಲ. ಬಂಡೀ ಪುರ, ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತಾರಣ್ಯ ಹಾಗೂ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಆರೋಗ್ಯ ರಕ್ಷಣೆಗೆ ಪಶು ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಔಷಧ, ಲಸಿಕೆ, ಪ್ರಯೋಗಾಲಯ ಸೇರಿದಂತೆ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಅರಣ್ಯದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಆರೋಗ್ಯ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈಗಾಗಲೇ ಜಿಲ್ಲೆಯ ಎಲ್ಲಾ ಅಭಯಾರಣ್ಯಗಳಿಗೆ ಪ್ರವಾಸಿಗರು ಪ್ರವೇಶಿಸದಂತೆ ಆದೇಶ ಹೊರಡಿಸಲಾಗಿದೆ. ಅರಣ್ಯ ಸಿಬ್ಬಂದಿ ಪಶು ವೈದ್ಯಕೀಯ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನೆರವು ಪಡೆದು ಯಾವುದೇ ಪ್ರಕರಣಗಳಿಗೆ ಅವಕಾಶವಾಗ ದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ನೆರವು ನೀಡಲಿದೆ ಎಂದರು.

ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದ ಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ, ಬಿಆರ್‍ಟಿ ಸಹಾ ಯಕ ಸಂರಕ್ಷಣಾಧಿಕಾರಿ ರಮೇಶ್, ಎಡಿಸಿ ಸಿ.ಎಲ್. ಆನಂದ್, ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ವೀರಭದ್ರಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಸೇರಿ ದಂತೆ ಇತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

Translate »