ಭಾರೀ ಗಾಳಿ ಮಳೆ: ಬಾಳೆ, ಮುಸುಕಿನ ಜೋಳ ನಾಶ
ಚಾಮರಾಜನಗರ

ಭಾರೀ ಗಾಳಿ ಮಳೆ: ಬಾಳೆ, ಮುಸುಕಿನ ಜೋಳ ನಾಶ

April 8, 2020

ಲಕ್ಷಾಂತರ ರೂ. ನಷ್ಟ, ಸ್ಥಳಕ್ಕೆ ಶಾಸಕ, ಅಧಿಕಾರಿಗಳ ಭೇಟಿ, ಪರಿಶೀಲನೆ
ಹನೂರು, ಏ.7- ಭಾರೀ ಗಾಳಿ ಮಳೆಗೆ ಲಕ್ಷಾಂತರ ರೂ. ಮೌಲ್ಯದ ಬಾಳೆ, ಮುಸುಕಿನ ಜೋಳ ನಾಶವಾಗಿರುವ ಘಟನೆ ತಾಲೂಕಿನ ಗಾಜನೂರು ಹಾಗೂ ಮಿಣ್ಯಂ ಗ್ರಾಮಗಳಲ್ಲಿ ಸೋಮವಾರ ಸಂಜೆ ನಡೆದಿದೆ.

ಮಿಣ್ಯಂ ಗ್ರಾಮದ ಭೈರಲಿಂಗಪ್ಪ 4.5 ಎಕರೆಯಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ 1600 ಬಾಳೆ ಗಿಡ, ಬೆಟ್ಟದಯ್ಯನವರ ಜಮೀನಿನಲ್ಲಿ ಬೆಳೆದಿದ್ದ 3 ಸಾವಿರ ಬಾಳೆ ಗಿಡ, ಮಧುರ ಅವರ ಜಮೀನಿನಲ್ಲಿದ್ದ 2 ಸಾವಿರ ಬಾಳೆ ಗಿಡ, ಮಾದೇಗೌಡರ ಜಮೀನಿನಲ್ಲಿ ಬೆಳೆದಿದ್ದ 2,600 ಬಾಳೆ ಗಿಡ, ಕಾಳಮ್ಮ ಅವರಿಗೆ ಸೇರಿದ 1 ಸಾವಿರ ಬಾಳೆ ಗಿಡ, ದೇವ ಅವರ ಜಮೀನಿನಲ್ಲಿದ್ದ 1,500 ಬಾಳೆ ಗಿಡ ಹಾಗೂ ಗಾಜನೂರು ಗ್ರಾಮದ ದೊಡ್ಡಮ್ಮ ನವರ ಜಮೀನಿನಲ್ಲಿದ್ದ 1200 ಒಂಟಿಗೌಡರ ಜಮೀನಿನಲ್ಲಿ ಬೆಳೆದಿದ್ದ 500 ಬಾಳೆ ಗಿಡಗಳು ಭಾರೀ ಗಾಳಿ ಮಳೆಗೆ ನಾಶವಾಗಿದ್ದರೇ, ಈ ಭಾಗದ ಹತ್ತಾರು ಎಕರೆ ಪ್ರದೇಶದಲ್ಲಿದ್ದ ಮುಸುಕಿನ ಜೋಳ ನೆಲಕಚ್ಚಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಶಾಸಕ ಆರ್.ನರೇಂದ್ರ, ತಹಸೀಲ್ದಾರ್ ಭೇಟಿ: ವಿಷಯ ತಿಳಿದು ಮಂಗಳವಾರ ಬೆಳಿಗ್ಗೆ ಶಾಸಕ ಆರ್. ನರೇಂದ್ರ, ಜಿಪಂ ಸದಸ್ಯ ಬಸವರಾಜು, ತಹಸೀಲ್ದಾರ್ ಬಸವರಾಜು ಚಿಗರಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದರು. ಈ ವೇಳೆ ಸ್ಥಳದಲ್ಲಿದ್ದ ರೈತರು ಸಾಕಷ್ಟು ಖರ್ಚು ಮಾಡಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಬಾಳೆ ಹಾಗೂ ಮುಸುಕಿನ ಜೋಳದ ಫಸಲು ಭಾರೀ ಗಾಳಿ ಮಳೆಗೆ ನಾಶವಾಗಿದೆ. ಹೀಗಾಗಿ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಾಸಕ ಆರ್.ನರೇಂದ್ರ, ಸರ್ಕಾರದಿಂದ ರೈತರಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕೆಂದು ಸೂಚಿಸಿದರು.

Translate »