ಬ್ಯಾಂಕ್‍ಗಳ ಮುಂದೆ ‘ಸಾಮಾಜಿಕ ಭದ್ರತಾ ಪಿಂಚಣಿದಾರರ’ ದಾಂಗುಡಿ
ಚಾಮರಾಜನಗರ

ಬ್ಯಾಂಕ್‍ಗಳ ಮುಂದೆ ‘ಸಾಮಾಜಿಕ ಭದ್ರತಾ ಪಿಂಚಣಿದಾರರ’ ದಾಂಗುಡಿ

April 8, 2020

ಪಿಂಚಣಿ, ಸಹಾಯಧನ ಪಡೆಯಲು ಮುಗಿಬಿದ್ದ ಫಲಾನುಭವಿಗಳು, ಗ್ರಾಹಕರನ್ನು ನಿಯಂತ್ರಿಸಲು ಬ್ಯಾಂಕ್ ಸಿಬ್ಬಂದಿ ಹೈರಾಣ
ಚಾಮರಾಜನಗರ, ಏ.7(ಎಸ್‍ಎಸ್)- ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ ಯೋಜನೆಗಳ ಹಣವನ್ನು ಸರ್ಕಾರ ಫಲಾನುಭವಿ ಗಳ ಖಾತೆಗೆ ಜಮಾ ಮಾಡಿದ್ದು, ಹಣ ತೆಗೆದು ಕೊಳ್ಳಲು ನಗರದ ವಿವಿಧ ಬ್ಯಾಂಕ್‍ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಮೂಲಕ ಸಾವಿರಾರು ಫಲಾನುಭವಿಗಳು ಪರದಾಡುವಂತಾಗಿದೆ.

ಸರ್ಕಾರ ಜನ್‍ಧನ್ ಖಾತೆ ಹೊಂದಿರುವ ಮಹಿಳೆಯರ ಖಾತೆಗೆ 500 ರೂ., ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ 2 ಸಾವಿರ ರೂ., ಅಲ್ಲದೇ ವಿಧವಾ ವೇತನ, ಅಂಗವಿಕಲರ ವೇತನ, ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿದೆ. ಆದರೆ ಪ್ರಸ್ತುತ ಕೊರೊನಾ ನಿಯಂ ತ್ರಣ ಸಲುವಾಗಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಪರಿತಪಿಸುತ್ತಿರುವ ಜನರು ಹಣ ಪಡೆಯಲು ಬ್ಯಾಂಕ್‍ನತ್ತ ಧಾವಿಸುತ್ತಿದ್ದಾರೆ. ಹೀಗಾಗಿ ಮಂಗಳವಾರ ನಗರದ ಎಸ್‍ಬಿಐ, ಯೂನಿಯನ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕ್ ಗಳ ಎದುರು ನಿಂತಿದ್ದ ಸಾವಿರಾರು ಫಲಾನುಭವಿ ಗಳ ಸರದಿ ಸಾಲು ಕಂಡು ಬಂತು. ಅಲ್ಲದೇ ಹಣ ಪಡೆಯಲು ಬೆಳಿಗ್ಗೆಯಿಂದ ಸಂಜೆವರೆಗೆ ಪಾಸ್ ಪುಸ್ತಕ ಹಿಡಿದು ನಿಂತಿದ್ದ ಫಲಾನುಭವಿಗಳು ಹಾಗೂ ಗ್ರಾಹಕರ ಪರದಾಟ ಹೇಳತೀರದಾಗಿತ್ತು. ಅಲ್ಲದೇ ಹಣ ಪಡೆಯಲು ನಾ ಮುಂದು, ತಾ ಮುಂದು ಎಂದು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು.

ನಗರದ ಭುವನೇಶ್ವರಿ ವೃತ್ತದಲ್ಲಿರುವ ಎಸ್‍ಬಿಐ ತನ್ನ ಗ್ರಾಹಕರಿಗೆ ಕುರ್ಚಿ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಕೊರೊನಾ ವೈರಸ್ ಹರಡುವು ದನ್ನು ತಪ್ಪಿಸಲು ಒಬ್ಬ ಗ್ರಾಹಕನಿಂದ ಮತ್ತೊಬ್ಬ ಗ್ರಾಹಕರ ನಡುವೆ ಅಂತರ ಇರುವಂತೆ ಕುರ್ಚಿ ಗಳನ್ನು ಹಾಕಲಾಗಿತ್ತು. ಅಲ್ಲದೇ ನಗರದ ಜೋಡಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್‍ನಲ್ಲಿ ಹಣ ಪಡೆಯಲು ಫಲಾನುಭವಿಗಳು ನಿಂತಿದ್ದ ಸರದಿ ಸಾಲು ಜಿಲ್ಲಾಡಳಿತ ಭವನದ ದ್ವಾರ ತಲುಪಿತ್ತು. ನಗರದ ಇಂಡಿಯನ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್‍ಗಳ ಎದುರು ಹಣ ಪಡೆಯಲು ನಿಂತಿದ್ದ ಗ್ರಾಹಕರ ಸಾಲು ಕಂಡು ಬಂತು. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಸಾಲು ಮಾಡಲಾಗಿತ್ತು.

ವದಂತಿ: ತಮ್ಮ ಖಾತೆಗೆ ಸರ್ಕಾರ ಜಮಾ ಮಾಡಿ ರುವ ಹಣವನ್ನು ಏ.9ರೊಳಗೆ ಡ್ರಾ ಮಾಡದಿ ದ್ದರೇ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಾವಿರಾರು ಫಲಾನುಭವಿಗಳು ಹಾಗೂ ಗ್ರಾಹಕರು ಮಂಗಳವಾರ ನಗರದ ಬ್ಯಾಂಕ್‍ಗಳ ಎದುರು ಸರದಿ ಸಾಲಿನಲ್ಲಿ ನಿಂತು ಹಣ ಡ್ರಾ ಮಾಡಲು ಮುಗಿಬಿದ್ದರು.

ಈ ವೇಳೆ ಬ್ಯಾಂಕ್‍ಗಳ ಎದುರು ಗ್ರಾಹಕರ ಜಮಾವಣೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಹಕರನ್ನು ದೂರ ದೂರ ನಿಲ್ಲಿಸಿ ಹಣ ಡ್ರಾ ಮಾಡಲು ನೆರವಾದರು.

ಸ್ಪಷ್ಟನೆ: ಫಲಾನುಭವಿಗಳ ಖಾತೆಗೆ ಒಮ್ಮೆ ಜಮಾ ಆದ ಹಣವನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಎಂದಾದರೂ ಹಣ ತೆಗೆದು ಕೊಳ್ಳಬಹುದು. ಯಾವುದೇ ರೀತಿಯ ವದಂತಿ ಗಳಿಗೆ ಕಿವಿಗೊಡಬೇಡಿ. ಹಣದ ಅವಶ್ಯಕತೆ ಇದ್ದರೆ ಮಾತ್ರ ಸಾಲಿನಲ್ಲಿ ನಿಲ್ಲಿ. ಅಲ್ಲದೇ ಹಣ ಪಡೆಯಲು ಕುಟುಂಬದ ಎಲ್ಲಾ ಸದಸ್ಯರು ಬರುವುದು ಬೇಡ. ಖಾತೆದಾರರೊಬ್ಬರು ಬಂದರೆ ಸಾಕು ಎಂದು ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಕೆಲ ಗ್ರಾಹಕರು ಸ್ಥಳದಿಂದ ಹಿಂದಿರುಗಿದರು.

Translate »