ಕೊರೊನಾ ಭಯ; ಟೆಸ್ಟ್‍ಗಾಗಿ ಸಾಲುಗಟ್ಟುತ್ತಿರುವ ಜನ
ಮೈಸೂರು

ಕೊರೊನಾ ಭಯ; ಟೆಸ್ಟ್‍ಗಾಗಿ ಸಾಲುಗಟ್ಟುತ್ತಿರುವ ಜನ

May 28, 2021

ಮೈಸೂರು, ಮೇ 27(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆಯಿಂದಾಗಿ ದಿನೇದಿನೆ ಸಾವು-ನೋವಿನ ಸಂಖ್ಯೆ ಏರಿಕೆ ಆಗುತ್ತಿದೆ. ಪರಿಣಾಮ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿ ಕೋವಿಡ್ ಪರೀಕ್ಷೆಗೆ ಮುಗಿಬೀಳುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಸೋಂಕು ವೇಗವಾಗಿ ವ್ಯಾಪಿಸುತ್ತಿದೆ. ಇದರಿಂದ ಆತಂಕಗೊಂಡಿರುವ ಜನರು, ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿದರೂ ಕೊರೊನಾ ಸೋಂಕಿನ ಭಯದಿಂದ ಕೋವಿಡ್ ಪರೀಕ್ಷಾ ಕೇಂದ್ರ ಗಳÀತ್ತ ಧಾವಿಸುತ್ತಿದ್ದಾರೆ. ಮೈಸೂರು ನಗರ, ತಾಲೂಕು ಕೇಂದ್ರಗಳಲ್ಲಿ ದಿನದಲ್ಲಿ ಗರಿಷ್ಠ 7500ರವರೆಗೆ ಟೆಸ್ಟ್ ನಡೆಸುತ್ತಿದ್ದು, ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಈಗ 3 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಾದರೆ ಹಣ ಕಟ್ಟಬೇಕಿರುವುದರಿಂದ ನಗರ, ತಾಲೂಕಿನ ಸರ್ಕಾರಿ ಪರೀಕ್ಷಾ ಕೇಂದ್ರಗಳ ಮುಂದೆ ಜನ ಸಾಲುಗಟ್ಟುತ್ತಿದ್ದಾರೆ.

ಮೈಸೂರಲ್ಲಿ ಈ ಹಿಂದೆ 32 ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್ ನಡೆಯುತ್ತಿತ್ತು. ಈಗ 16 ಕೇಂದ್ರಗಳಷ್ಟೇ ಇದ್ದು, ಕಡಿಮೆ ಸಂಖ್ಯೆ ಪರೀಕ್ಷೆ ನಡೆಸಲಾಗುತ್ತಿದೆ. ಹಾಗಾಗಿ ಹಲವರು ಟೆಸ್ಟ್ ಸಾಧ್ಯವಾಗದೇ ವಾಪಸಾಗುತ್ತಿದ್ದಾರೆ. ತಾಲೂಕು ಕೇಂದ್ರಗಳಲ್ಲೂ ಇದೇ ಸಮಸ್ಯೆ ಇದೆ.

ಮೈಸೂರಿನ 3 ವಿಧಾನಸಭಾ ಕ್ಷೇತ್ರಗಳಲ್ಲಿ 3 ದೊಡ್ಡ `ಕೋವಿಡ್ ಮಿತ್ರ’ ಸಲಹೆ-ಚಿಕಿತ್ಸಾ ಕೇಂದ್ರ ತೆರೆಯ ಲಾಗಿದೆ. ನಗರದ ವಿವಿಧೆಡೆ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ `ಮಿನಿ ಕೋವಿಡ್ ಮಿತ್ರ’ ಆರಂಭಿಸ ಲಾಗಿದೆ. ತಾಲೂಕು ಮಟ್ಟದಲ್ಲೂ `ಕೋವಿಡ್ ಮಿತ್ರ’ ಕಾರ್ಯನಿರ್ವಹಿಸುತ್ತಿದ್ದು, ಸಿಮ್ಟಮ್ಯಾಟಿಕ್ ಅಂಡ್ ಸಿಂಡ್ರೋಮಿಕ್ ಅಪ್ರೋಚ್ ಮಾದರಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಕೆಮ್ಮು, ಜ್ವರ, ನೆಗಡಿ, ತಲೆ ನೋವು, ಮೈ-ಕೈ ನೋವು ಇದ್ದವರು ಇಲ್ಲಿ ತಪಾಸಣೆ ಗೊಳಗಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಮೈಸೂರಿನ ಪುರಭವನದಲ್ಲಿ 150 ಮಂದಿಗೆ, ಕೂಬಾ ಆಂಪಿ ಥಿಯೇಟರ್‍ನಲ್ಲಿ 100, ಕುಂಬಾರ ಕೊಪ್ಪಲು ಪಿಹೆಚ್‍ಸಿ 50, ರಾಜೇಂದ್ರನಗರ 50, ಜಯ ನಗರ ಸಿಹೆಚ್‍ಸಿ 150, ಬನ್ನಿಮಂಟಪ 50, ಚಾಮುಂಡಿ ಪುರಂ 100, ವಿವಿಪುರಂ 50, ಚಿಕ್ಕ ಗಡಿಯಾರ ವೃತ್ತ 150, ಬೀಡಿ ಕಾರ್ಮಿಕರ ಆಸ್ಪತ್ರೆ 50, ಮಕ್ಕಳ ಕೂಟ 150, ನಾಚನಹಳ್ಳಿ ಪಾಳ್ಯ ಪಿಹೆಚ್‍ಸಿ 50, ಗಿರಿಯಾಭೋವಿ ಪಾಳ್ಯ ಪಿಹೆಚ್‍ಸಿ 50 ಸೇರಿದಂತೆ ದಿನಕ್ಕೆ ಒಟ್ಟು 1125 ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ 50 ಮಂದಿಗೆ, ಜಿಲ್ಲಾಸ್ಪತ್ರೆ ಯಲ್ಲಿ 100, ಸೇಟ್ ತುಳಸಿದಾಸ್ ಆಸ್ಪತ್ರೆಯಲ್ಲಿ (ಗಂಭೀರ ಸ್ಥಿತಿಯವರಿಗಷ್ಟೆ) 50 ಮಂದಿ ಸೇರಿದಂತೆ ಮೈಸೂರು ನಗರದಲ್ಲಿ ಒಟ್ಟು 1325 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ತಾಲೂಕುಗಳಲ್ಲಿ ತಲಾ 200 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ಮಿತವಾಗಿ ಪರೀಕ್ಷಾ ಕಿಟ್ ನೀಡಿರುವುದರಿಂದ ಟೋಕನ್ ಖಾಲಿಯಾದ ನಂತರ ಬಂದವರನ್ನು ವಾಪಸ್ ಕಳುಹಿಸಲಾಗುತ್ತಿದೆ.

Translate »