ಮೈಸೂರು, ಜೂ.2(ಎಂಕೆ)- ಕೊರೊನಾ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಮೈಸೂರು ಮತ್ತು ಚಾ.ನಗರದ ವಿವಿಧ ಕಲಾ ಪ್ರಕಾರಗಳ ಕಲಾವಿದರಿಗೆ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಹಿರಿಯ ರಂಗಕರ್ಮಿಗಳು ನೆರವಾಗಿದ್ದಾರೆ.
ಲಾಕ್‍ಡೌನ್‍ನಿಂದ ಅದಾಯವಿಲ್ಲದೆ ಬರಿಗೈಯಲ್ಲಿರುವ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಕಲಾ ವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಈಗಾಗಲೇ ಎರಡು ಬಾರಿ ನೇರ ಫೋನ್ ಇನ್ ಕಾರ್ಯಕ್ರಮ ನಡೆಸಿ, ಕಲಾವಿದರ ಕಷ್ಟ ಕೇಳಿ ಪರಿಹರಿಸುವ ಪ್ರಯತ್ನ ಮಾಡಲಾಗಿದೆ.
ಟ್ರಸ್ಟ್ ವತಿಯಿಂದ 2 ಲಕ್ಷದ 1 ಸಾವಿರ ರೂ. ಸಂಗ್ರಹಿಸಿ, ಮೈಸೂರು ಮತ್ತು ಚಾ.ನಗರದ 68 ಮಂದಿ ಕಲಾವಿದರಿಗೆ ತಿಂಗಳಿಗಾಗು ವಷ್ಟು ಔಷಧಿ-ಮಾತ್ರೆಗಳನ್ನು ನೀಡಲಾಗಿದೆ. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಹಾಗೂ ಹಿರಿಯ ರಂಗಕರ್ಮಿಗಳ ಸಹಕಾರದಿಂದ ಸಿದ್ದವಾದ ಹಲವು ಬಗೆಯ ಆಹಾರ ಪದಾರ್ಥಗಳಿರುವ 500 ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ. ವೃತ್ತಿ ಕಲಾವಿದರಿಗೆ, ಸೋಬಾನೆ ಪದ ಹಾಡುವ ಮಹಿಳಾ ಕಲಾವಿದರಿಗೆ, ಕಲಾ ಮಂದಿರ ಹಾಗೂ ರಂಗಾಯಣದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡುವ ಮೂಲಕ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವು ನೀಡಲಾಗಿದೆ.
ನೆರವಿನ ಅಗತ್ಯ ಹೆಚ್ಚಿದೆ: ಲಾಕ್‍ಡೌನ್ ನಿಂದಾಗಿ ಎಲ್ಲಿಯೂ ಯಾವುದೇ ರೀತಿಯ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕಲೆಯನ್ನೇ ನಂಬಿ ಬದುಕುತ್ತಿದ್ದ ಕಲಾವಿದರು ಆರ್ಥಿಕ ಸಂಕ ಷ್ಟಕ್ಕೆ ಸಿಲುಕಿದ್ದು, ಔಷಧಿ ಮಾತ್ರೆಗಳಿಗೂ ಪರದಾಡುತ್ತಿದ್ದಾರೆ. ಸರ್ಕಾರದ ಜೊತೆಗೆ ದಾನಿಗಳ ನೆರವು ಹೆಚ್ಚಾಗಿ ಬೇಕಾಗಿದೆ. ಕಲೆ- ಸಾಹಿತ್ಯ, ಸಂಸ್ಕøತಿಗಳ ರಾಯಬಾರಿಗಳಾದ ಕಲಾವಿದರನ್ನು ಉಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯ ನಿರ್ದೇಶಕ ಹೆಚ್.ಚೆನ್ನಪ್ಪ ತಿಳಿಸಿದರು.