ನಂಜನಗೂಡು, ಮಾ.18(ರವಿ)-ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕೊರೊನಾ ಭೀತಿ ದಕ್ಷಿಣಕಾಶಿ ಪ್ರಸಿದ್ಧಿಯ ನಂಜನಗೂಡಿಗೂ ತಟ್ಟಿದ್ದು, ಇಲ್ಲಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾ.31ರವರೆಗೆ ಪ್ರವೇಶ ನಿಷೇಧಿಸಿ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ ಬೆಂಗಳೂರು ವಲಯ ಆದೇಶ ಹೊರಡಿಸಿದೆ. ಪೂಜಾ ಪುನಸ್ಕಾರ, ಧಾರ್ಮಿಕ ಕೈಂಕರ್ಯ ಎಂದಿನಂತೆ ನಡೆಯಲಿದೆ.
ಈ ಬಗ್ಗೆ ದೇಗುಲ ಕಾರ್ಯ ನಿರ್ವಾ ಹಕ ಅಧಿಕಾರಿ ಶಿವಕುಮಾರಯ್ಯ ಮಾತ ನಾಡಿ, ಪುರಾತತ್ವ ಇಲಾಖೆಯಿಂದ ಇಂದು ಮಧ್ಯಾಹ್ನ ಭಕ್ತರಿಗೆ ದೇಗುಲ ಪ್ರವೇಶ ನಿಷೇಧ ಹೇರುವ ಕುರಿತ ಆದೇಶದ ಪ್ರತಿ ಕಚೇರಿ ತಲುಪಿದೆ. ಆದೇಶ ಜಾರಿಗಾಗಿ ಜಿಲ್ಲಾಧಿಕಾರಿಗಳ ನಿರ್ದೇಶನಕ್ಕೆ ಕಾಯು ತ್ತಿದ್ದೇವೆ ಎಂದರು. ಸ್ಥಳೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಭಕ್ತಾದಿಗಳು ಪ್ರವೇಶ ನಿಷೇಧಕ್ಕೆ ನಾಳೆಯಿಂದ ಕ್ರಮ ವಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಥೋತ್ಸವಕ್ಕೆ ಕರಿ ನೆರಳು: ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಪ್ರಸಿದ್ಧ ಪಂಚ ಮಹಾರಥೋತ್ಸವಕ್ಕೆ ಕೊರೊನಾ ಕರಿ ನೆರಳು ಆವರಿಸಿದೆ. ಏ.4ರಂದು ಜರುಗುವ ಗೌತಮ ಪಂಚ ಮಹಾ ರಥೋತ್ಸಕ್ಕೆ ಇನ್ನೂ 15 ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಭಾಗಶಃ ಪೂರ್ಣ ಗೊಳ್ಳಬೇಕಿದ್ದ ಸಿದ್ಧತಾ ಕಾರ್ಯಗಳು ಅಪೂರ್ಣಗೊಂಡಿದೆ. ಜಾತ್ರೆ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಬೇಕಿದ್ದ ಅಂತಿಮ ಸುತ್ತಿನ ಸಭೆ ಇಲ್ಲಿಯವರೆಗೂ ಸಭೆ ನಡೆದಿಲ್ಲ. ಪುರಾತತ್ವ ಇಲಾಖೆಯಿಂದ ಮಾ.31 ರವರಿಗೆ ದೇಗುಲ ಪ್ರವೇಶಕ್ಕೆ ಭಕ್ತಾದಿಗಳಿಗೆ ನಿಷೇಧ ಹೇರುವ ಆದೇಶ ಹೊರ ಬಿದ್ದಿರುವ ಕಾರಣ ಜಾತ್ರೆ ನಡೆಯುವ ಬಗ್ಗೆ ಭಕ್ತರಲ್ಲಿ ಅನುಮಾನ ಮೂಡಿದೆ.