ಚುಂಚನಕಟ್ಟೆ ಸಂತೆ ರದ್ದು
ಮೈಸೂರು ಗ್ರಾಮಾಂತರ

ಚುಂಚನಕಟ್ಟೆ ಸಂತೆ ರದ್ದು

March 19, 2020

ಚುಂಚನಕಟ್ಟೆ, ಮಾ.18(ಮಧು)- ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾತ್ರೆ-ಸಂತೆ, ಸಭೆ-ಸಮಾ ರಂಭಗಳಿಗೆ ನಿಷೇಧ ಹೇರಿ ಆದೇಶ ಹೊರಡಿ ಸಿದೆ. ಆದರೆ ಇದರ ಅರಿವೇ ಇಲ್ಲದೆ ತಮ್ಮ ಜಾನುವಾರು-ಸಾಕುಪ್ರಾಣಿಗಳೊಂದಿಗೆ ಆಗಮಿಸಿದ್ದ ರೈತರು, ವ್ಯಾಪಾರಿಗಳು ಸಂತೆ ರದ್ದುಗೊಂಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಬೇಕಾಯಿತು.

ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚುಂಚನಕಟ್ಟೆ ಗ್ರಾಮದ ಎಪಿಎಂಸಿ ಮಾರು ಕಟ್ಟೆ ಆವರಣದಲ್ಲಿ ಪ್ರತಿ ಬುಧವಾರ ಜಾನುವಾರು ಹಾಗೂ ಕೃಷಿ ಉತ್ಪನ್ನಗಳ ಮಾರಾಟ ಸಂತೆ ನಡೆಯುತ್ತದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಳು ಹೊರಡಿಸಿರುವ ಸೆಕ್ಷನ್ 144(3) ನಿಂದಾಗಿ ವಾರಗಳ ಕಾಲ ಸಂತೆ-ಜಾತ್ರೆ, ಧಾರ್ಮಿಕ ಕಾರ್ಯಗಳಿಗೆ ಅವಕಾಶವಿಲ್ಲ. ಈ ಕುರಿತು ಮಾಹಿತಿ ಇಲ್ಲದ ಕಾರಣ ಮುಂಜಾನೆಯಿಂದಲೇ ವಿವಿಧ ತಾಲೂಕಿನ ಗ್ರಾಮಗಳು, ಮೈಸೂರಿನ ಸಮೀಪದ ಜಿಲ್ಲೆಗಳು ಸೇರಿದಂತೆ ನೆರೆ ರಾಜ್ಯ ಕೇರಳ, ತಮಿಳುನಾಡಿನಿಂದಲೂ ಸಾಕಷ್ಟು ಸಂಖ್ಯೆ ಯಲ್ಲಿ ಜನ ಸಂತೆಗೆ ಆಗಮಿಸಿದ್ದರು. ಆಟೋ, ಗೂಡ್ಸ್ ವಾಹನಗಳಲ್ಲಿ ರೈತರು ದನ-ಕರು, ಕುರಿ-ಕೋಳಿಗಳು ಸೇರಿದಂತೆ ಇನ್ನಿತರ ಸಾಕುಪ್ರಾಣಿಗಳು ಹಾಗೂ ತರಕಾರಿ, ಹಣ್ಣು-ದಿನಸಿ ಪದಾರ್ಥಗಳನ್ನು ತಂದು ಮಾರಾಟಕ್ಕೆ ಅಣಿಯಾಗಿದ್ದರು. ಅಲ್ಲದೆ ಇವುಗಳನ್ನು ಕೊಳ್ಳಲು ಸಾಕಷ್ಟು ಸಂಖ್ಯೆ ಯಲ್ಲಿ ರೈತರು, ಸಾರ್ವಜನಿಕರು ಸಂತೆ ಆವರಣದಲ್ಲಿ ಜಮಾಯಿಸಿದ್ದರು.

ಕೊರೊನಾ ಸೋಂಕು ತಡೆಗೆ ತೀವ್ರ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಖಡಕ್ ಆದೇಶದ ಮೇರೆಗೆ ಕುಪ್ಪೆ ಗ್ರಾಪಂ ಪಿಡಿಓ ಚಂದ್ರಶೇಖರ್ ಪೊಲೀಸ್ ಸರ್ಪಗಾವಲಿನಲ್ಲಿ ಸ್ಥಳಕ್ಕಾಗಮಿಸಿ, ಸಂತೆ ಆವರಣ ಹಾಗೂ ಸಂತೆ ಸಂಪರ್ಕಿಸುವ ಮುಖ್ಯ ರಸ್ತೆಗಳನ್ನೇ ಬಂದ್ ಮಾಡಿದರು. ವ್ಯಾಪಾರ, ಖರೀದಿಗಾಗಿ ಬಂದಿದ್ದವರನ್ನು ಅಲ್ಲಿಂದ ಹೊರ ಕಳುಹಿಸಲಾಯಿತು.

ಯುಗಾದಿ ಹಬ್ಬ ಸಮೀಪಿಸುತ್ತಿರುವ ಹಿನೆÀ್ನಲೆಯಲ್ಲಿ ಭರ್ಜರಿ ವ್ಯಾಪಾರದ ನಿರೀಕ್ಷೆಯೊಂದಿಗೆ ಬಂದ ವ್ಯಾಪಾರಸ್ಥರು ಸಂತೆ ರದ್ದಿನಿಂದ ಬಂದ ದಾರಿಗೆ ಸುಂಕ ವಿಲ್ಲವೆಂದು ಹಿಂದಿರುಗಿದರೆ, ರೈತರು, ಸಾರ್ವಜನಿಕರು ಮನೆ ದಾರಿ ಹಿಡಿದರು.

ಕರುಗಳ ರಕ್ಷಣೆ: ಇನ್ನು ಸಂತೆಯಿಂದ ಕಸಾಯಿ ಖಾನೆಗೆ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ, ಸುಮಾರು 14 ಸಣ್ಣ ಕರುಗಳನ್ನು ಪೊಲೀಸರು ರಕ್ಷಿಸಿ ಪಿಂಜರಾಪೋಲ್‍ಗೆ ರವಾನಿಸಿದರು.

Translate »