ರಂಗನತಿಟ್ಟು, ಕೊಕ್ಕರೆ ಬೆಳ್ಳೂರಲ್ಲಿ ರಾಸಾಯನಿಕ ಸಿಂಪಡಣೆ
ಮೈಸೂರು

ರಂಗನತಿಟ್ಟು, ಕೊಕ್ಕರೆ ಬೆಳ್ಳೂರಲ್ಲಿ ರಾಸಾಯನಿಕ ಸಿಂಪಡಣೆ

March 18, 2020

ಅರಣ್ಯ ಇಲಾಖೆ ನಿದ್ದೆಗೆಡಿಸಿದ ಹಕ್ಕಿಜ್ವರ; ಹೆಬ್ಬಾಳು ಕೆರೆ, ವಿದ್ಯಾರಣ್ಯಪುರಂನಲ್ಲೂ ದ್ರಾವಣ ಸಿಂಪಡಣೆ
ಲಿಂಗಾಂಬುದಿ, ಕುಕ್ಕರಹಳ್ಳಿ, ಮಳಲವಾಡಿ ಕೆರೆಯಲ್ಲಿ ಪಕ್ಷಿಗಳ ಆರೋಗ್ಯ ಪರಿಶೀಲಿಸಲು ಗಸ್ತು

ಮೈಸೂರು,ಮಾ.17(ಎಂಟಿವೈ)- ಕೇರಳದ ಕೋಜಿ ಕ್ಕೋಡ್ ನಂತರ ಮೈಸೂರಲ್ಲಿಯೂ ಹಕ್ಕಿಜ್ವರದಿಂದಲೇ ಪಕ್ಷಿಗಳ ಸಾವು ಸಂಭವಿಸಿದೆ ಎಂಬುದು ದೃಢಪಟ್ಟ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನ ತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರಲ್ಲಿ ಹಕ್ಕಿಜ್ವರ (ಹೆಚ್5ಎನ್1) ವೈರಸ್ ನಾಶಪಡಿಸುವ ರಾಸಾಯ ನಿಕ ಸಿಂಪಡಣೆ ಕಾರ್ಯ ಆರಂಭವಾಗಿದೆ. ಈ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

67 ಎಕರೆ ವಿಸ್ತೀರ್ಣದ ರಂಗನತಿಟ್ಟು ಪಕ್ಷಿಧಾಮ ದಲ್ಲಿ ಓಪನ್‍ಬಿಲ್ ಸ್ಟಾರ್ಕ್, ಪೇಂಟೆಡ್ ಸ್ಟಾರ್ಕ್, ಪರ್ಪಲ್ ಹೆರಾನ್, ಕಾಡುಹುಣಸೆ, ಕಾರ್ಮೊರೆಂಟ್, ಬಿದಿರು, ರೈನ್ ಟ್ರೀ, ಪಾಂಡ್ ಹೆರಾನ್ ಮತ್ತು ಸ್ಟೋನ್ ಫ್ಲವರ್ ದ್ವೀಪಗಳು ಸೇರಿದಂತೆ ಒಟ್ಟು 25 ದ್ವೀಪಗಳಿವೆ. ಸ್ಥಳೀಯ ಹಾಗೂ ವಲಸೆ ಪಕ್ಷಿಗಳು ಸೇರಿದಂತೆ 200ಕ್ಕೂ ಹೆಚ್ಚು ಪ್ರಭೇದದ ಸಾವಿರಾರು ಪಕ್ಷಿಗಳು ರಂಗನತಿಟ್ಟು ಪಕ್ಷಿಧಾಮ ದಲ್ಲಿವೆ. ವಿವಿಧ ದೇಶಗಳಿಂದ ಸಾವಿರಾರು ಸಂಖ್ಯೆಯ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಈ ಪಕ್ಷಿಧಾಮಕ್ಕೆ ಬರುತ್ತವೆ. ಇದೀಗ ಹಕ್ಕಿಜ್ವರ ಭೀತಿ ಎದುರಾಗಿರುವುದರಿಂದ ಈ ಎಲ್ಲಾ ದ್ವೀಪಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ತಡೆಗಾಗಿ ರಾಸಾಯನಿಕ ದ್ರಾವಣ ಸಿಂಪಡಣೆ ನಡೆದಿದೆ.

ಪಕ್ಷಿಧಾಮದ ಪ್ರವೇಶ ದ್ವಾರ, ಪ್ರವಾಸಿಗರ ವಾಕಿಂಗ್ ಪಾತ್, ವಾಹನಗಳ ನಿಲುಗಡೆ ಸ್ಥಳ, ಪರ್ಗೋಲಾ, ಮಾಹಿತಿ ಕೇಂದ್ರ, ಕ್ಯಾಂಟೀನ್ ಆವರಣ ಸೇರಿದಂತೆ ಪ್ರವಾಸಿಗರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿರುವ 16 ಎಕರೆ ಪ್ರದೇಶದಾದ್ಯಂತ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಆದರೆ, ದ್ವೀಪಗಳು ಮತ್ತು ನದಿತಟ ದಲ್ಲಿ ಸಿಂಪಡಿಸುವುದಿಲ್ಲ. ಅಲ್ಲಿ ಪಕ್ಷಿಗಳ ಪಿಕ್ಕೆಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾ ಗಿದೆ. ಈವರೆಗೂ ಪಕ್ಷಿಧಾಮದ ಪಕ್ಷಿಗಳಲ್ಲಿ ಸೋಂಕು ಕಂಡು ಬಂದಿಲ್ಲ. ಆದರೂ ಕಟ್ಟೆಚ್ಚರ ವಹಿಸÀಲಾಗಿದೆ ಎಂದು ಡಿಸಿಎಫ್ ಅಲೆಗ್ಸಾಂಡರ್ ಹೇಳಿದರು.

ಕೊಕ್ಕರೆ ಬೆಳ್ಳೂರು: ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರಲ್ಲೂ ಹಕ್ಕಿಜ್ವರ ಭೀತಿ ಎದುರಾಗಿದೆ. ಕಳೆದ 3 ದಿನದಿಂದ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸ ಲಾಗಿದೆ. ಡಿಸಿಎಫ್ ಅಲೆಗ್ಸಾಂಡರ್ ಸೂಚನೆ ಮೇರೆಗೆ ವೈರಾಣು ನಾಶದ ರಾಸಾಯನಿಕ ದ್ರಾವಣ ಸಿಂಪಡಣೆ ನಡೆದಿದೆ. ವಿವಿಧೆಡೆ ಮಂಗಳವಾರ ಮಧ್ಯಾಹ್ನ ರಾಸಾಯ ನಿಕ ಸಿಂಪಡಿಸಲಾಯಿತು. ಅಲ್ಲದೆ ಕೊಕ್ಕರೆಗಳ ಪಿಕ್ಕೆಯನ್ನು ಭೂಪಾಲ್ ಹಾಗೂ ಬೆಂಗಳೂರಿನ ಹೆಬ್ಬಾಳ ಬಡಾವಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಕ್ಕಿಜ್ವರ ಸೋಂಕು ಇಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಆದರೂ ಕೊಕ್ಕರೆ ಹಾಗೂ ವಲಸೆ ಪಕ್ಷಿಗಳ ಮೇಲೆ ನಿಗಾ ಇಡಲಾಗಿದೆ.
ಪರಿಶೀಲನೆ: ಮೈಸೂರಲ್ಲಿ ಮಾ.9ರಂದು ನಾಲ್ಕೈದು ಕೊಕ್ಕರೆ ಮೃತಪಟ್ಟಿದ್ದು ಹಕ್ಕಿಜ್ವರದಿಂದಲೇ ಎಂದು ದೃಢಪಟ್ಟಿದೆ. ಇಂದು ಬೆಳಿಗ್ಗೆ ಮಂಡ್ಯ ಜಿಲ್ಲೆಯ ಪಶುಸಂಗೋ ಪನಾ ಇಲಾಖೆ ಉಪ ನಿರ್ದೇಶಕ ಪದ್ಮನಾಭ್ ಹಾಗೂ ಡಿಸಿಎಫ್ ನೇತೃತ್ವದ ತಂಡ ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರಿಗೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿತು. ಎರಡೂ ಕಡೆ ಹಕ್ಕಿಜ್ವರ ಕಂಡು ಬಂದಿ ಲ್ಲದೇ ಇದ್ದರೂ, ಸೋಂಕು ಹರಡುವುದನ್ನು ತಡೆ ಯಲು ರಾಸಾಯನಿಕ ಸಿಂಪಡಣೆ ಆರಂಭಿಸಲಾಯಿತು. ಈ ಕಾರ್ಯ 1 ವಾರ ಮುಂದುವರೆಯಲಿದೆ.

ಮಾಹಿತಿ ನೀಡಿ: ಡಿಸಿಎಫ್ ಕೆ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, ಹಕ್ಕಿಜ್ವರ ಹಿನ್ನೆಲೆಯಲ್ಲಿ ಮೈಸೂರಿನ ಲಿಂಗಾಂಬುದಿ, ಕುಕ್ಕರಹಳ್ಳಿ ಹಾಗೂ ಮಳಲವಾಡಿ ಕೆರೆಗಳಲ್ಲಿ ವಲಸೆ ಪಕ್ಷಿಗಳಷ್ಟೇ ಅಲ್ಲದೆ ವಿವಿಧ ಜಾತಿಯ ಸ್ಥಳೀಯ ಪಕ್ಷಿಗಳೂ ಹೆಚ್ಚಾಗಿವೆ. ಮಾ.9ರಂದು ಕುಂಬಾರ ಕೊಪ್ಪಲು ಹಾಗೂ ಹೆಬ್ಬಾಳ ಕೆರೆ ಬಳಿ ಕೋಳಿ ಹಾಗೂ ಪಕ್ಷಿ ಮೃತಪಟ್ಟಿರುವುದು ಹಕ್ಕಿಜ್ವರದಿಂದಲೇ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಪಶುಸಂಗೋಪನಾ ಇಲಾಖೆ ಸಹಭಾಗಿತ್ವದಲ್ಲಿ ಇಂದು ವಿದ್ಯಾರಣ್ಯಪುರಂ ಹಾಗೂ ಹೆಬ್ಬಾಳು ಕೆರೆ ಬಳಿ ರಾಸಾಯನಿಕ ಸಿಂಪಡಿಸಲಾಗಿದೆ. ಉಳಿದಂತೆ ಲಿಂಗಾಂಬುದಿ, ಮಳಲವಾಡಿ ಕೆರೆಯಲ್ಲಿ ಬೋಟ್ ಮೂಲಕ ಗಸ್ತು ನಡೆಸಿ, ಸೂಕ್ಷ್ಮವಾಗಿ ಗಮನಿಸುವಂತೆ ಸೂಚಿಸಲಾಗಿದೆ ಎಂದರು. ಇಂದು ಎಲ್ಲಿಯೂ ಪಕ್ಷಿಗಳ ಕಳೇಬರ ಕಂಡು ಬಂದಿಲ್ಲ. ಮಾ.9ರ ನಂತರ ಎಲ್ಲಿಯೂ ಪಕ್ಷಿಗಳು ಸಾವಿಗೀಡಾಗಿ ರುವ ಬಗ್ಗೆ ಮಾಹಿತಿ ಬಂದಿಲ್ಲ. ಈ ವಿಚಾರದಲ್ಲಿ ಸಾರ್ವಜನಿಕರ ಸಹಕಾರ ನಿರೀಕ್ಷಿಸುತ್ತೇವೆ. ಜಿಲ್ಲೆಯಲ್ಲಿ ಎಲ್ಲಾದರೂ ಪಕ್ಷಿಗಳು ಸಾವಿಗೀಡಾಗಿದ್ದರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಹಕ್ಕಿಜ್ವರ ಹರಡ ದಂತೆ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದರು.

Translate »