ಮೈಸೂರು, ಸೆ.12(ಎಸ್‍ಬಿಡಿ)- ದೇಶಕ್ಕೆ ಕೊರೊನಾ ವಕ್ಕರಿಸಿ 6 ತಿಂಗಳಾಗಿದ್ದು, ಮನುಕುಲಕ್ಕೆ ದೊಡ್ಡ ಪಾಠ ಕಲಿಸಿದೆ. ಆದರೂ ಬಹುತೇಕರು ಸುರಕ್ಷತಾ ಕ್ರಮ ಅನುಸರಿಸದೆ ನಿರ್ಲಕ್ಷ್ಯ ತೋರುತ್ತಿರುವುದ ರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ನಿರ್ಲಕ್ಷ್ಯದ ಪರಿಣಾಮವೇ ಮೈಸೂರು ಜಿಲ್ಲೆಯಲ್ಲಿ ನಿತ್ಯ 600ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆ ಯಾಗುತ್ತಿದ್ದು, 10ಕ್ಕೂ ಹೆಚ್ಚು ಸೋಂಕಿತರು ಸಾವ ನ್ನಪ್ಪುತ್ತಿದ್ದಾರೆ. ಸದ್ಯಕ್ಕೆ ಕೊರೊನಾ ತೊಲಗುವು ದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಕಾರಣದಿಂದಲೇ ಲಾಕ್‍ಡೌನ್, ಇನ್ನಿತರ ಸೀಮಿತ ನಿರ್ಬಂಧಗಳನ್ನು ತೆರವುಗೊಳಿಸಿ, ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಸರ್ಕಾರ ಅವಕಾಶ ನೀಡಿದೆ. ಪ್ರತಿಯೊಬ್ಬರೂ ಸುರಕ್ಷತಾ ಕ್ರಮ ಅನುಸರಿಸಿ, ಕೊರೊನಾ ಜೊತೆಗೇ ಬದುಕು ಸಾಗಿಸಬೇಕೆಂದು ತಿಳಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ಸಂದರ್ಭನು ಸಾರ ಅಗತ್ಯ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿ, ಪರಿಪಾಲಿಸುವಂತೆ ಮನವಿ ಮಾಡಲಾಗಿದೆ.
ಆದರೆ ಮೈಸೂರಿನಲ್ಲಿ ಎಲ್ಲಾ ಕ್ಷೇತ್ರದ ಉದ್ಯಮ ಗಳ ವ್ಯಾಪಾರ ವಹಿವಾಟು ನಡೆಸುವವರು ಕೇಂದ್ರದ ಮಾರ್ಗಸೂಚಿ ಹಾಗೂ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ ಸೂಚನೆಯನ್ನು ಧಿಕ್ಕರಿಸಿದಂತೆ ಕಾಣುತ್ತಿದೆ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಕನಿಷ್ಟ ಸುರಕ್ಷತಾ ಕ್ರಮವನ್ನೂ ಅನುಸರಿಸುತ್ತಿಲ್ಲ. ಯಾವುದೇ ಮಳಿಗೆ, ಹೋಟೆಲ್, ಸೂಪರ್ ಮಾರ್ಕೆಟ್ ಎಲ್ಲಿಯೂ ಕೋವಿಡ್ ಮಾರ್ಗಸೂಚಿ ಪರಿಪಾಲನೆ ಆಗುತ್ತಿಲ್ಲ. ಗ್ರಾಹಕರಿಗೆ ಸೂಚನೆ ನೀಡಬೇಕಾದ ವರ್ತಕರೇ ಮಾಸ್ಕ್ ಧರಿಸುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲ ಕಲ್ಪಿಸಿಲ್ಲ. ಲಾಕ್‍ಡೌನ್ ಬಳಿಕ ಅವಕಾಶ ದೊರೆತ ಆರಂಭದಲ್ಲಿ ಮಾತ್ರ ಮಾರ್ಗಸೂಚಿ ಪಾಲಿಸಿದರು. ದಿನಕಳೆದಂತೆ ಎಲ್ಲವೂ ಮಾಯವಾಯ್ತು. ಗ್ರಾಹಕರು ಮಾಸ್ಕ್ ಧರಿಸದಿರಲಿ, ಜನಸಂದಣಿ ಎಷ್ಟೇ ಇರಲಿ ಅದೆಲ್ಲವೂ ವರ್ತಕರಿಗೆ ಮುಖ್ಯವೇ ಅಲ್ಲ. ಕೇವಲ ವ್ಯಾಪಾರ ಹಾಗೂ ಸಂಪಾದನೆ ಮೇಲಷ್ಟೇ ಅವರ ಗಮನ. ಸಮಾಜದ ಸುರಕ್ಷತೆ ಬಗ್ಗೆ ಯಾವುದೇ ಕಳಕಳಿಯೂ ಇಲ್ಲ, ಕಿಂಚಿತ್ತು ಭಯವೂ ಇಲ್ಲದಂತಾಗಿದೆ.
ಮಾರ್ಕೆಟ್, ಬಟ್ಟೆ ಅಂಗಡಿ, ಪ್ರಾವಿಷನ್ ಸ್ಟೋರ್ಸ್, ಟೀ ಅಂಗಡಿ ಹೀಗೆ ಎಲ್ಲಿ ನೋಡಿ ದರೂ ಕೆಲವರು ಮಾತ್ರ ಮಾಸ್ಕ್ ಧರಿಸಿರು ತ್ತಾರೆ. ಒಬ್ಬರಿಂದ ಒಬ್ಬರಿಗೆ 3 ಮೀಟರ್ ಅಂತರ ಕಾಯ್ದುಕೊಳ್ಳುವುದಂತೂ ದೂರದ ಮಾತು. ವೈನ್ ಶಾಪ್, ಬಾರ್ ಅಂಡ್ ರೆಸ್ಟೋರೆಂಟ್‍ಗಳ ಸ್ಥಿತಿಯಂತೂ ಕೇಳುವುದೇ ಬೇಡ. ಕೊರೊನಾ ನಿರ್ನಾಮವಾಗಿದೆ ಎಂಬಂತೆ ಅಕ್ಕಪಕ್ಕದಲ್ಲೇ ನಿಂತಿರುತ್ತಾರೆ. ಹೋಟೆಲ್ ಗಳಲ್ಲಿ ಎದುರಿಗೆ ಕುಳಿತಿದ್ದರೂ ಮಾಸ್ಕ್ ಧರಿಸಿರುವುದಿಲ್ಲ. ಹೋಟೆಲ್ ಮಾಲೀಕರೇ ಮಾಸ್ಕ್ ಮರೆತಿರುವುದರಿಂದ ಅವರು ಗ್ರಾಹಕರಿಗೆ ಹೇಗೆ ಹೇಳಲು ಸಾಧ್ಯ?. ಬೇಕರಿ, ಫಾಸ್ಟ್‍ಫುಡ್ ಬಳಿಯೂ ಮಾಸ್ಕ್ ಮಂಗಮಾಯವಾಗಿರುತ್ತದೆ. ತಿಂಡಿ-ತಿನಿಸು ವ್ಯಾಪಾರ ಮಾಡುವ ಸ್ಥಳದಲ್ಲಿ ಹೆಚ್ಚಿನ ನಿಗಾ ವಹಿಸಿರಬೇಕು. ಆದರೆ ಅಂತಹ ಸ್ಥಳಗಳಲ್ಲೇ ಹೆಚ್ಚು ನಿರ್ಲಕ್ಷ್ಯ ಕಾಣಿಸುತ್ತಿದೆ. ವ್ಯಾಪಾರ ಸ್ಥಳದಲ್ಲಿ ಕನಿಷ್ಟ ನಿಯಮಗಳನ್ನೂ ಪಾಲಿಸುತ್ತಿಲ್ಲ.
ಇನ್ನು ಬಹುತೇಕ ಜನ ನಾಮಕಾವಸ್ಥೆಗೆ ಮಾಸ್ಕ್ ಧರಿಸಿರುತ್ತಾರೆ. ಮಾಸ್ಕ್ ಅಥವಾ ಶುಚಿಯಾದ ಬಟ್ಟೆಯಿಂದ ಮೂಗು ಮತ್ತು ಬಾಯಿ ಮುಚ್ಚಿರಬೇಕು. ಹೀಗೆ ಸಮರ್ಪಕ ವಾಗಿ ಧರಿಸಿದರೆ ಮಾತ್ರ ತಮಗೆ ಹಾಗೂ ತಮ್ಮಿಂದ ಬೇರೆಯವರಿಗೆ ಯಾವುದೇ ಸೋಂಕು ಹರಡದಂತೆ ತಪ್ಪಿಸಬಹುದು. ಆದರೆ ಹೆಚ್ಚಿನ ಜನ, ಮಾಸ್ಕ್ ಅನ್ನು ಮೂಗು ಹಾಗೂ ಬಾಯಿಯಿಂದ ಕೆಳಗೆ ಗದ್ದಕ್ಕೆ ಸರಿಸಿರುತ್ತಾರೆ. ಇದರಿಂದ ಯಾವುದೇ ಪ್ರಯೋ ಜನವಾಗುವುದಿಲ್ಲ. ತಿಳಿದೂ ಕೂಡ ನಿರ್ಲಕ್ಷ್ಯ ಮಾಡುತ್ತಾರೆ. ಕೊರೊನಾ ಬಗ್ಗೆ ತಮಗೆ ತಾವೇ ವಿಶ್ಲೇಷಣೆ ಮಾಡುತ್ತಾ, ಇನ್ನೇನು ಭಯವೇ ಇಲ್ಲ ಎಂಬಂತೆ ವರ್ತಿ ಸುತ್ತಾರೆ. ಇದೆಲ್ಲರ ಪರಿಣಾಮವಾಗಿ ನಿತ್ಯವೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಷ್ಟೊಂದು ನಿರ್ಲಕ್ಷ್ಯ ಮಾಡುವಷ್ಟು ಕೊರೊನಾ ಪ್ರಭಾವ ತಗ್ಗಿಲ್ಲ ಎಂಬುದಕ್ಕೆ ದಿನೇ ದಿನೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯೇ ಸಾಕ್ಷಿ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಗಂಭೀರವಾಗಿ ಚಿಂತನೆ ನಡೆಸಿ, ವರ್ತಕರು ಹಾಗೂ ಗ್ರಾಹಕರು ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕೆಂದು ಸಾಮಾಜಿಕ ಕಳಕಳಿಯುಳ್ಳ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.