ಕೊರೊನಾ ವೈರಸ್ ಭೀತಿ: ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳ ನಿಯೋಜನೆ
ಮೈಸೂರು

ಕೊರೊನಾ ವೈರಸ್ ಭೀತಿ: ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳ ನಿಯೋಜನೆ

March 22, 2020

ಬೆಂಗಳೂರು, ಮಾ. 21- ರಾಜ್ಯದಲ್ಲಿ ಕೊರೊನಾ ವೈರಸ್‍ನಿಂದ ಉಂಟಾಗಬಹು ದಾದ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯಕವಾಗುವಂತೆ 12 ಐಎಎಸ್ ಅಧಿಕಾರಿಗಳಿಗೆ ಈಗಾಗಲೇ ಅವರು ಹೊಂದಿರುವ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲು ಹಲವಾರು ಜವಾಬ್ದಾರಿಗಳನ್ನು ನೀಡಿ ಶನಿವಾರ ಸರ್ಕಾರ ಆದೇಶ ಹೊರಡಿಸಿದೆ.

ಅಟಲ್‍ಜಿ ಸ್ನೇಹ ಕೇಂದ್ರದ ನಿರ್ದೇಶಕಿ ಶ್ರೀಮತಿ ಮೀನಾ ನಾಗರಾಜ್ ಅವರಿಗೆ ಕಣ್ಗಾವಲು/ರೋಗಿಗಳೊಂದಿಗೆ ಸಂಪರ್ಕ ಪತ್ತೆ ಹಚ್ಚುವಿಕೆ/ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರ ಪಟ್ಟಿ ಪಡೆಯುವ ಜವಾಬ್ದಾರಿಯನ್ನು ನೀಡಲಾಗಿದೆ.

ಎನ್‍ಯುಎಲ್‍ಎಂ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ಅವರಿಗೆ ಸಮುದಾಯ ಸುರಕ್ಷತೆ ಕೋವಿಡ್ ಟ್ರೇಸಿಂಗ್, ಕ್ವಾರಂಟೈನ್ ಮತ್ತು ಹೋಂ ಐಸೋಲೇಷನ್ ಜವಾಬ್ದಾರಿ ನೀಡಲಾಗಿದ್ದು, ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಲ್ಯಾಬ್ ಟೆಸ್ಟಿಂಗ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವಗುಪ್ತ ಮತ್ತು ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ವಾಣಿಜ್ಯ ಕೈಗಾರಿಕಾ ಇಲಾಖೆ ನಿರ್ದೇಶಕಿ ಶ್ರೀಮತಿ ಗುಂಜನ್ ಕೃಷ್ಣ ಅವರಿಗೆ ಎಲ್ಲಾ ಸಾಮಗ್ರಿಗಳ ಸಂಗ್ರಹಣೆ ಹಾಗೂ ಉತ್ಪಾದನೆ ಕುರಿತಂತೆ ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿದೆ.

ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪಿ.ಸಿ. ಜಾಫರ್ ಅವರಿಗೆ ತರಬೇತಿ ಮತ್ತು ಕೆಪಾಸಿಟಿ ಬಿಲ್ಡಿಂಗ್, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗಂಗಾರಾಂ ಬಡೇರಿಯಾ ಮತ್ತು ಎಂಎಸ್‍ಎಲ್‍ಇ ನಿರ್ದೇಶಕ ಎಸ್.ಜಿಯಾಉಲ್ಲಾ ಅವರಿಗೆ ರೋಗಿಗಳನ್ನು ಇತರರೊಂದಿಗೆ ಪ್ರತ್ಯೇಕಿಸುವ ಕುರಿತಂತೆ ದಿಗ್ಬಂಧನ ಸೌಲಭ್ಯ ಗುರುತಿಸುವುದು ಮತ್ತು ಆಸ್ಪತ್ರೆಗಳು ಸಜ್ಜಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿದೆ.

ಸಾರಿಗೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಅವರಿಗೆ ಆವರ್ತ ಯೋಜನೆ ಹಾಗೂ ಎಲ್ಲಾ ಜಿಲ್ಲಾಧಿಕಾರಿ ಗಳೊಂದಿಗೆ ಸಮನ್ವಯತೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣ ರೆಡ್ಡಿ ಅವರಿಗೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಅಂತರ್ಜಾಲ ಸೇವಾ ಸಂಸ್ಥೆಗಳು, ವಿದ್ಯುತ್ ಕಂಪನಿಗಳು ಹಾಗೂ ಇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿ ನೀಡಲಾಗಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಸಿ. ಶಿಖಾ ಅವರಿಗೆ ರಿಸ್ಕ್ ಕಮ್ಯುನಿಕೇಷನ್, ಸೋಷಿಯಲ್ ಮೀಡಿಯಾ, ಕೋವಿಡ್-19 ವೆಬ್‍ಸೈಟ್, ಪೋಸ್ಟರ್ಸ್, ಬ್ಯಾನರ್ಸ್, ವಿಡಿಯೋ ನಿರ್ವಹಣೆ ಜವಾಬ್ದಾರಿ, ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮುನೀಷ್ ಮುದ್ಗಿಲ್ ಅವರಿಗೆ 104 ನಿರ್ವಹಣೆ/ತಂತ್ರಜ್ಞಾನ ಅಭಿವೃದ್ಧಿ/ಆ್ಯಪ್ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ಆರೋಗ್ಯ ಸಹಾಯವಾಣಿ ಜವಾಬ್ದಾರಿಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.

Translate »