ಚಾಮರಾಜನಗರ,ಮಾ.21- ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸಿ ಆತ್ಮ ವಿಶ್ವಾಸ ತುಂಬಲು ಪ್ರತಿಯೊಬ್ಬರ ಸಹ ಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಕೊರೊನಾ ವೈರಸ್ ಹರಡುವಿಕೆ ತಡೆಯುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾರ್ವಜನಿಕರು ಸಹಕರಿಸಬೇಕು. ಜನತೆ ಸಂಕಲ್ಪ ಮತ್ತು ಸಂಯಮ ತೋರಿಸಬೇಕು. ಸಮಾಜಕ್ಕೆ ಧೈರ್ಯ, ವಿಶ್ವಾಸ ತುಂಬುವ ಕೆಲಸವನ್ನು ಪಕ್ಷಾತೀತವಾಗಿ ಎಲ್ಲರೂ ಮಾಡಬೇಕಿದೆ. ಶಕ್ತಿ, ಬುದ್ಧಿವಂತಿಕೆ ಸೇರಿದಂತೆ ಎಲ್ಲವೂ ಜನರ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ ಎಂದು ಮನವಿ ಮಾಡಿದರು.
ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ತೆಗೆದುಕೊಳ್ಳಬೇಕು. ಯಾರೂ ಉದಾಸೀನ ಮಾಡಬಾರದು. ಈ ವೇಳೆ ವಹಿಸಬೇಕಿರುವ ಮುನ್ನೆಚ್ಚರಿಕೆ, ಸ್ವಚ್ಛತೆ, ಸಾಮಾಜಿಕ ಅಂತರ ಇನ್ನಿತರ ವಿಧಾನಗಳ ಮೂಲಕ ಆರೋಗ್ಯದ ಕಾಳಜಿ ಹೊಂದ ಬೇಕು. ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹಾ ಟಾಸ್ಕ್ ಪೋರ್ಸ್ ರಚಿಸಿದ್ದು ಅತ್ಯಂತ ನಿಗಾ ವಹಿಸಿದೆ ಎಂದರು.
ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಪ್ರಸ್ತುತ 8 ವೆಂಟಿಲೇಟರ್‍ಗಳು ಲಭ್ಯವಿದೆ. ಇನ್ನೂ 10 ವೆಂಟಿಲೇಟರ್‍ಗಳು ಅಗತ್ಯ ವಿದೆ ಎಂಬುದನ್ನು ಜಿಲ್ಲಾಡಳಿತ ಗಮನಕ್ಕೆ ತಂದಿದೆ. ಇದನ್ನು ಒದಗಿಸುವ ನಿಟ್ಟಿನಲ್ಲಿ ಅವಶ್ಯ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್, ಔಷಧಿಗಳ ದಾಸ್ತಾನು ಇದೆ. ಪ್ರಸ್ತುತ ಆರೋಗ್ಯ ಸಂಬಂಧಿ ಪರಿಕರಗಳು, ಔಷಧೋಪಚಾರಗಳಿಗೆ ಹಣದ ಕೊರತೆ ಇಲ್ಲ. ಜಿಲ್ಲಾಡಳಿತಕ್ಕೆ ಅಗತ್ಯವಿರುವ ಎಲ್ಲಾ ಆರೋಗ್ಯ ವ್ಯವಸ್ಥೆಗೆ ಕ್ರಮವಹಿಸಲು ಸ್ವಾತಂತ್ರವಿದೆ ಎಂದರು.
ಜಿಲ್ಲೆಗೆ ವಿದೇಶದಿಂದ ಆಗಮಿಸಿದ 33 ಜನರಿದ್ದಾರೆ. ಅದರಲ್ಲಿ 29 ಜನರು ಕ್ವಾರೆಂಟೈನಲ್ಲಿ ಇರಿಸಲಾಗಿದ್ದು, ನಾಲ್ವರು 14 ದಿನಗಳ ಕ್ವಾರನ್‍ಟೈನ್ ಅವಧಿ ಪೂರೈ ಸಿದ್ದಾರೆ. ಸಾಮಾಜಿಕ ಜಾಲತಾಣಗಳು ಜನರಲ್ಲಿ ವದಂತಿ ಹರಡಿ ಆತಂಕ ಉಂಟು ಮಾಡಬಾರದು. ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಸಾಮಾಜಿಕ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸಬೇಕು. ಜನ ಸಾಮಾನ್ಯರಿಗೆ ಸತ್ಯಾಂಶವಿಲ್ಲದ ಮಾಹಿತಿ ಹರಡುವುದನ್ನು ಮಾಡಬಾರದು. ಕೊರೊನ ವಿರುದ್ಧ ಹೋರಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.
ಇದೇ ವೇಳೆ ಕೊರೊನಾ ವೈರಸ್ ಜಾಗೃತಿ ಸಂಬಂಧ ಭಿತ್ತಿಚಿತ್ರವನ್ನು ಉಸ್ತುವಾರಿ ಸಚಿವರು ಬಿಡುಗಡೆ ಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಪ್ರಭಾರ ಅಧ್ಯಕ್ಷ ಕೆ.ಎಸ್.ಮಹೇಶ್, ಡಿಸಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ನಾರಾ ಯಣ್‍ರಾವ್, ಜಿಲ್ಲಾ ಎಸ್ಪಿ ಹೆಚ್.ಡಿ. ಆನಂದ್ ಕುಮಾರ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಹಾಜರಿದ್ದರು.
‘ಜನತಾ ಕಫ್ರ್ಯೂ’ ಬೆಂಬಲಿಸಲು ಮನವಿ
ಚಾಮರಾಜನಗರ,ಮಾ.21-ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿಯವರು ಮಾ.22ರಂದು ಕರೆ ನೀಡಿರುವ ಜನತಾ ಕಫ್ರ್ಯೂ ಪಾಲನೆ ಮಾಡುವ ಮೂಲಕ ಕೊರೊನಾ ತಡೆಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕಡೆ ಜನತಾ ಕಫ್ರ್ಯೂ ಬಗ್ಗೆ ಅರಿವು ಮೂಡಿಸಬೇಕಿದೆ. ದೇಶದ ಜನತೆಯ ಆರೋಗ್ಯಕ್ಕೆ ಪೂರಕವಾಗಿರುವ ಇಂತಹ ಕ್ರಮಗಳಿಗೆ ಸಾರ್ವ ಜನಿಕರು ವ್ಯಾಪಕ ಸಹಕಾರ ನೀಡಬೇಕು ಎಂದರು.
ವರ್ತಕರ ಬೆಂಬಲ: ನಾಳೆ (ಮಾ.22)ರಂದು ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕಫ್ರ್ಯೂಗೆ ಜಿಲ್ಲೆಯ ವರ್ತಕರು ಸೇರಿದಂತೆ ಲಾರಿ, ಆಟೋ ಚಾಲಕರು, ಮಾಲೀಕರು ಹಾಗೂ ಹೊಟೇಲ್, ವ್ಯಾಪಾರಿಗಳು ಬೆಂಬಲ ಸೂಚಿಸಿದ್ದಾರೆ. ಇಂದು ರಸ್ತೆಗೆ ಖಾಸಗಿ, ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ಇರುವುದಿಲ್ಲ. ಆಟೋ, ಟ್ಯಾಕ್ಸಿಗಳು ರಸ್ತೆಗಳಿಗೆ ಇಳಿಯುದಿಲ್ಲ. ಜೊತೆಗೆ ವರ್ತಕರು, ಹೋಟೆಲ್ ಮಾಲೀಕರು ಬಂದ್ ಮಾಡುವುದಾಗಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.