ಹುಣಸೂರಿನಲ್ಲಿ ಸೋಂಕು ತಡೆಗೆ ಕೊರೊನಾ ವಾರಿಯರ್ಸ್ ಕಾರಣ
ಮೈಸೂರು ಗ್ರಾಮಾಂತರ

ಹುಣಸೂರಿನಲ್ಲಿ ಸೋಂಕು ತಡೆಗೆ ಕೊರೊನಾ ವಾರಿಯರ್ಸ್ ಕಾರಣ

May 21, 2020

ಹುಣಸೂರು, ಮೇ 20(ಕೆಕೆ)-ತಾಲೂಕಿನಲ್ಲಿ ಕೊವಿಡ್-19 ತಡೆಗಟ್ಟುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮ ಕಾರಣ. ಹಾಗಾಗಿ ತಾಲೂಕಿನ ಜನತೆ ಪರವಾಗಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಬಿಜೆಪಿಯಿಂದ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಕೊರೊನಾ ಸೋಂಕನ್ನು ಹಿಮ್ಮೆಟಿಸಲು ಪ್ರಧಾನಿ ನರೇಂದ್ರ ಮೋದಿ ದೇಶದ್ಯಾಂತ ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.

ಲಾಕ್‍ಡೌನ್‍ನ ಸಂಕಷ್ಟ ಪರಿಸ್ಥಿತಿಯಲ್ಲಿ ಸಂಘ-ಸಂಸ್ಥೆಗಳು, ದಾನಿಗಳು, ಉಳ್ಳವರು ಸೇರಿ ಬಡವರು, ನಿರಾಶ್ರಿತರಿಗೆ ಆಹಾರ-ಪಡಿತರ ಒದಗಿಸಿ ಸರ್ಕಾರದೊಂದಿಗೆ ಕೈಜೋಡಿಸಿದರು ಪ್ರಶಂಸಿಸಿದರು.

ಇಡೀ ದೇಶವೇ ಪ್ರಧಾನಿ ಮೋದಿ ಅವರ ನಿರ್ಣಯ ಮತ್ತು ಸಂದೇಶಗಳಿಗೆ ಸಹಕರಿಸುತ್ತಿದೆ. ಕೊರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಲು ಕೊರೋನಾ ವಾರಿಯರ್ಸ್ ಯಾಶಸ್ವಿಯಾಗಿದ್ದಾರೆ. ಅವರ ಪರಿಶ್ರಮದ ಪ್ರತಿಫಲದಿಂದ ನಮ್ಮ ಮೈಸೂರು ಜಿಲ್ಲೆ ಕೊರೊನಾ ಮುಕ್ತವಾಗಿದೆ ಎಂದರು.

ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ನಮ್ಮ ಅಧಿಕಾರಿ- ಸಿಬ್ಬಂದಿ ಜೀವದ ಹಂಗು ತೊರೆದು ಶ್ರಮಿಸಿದ್ದರಿಂದ ಹುಣಸೂರು ಉಪವಿಭಾಗದ ಪ್ರದೇಶಗಳು ಕೊರೊನಾ ಸೋಂಕು ಮುಕ್ತವಾಗಿವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ ಅನ್ನು ಗೌರವಿಸಲಾಯಿತು. ತಹಸೀಲ್ದಾರ್ ಬಸವರಾಜು, ಡಿವೈಎಸ್ಪಿ ಸುಂದರ್‍ರಾಜ್ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿ ಇದ್ದರು.

ಹುಣಸೂರಿನಲ್ಲಿ ನಡೆದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ ಅನ್ನು ಗೌರವಿಸಲಾಯಿತು.

Translate »