ಕೊಡಗಿನಲ್ಲಿ ಕೊರೊನಾ ತಂದ ಆರ್ಥಿಕ ಸಂಕಷ್ಟ
ಕೊಡಗು

ಕೊಡಗಿನಲ್ಲಿ ಕೊರೊನಾ ತಂದ ಆರ್ಥಿಕ ಸಂಕಷ್ಟ

March 17, 2020

ಮಡಿಕೇರಿ,ಮಾ.16-ಕೊರೊನಾ ಎಂಬ ಮಹಾಮಾರಿಯಿಂದಾಗಿ ಜಗತ್ತೇ ತಲ್ಲಣ ಗೊಂಡಿದ್ದು, ಅದರ ಪರಿಣಾಮ ಪುಟ್ಟ ಜಿಲ್ಲೆಯಾದ ಕೊಡಗಿಗೂ ತಗುಲಿದೆ. ಸತತ ಎರಡು ವರ್ಷಗಳಿಂದ ಮಹಾಮಳೆಗೆ ಸಿಲುಕಿ ಪ್ರಾಕೃತಿಕ ವಿಕೋಪದಿಂದ ಕಂಗೆ ಟ್ಟಿದ್ದ ಕೊಡಗು ಜಿಲ್ಲೆಯ ಆರ್ಥಿಕತೆ ಈ ವರ್ಷದ ಆರಂಭದಲ್ಲಿ ಒಂದಷ್ಟು ಚೇತರಿಕೆ ಕಾಣುತ್ತಿರುವಂತೆಯೇ ಕೊರೊನಾದಿಂದಾಗಿ ತಲೆದೋರಿರುವ ಆರ್ಥಿಕ ಸಂಕಷ್ಟ ಮತ್ತೊಮ್ಮೆ ಜಿಲ್ಲೆಯ ವ್ಯಾಪಾರೋದ್ಯಮಿ ಗಳನ್ನು ಭಾರೀ ನಷ್ಟದತ್ತ ತಳ್ಳಿದೆ.

ಕಳೆದ ಎರಡು ವರ್ಷಗಳಿಂದ ಕೊಡಗಿ ನಲ್ಲಿ ಸಂಭವಿಸಿದ್ದ ಮಹಾಮಳೆ, ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದ ಅತೀ ಪುಟ್ಟ ಜಿಲ್ಲೆಯಾದ ಕೊಡಗು ಸಾಕಷ್ಟು ಕಷ್ಟನಷ್ಟ ಗಳನ್ನು ಎದುರಿಸಿತ್ತು. ಕೃಷಿ, ತೋಟಗಾರಿಕೆ ಬೆಳೆಗಳು ಜಿಲ್ಲೆಯ ಜೀವಾಳವಾದರೆ, ಪ್ರವಾಸೋದ್ಯಮ ಆರ್ಥಿಕತೆಯ ಊರು ಗೋಲಿ ನಂತಿತ್ತು. ಪ್ರಾಕೃತಿಕ ವಿಕೋಪದಿಂದ ಈ 3 ಕ್ಷೇತ್ರಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇಂದಿಗೂ ಸಂಪೂರ್ಣ ಚೇತರಿಸಿಕೊಂಡಿಲ್ಲ.
ಆದರೆ, ಈ ವರ್ಷದ ಪ್ರಾರಂಭದ ಎರಡು ತಿಂಗಳಿನಲ್ಲಿ ಜಿಲ್ಲೆಯ ಆರ್ಥಿಕತೆ ಚೇತರಿಕೆಯ ಕಡೆ ಮುಖ ಮಾಡಿತ್ತು. ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಒಂದಿಷ್ಟು ಚೇತರಿಕೆ ಕಾಣುವುದರೊಂದಿಗೆ ವ್ಯಾಪಾರೋದ್ಯಮಿಗಳ ಮುಖದಲ್ಲಿ ಮಂದಹಾಸ ಮೂಡುತ್ತಿದ್ದು, ಆದರೀಗ ಕೊರೊನಾ ಎಂಬ ಮಾರಣಾಂತಿಕ ಸೋಂಕು ಕೊಡಗಿಗೂ ತಗುಲುವ ಭೀತಿ ಎಲ್ಲೆಲ್ಲೂ ಕಂಡು ಬಂದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಕೊಡಗಿನ ಸಾಮಾನ್ಯ ಜನಜೀವನವೂ ಸ್ಥಬ್ಧವಾಗಿದ್ದು, ಜಿಲ್ಲೆಯ ಪ್ರಮುಖ ನಗರ ಗಳಲ್ಲಿ ವ್ಯಾಪಾರೋದ್ಯಮ ಕುಸಿತ ಕಂಡಿದ್ದು, ಜನಸಂಚಾರ ವಿರಳವಾಗಿದೆ.

ಸರ್ಕಾರದ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಕೊಡಗಿನಲ್ಲಿಯೂ ಹೆಲ್ತ್ ಎಮರ್ಜನ್ಸಿ ಘೋಷಿಸಲಾಗಿದೆ. ಮಾತ್ರವಲ್ಲದೇ, ಸಾಂಕ್ರಾಮಿಕ ರೋಗ ಹರಡುವ ಭೀತಿ ಯಿಂದ ಪ್ರವಾಸಿಗರು ಕೊಡಗಿಗೆ ಆಗಮಿ ಸುವುದಕ್ಕೆ ಒಂದು ವಾರಗಳ ಕಾಲ ನಿರ್ಬಂಧ ಹೇರಲಾಗಿದ್ದು, ಪ್ರವಾಸೀ ತಾಣಗಳಿಗೆ ಜನರ ಭೇಟಿಯನ್ನು ನಿಷೇಧಿಸಿ ಮುಚ್ಚಲಾಗಿದೆ. ಇದರಿಂದಾಗಿ ಪ್ರವಾಸಿಗರನ್ನೇ ನೆಚ್ಚಿಕೊಂಡ ಸಾವಿರಾರು ಮಂದಿ ದಿನದ ಆದಾಯ ಕಳೆದುಕೊಂಡು ನಷ್ಟದಿಂದ ಕಂಗಾಲಾಗಿದ್ದಾರೆ.

 

ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ವಾರದ ಸಂತೆಗಳನ್ನು ಕೂಡ ರದ್ದು ಮಾಡಿದ್ದು, ಸಂತೆ ವ್ಯಾಪಾರದಿಂದ ಬದುಕು ಸಾಗಿಸುವ ವ್ಯಾಪಾರಿಗಳಿಗೂ ಹೇಳಲಾಗದ ಆರ್ಥಿಕ ಹೊಡೆತ ಬಿದ್ದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗೋಣಿಕೊಪ್ಪ, ಕುಶಾಲನಗರ, ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ, ಸುಂಟಿಕೊಪ್ಪ, ಸಿದ್ದಾಪುರ, ವಿರಾಜಪೇಟೆ ಸೇರಿದಂತೆ ಜಿಲ್ಲೆಯ ಪ್ರಮುಖ ಊರುಗಳಲ್ಲಿ ಜನ ಸಂಚಾರವೇ ಇಲ್ಲದೆ ಕಳೆದೆರಡು ದಿನಗಳಿಂದ ನಗರ ಪ್ರದೇಶಗಳು ಬಿಕೋ ಎನ್ನುತ್ತಿದೆ.

ಜನಗಣತಿಯ ಪ್ರಕಾರ ಕೊಡಗು ಜಿಲ್ಲೆಯ ಜನ ಸಂಖ್ಯಾ ಪ್ರಮಾಣ 5 ಲಕ್ಷವಾಗಿದ್ದರೆ, ಈ ಪೈಕಿ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೇ 1 ಲಕ್ಷಕ್ಕೂ ಅಧಿಕ ಮಂದಿ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಎಫೆಕ್ಟ್‍ನಿಂದಾಗಿ ಇವರೆಲ್ಲಾ ಇದೀಗ ಆರ್ಥಿಕ ವಿಕೋಪಕ್ಕೆ ಸಿಲುಕಿದ್ದು ಆತಂಕಕ್ಕೀಡಾಗಿದ್ದಾರೆ. ಕೊರೊನಾ ಮಹಾ ಮಾರಿಗೆ ಕೊಡಗು ಜಿಲ್ಲೆಯ ಆರ್ಥಿಕ ಪರಿ ಸ್ಥಿತಿಯೇ ತಳಮುಟ್ಟಿದ್ದು, ಮುಂದೇನಾ ದೀತು ಎಂಬ ಚಿಂತೆ ಜಿಲ್ಲೆಯ ಜನರನ್ನು ಕಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿ ದಲ್ಲಿ ಜಿಲ್ಲೆಯ ಆರ್ಥಿಕತೆ ಸುಧಾರಿಸಲು ವರ್ಷಗಳೇ ಉರುಳಲಿದೆ ಎಂಬ ಮಾತು ಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

Translate »