ನೆಲಕಚ್ಚಿದ ಮೈಸೂರು ಪ್ರವಾಸೋದ್ಯಮ
ಮೈಸೂರು

ನೆಲಕಚ್ಚಿದ ಮೈಸೂರು ಪ್ರವಾಸೋದ್ಯಮ

March 16, 2020

ಮೈಸೂರು,ಮಾ.15(ಎಂಟಿವೈ)- ರಜಾದಿನಗಳಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದ ಪ್ರವಾಸಿ ತಾಣಗಳು ಭಣಗುಡು ತ್ತಿವೆ. ಎಲ್ಲೆಡೆ ಭೀತಿ ಮೂಡಿಸಿರುವ ಕೊರೊನಾ ಮಹಾ ಮಾರಿಯಿಂದಾಗಿ ಮೈಸೂರು ಪ್ರವಾಸೋದ್ಯಮ ನೆಲ ಕಚ್ಚಿದ್ದು, 50 ಕೋಟಿ ರೂ. ಆದಾಯ ತರುತ್ತಿದ್ದ ಉದ್ಯಮ ಇದೀಗ 5 ಕೋಟಿ ರೂ. ಕೂಡ ಸಂಗ್ರಹ ವಿಲ್ಲದೆ ತೀವ್ರ ನಷ್ಟಕ್ಕೆ ಒಳಗಾಗಿದೆ.

ಹೌದು, ರಾಜ್ಯದಲ್ಲಿಯೇ ಮೈಸೂರು ಟೂರಿಸಂ ಜನಮನ್ನಣೆಗಳಿಸಿದ್ದು, ವಿದೇಶಿ ಹಾಗೂ ದೇಶದ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಪ್ರವಾಸಿ ಗರನ್ನು ಪ್ರತಿದಿನ ಆಕರ್ಷಿಸುತ್ತಿತ್ತು. ಕೊಡಗು, ಚಾಮ ರಾಜನಗರ ಹಾಗೂ ಊಟಿ, ಕೇರಳದ ವಿವಿಧೆಡೆ ತೆರಳುವ ಪ್ರವಾಸಿಗರಿಗೂ ಮೈಸೂರು ಅಚ್ಚುಮೆಚ್ಚಿನ ತಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ, ಭಾನು ವಾರ, ಸರ್ಕಾರಿ ರಜೆ ದಿನಗಳಲ್ಲಿ ಸಾಗರೋಪಾದಿ ಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿಗೆ ದೌಡಾ ಯಿಸುತ್ತಿದ್ದರು. ಇದರಿಂದ ಎಲ್ಲೆಡೆ ಜನಜಂಗುಳಿ ಕಂಡು ಬರುತ್ತಿತ್ತು. ಆದರೆ ಇದೀಗ ಕೊರೊನಾ ಭಯಕ್ಕೆ ಪ್ರವಾಸಿಗರು ಬರದ ಕಾರಣ ಮೈಸೂರು ಪ್ರವಾಸೋದ್ಯಮ ತೀವ್ರ ಹಿನ್ನಡೆ ಅನುಭವಿಸಿದೆ.

ಅತಿ ಹೆಚ್ಚು ಪ್ರವಾಸಿಗರ ವೀಕ್ಷಣೆಗೆ ಸಾಕ್ಷಿಯಾಗು ತ್ತಿದ್ದ ಮೈಸೂರು ಅರಮನೆ, ಮೃಗಾಲಯ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವುದರಿಂದ ಕಳೆದೊಂದು ವಾರದಿಂದ ಕುಂಟುತ್ತ ಸಾಗುತ್ತಿದ್ದ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚುವಂತಾ ಗಿದೆ. ಸಾಮಾನ್ಯ ದಿನಗಳಲ್ಲಿ ಮೈಸೂರು ಪ್ರವಾಸೋ ದ್ಯಮದಿಂದಾಗಿ ದಿನವೊಂದಕ್ಕೆ 50 ಕೋಟಿ ರೂ. ವಿವಿಧ ಮೂಲಗಳಿಂದ ಸಂಗ್ರಹವಾಗುತ್ತಿತ್ತು. ಆದರೆ ಕೊರೊನಾ ವೈರಸ್ ದುಷ್ಪರಿಣಾಮ ಬೀರಿರುವುದರಿಂದ ಕೇವಲ 5 ಕೋಟಿ ರೂ. ಸಂಗ್ರಹವೂ ಆಗದಂತಾ ಗಿದೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿದ್ದ ಸಾವಿರಾರು ಕುಟುಂಬಗಳು ಚಿಂತಾಕ್ರಾಂತವಾಗಿವೆ.

ನಿಂತಲ್ಲೇ ನಿಂತ ಟ್ರಾವೆಲ್ಸ್ ಉದ್ಯಮ: ಪ್ರವಾಸಿಗರು ಬರದ ಕಾರಣ ಮೈಸೂರಿನಲ್ಲಿರುವ ಟ್ರಾವೆಲ್ಸ್ ಉದ್ಯ ಮಕ್ಕೆ ಸಿಡಿಲು ಬಡಿದಂತಾಗಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ವಿವಿಧ ಪ್ರವಾಸಿ ತಾಣಗಳಿಗೆ ಕರೆದೊಯ್ಯು ತ್ತಿದ್ದ ನೂರಾರು ವಾಹನಗಳು ಕಳೆದ 2 ದಿನದಿಂದ ನಿಂತಲ್ಲೇ ನಿಲ್ಲುವಂತಾಗಿವೆ. ಬೆರಳೆಣಿಕೆಯಷ್ಟು ಪ್ರವಾಸಿ ವಾಹನಗಳು ರಸ್ತೆಯಲ್ಲಿ ಕಂಡು ಬರುತ್ತಿವೆ. ಇದರಿಂದ ಜೀವನ ಸಾಗಿಸಲು ಪ್ರವಾಸಿ ವಾಹನ ಹೊಂದಿರುವ ವರ ಪಾಡು ಹೇಳತೀರದಾಗಿದೆ. ಇನ್ನು ಏಜೆನ್ಸಿಗಳ ಸಂಕ ಷ್ಟವೂ ಮುಗಿಲು ಮುಟ್ಟುತ್ತಿದೆ.

ಮೂರು ವರ್ಷದಿಂದಲೂ ಕಷ್ಟ: ಮೈಸೂರು ಟ್ರಾವೆಲ್ ಪಾರ್ಕ್ ಮುಖ್ಯಸ್ಥ ಸಿ.ಎ.ಜಯ ಕುಮಾರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, 20 ದಿನದ ಹಿಂದೆ ಶೇ.80ರಿಂದ 90ರಷ್ಟಿದ್ದ ಪ್ರವಾಸೋದ್ಯಮ ಕಳೆದ ಒಂದು ವಾರದಿಂದ ಶೇ.40ಕ್ಕೆ ಕುಸಿದಿದೆ. ಕೊರೊನಾ ವೈರಸ್ ಹರಡುವ ಭಯ ಜನರಲ್ಲಿ ಕಾಡುತ್ತಿದೆ. ಇದರಿಂದಾಗಿ ಪ್ರವಾಸಿ ತಾಣಗಳಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಒಂದಲ್ಲಾ ಒಂದು ಕಾರಣಕ್ಕೆ ಮೈಸೂರಿನ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ. ಕೊಡಗು, ಕೇರಳದಲ್ಲಿ ಉಂಟಾದ ಪ್ರವಾಹ, ಹಕ್ಕಿಜ್ವರ, ಕೊರೊನಾ ಸಮಸ್ಯೆ ಪ್ರವಾಸೋದ್ಯಮವನ್ನು ನಂಬಿರುವ ಕುಟುಂಬಗಳಿಗೆ ಕಷ್ಟ ತಂದಿತ್ತಿದೆ. ವಿದೇಶಕ್ಕೆ ಹೋಗಲು ಟಿಕೆಟ್ ಬುಕ್ ಮಾಡಿದ್ದವರು, ಇದೀಗ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ, ಉತ್ತರ ಭಾರತ, ತಮಿಳುನಾಡು, ಕೇರಳಕ್ಕೂ ಹೋಗಲು ಪ್ರವಾಸಿಗರು ಭಯಪಡುತ್ತಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪಾಶ್ರ್ವವಾಯು ಹೊಡೆದಂತಾಗಿದೆ. ಟ್ರಾವೆಲ್ಸ್ ಉದ್ಯಮ ಆಯಾ ದಿನ ಸಂಪಾದಿಸುವುದನ್ನೇ ಅವಲಂಬಿಸಿದೆ. ಬೇರೆ ಉದ್ಯಮದಂತೆ ಆದಾಯದ ಮೂಲ ಇರುವುದಿಲ್ಲ. ಈ ಹಿಂದೆ 1 ರೂ. ಸಂಪಾದಿಸಿದರೆ, 25 ಪೈಸೆ ಉಳಿಯುತ್ತಿತ್ತು. ಆದರೆ ಇದೀಗ 25 ಪೈಸೆ ಸಂಗ್ರಹವಾಗುತ್ತಿದೆ. ಇದರಿಂದ 75 ಪೈಸೆ ನಷ್ಟವಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದ ನಷ್ಟಕ್ಕೆ ಗುರಿಯಾಗಿದ್ದೇವೆ ಎಂದರು.

Mysore Tourism gets affected due to corona virus affected-1

ವಿನಾಯಿತಿಗೆ ಮನವಿ: ಟ್ರಾವೆಲ್ ಪಾರ್ಕ್ ಸಂಸ್ಥೆಯಲ್ಲಿ 140 ವಾಹನಗಳಿದ್ದು, 175 ಸಿಬ್ಬಂದಿಗಳಿದ್ದಾರೆ. ಪ್ರವಾಸಿಗರಿಲ್ಲದ ಕಾರಣ ಹಲವು ವಾಹನಗಳು ನಿಂತಲ್ಲೇ ನಿಂತಿವೆ. ವಾಹನ ರಸ್ತೆಗಿಳಿಯದಿದ್ದರೂ ನಾವು ರಸ್ತೆ ತೆರಿಗೆ ಕಟ್ಟಬೇಕು. ಬ್ಯಾಂಕ್‍ಗಳಲ್ಲಿ ಸಾಲ ತೆಗೆದು ವಾಹನ ಖರೀದಿಸಿದ್ದೇವೆ. ಕಂತು ಕಟ್ಟಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಂತು ಕಟ್ಟಲು 2-3 ತಿಂಗಳು ನಮಗೆ ವಿನಾಯಿತಿ ನೀಡಬೇಕು. ಕಂತಿನ ಮೊತ್ತ ಕಟ್ಟದ ಕಾರಣ ಹೆಚ್ಚು ಬಡ್ಡಿ ವಿಧಿಸಬಾರದು, ವಾಹನ ಜಪ್ತಿ ಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿಗಳಾಗಲೀ ಅಥವಾ ಸಂಬಂಧಪಟ್ಟ ಸಚಿವರಾಗಲೀ ಟ್ರಾವೆಲ್ಸ್ ಅಸೋಸಿಯೇಷನ್ ಮುಖ್ಯಸ್ಥರೊಂದಿಗೆ ಚರ್ಚಿಸಿ, ನಮ್ಮ ಸಂಕಷ್ಟವನ್ನು ಆಲಿಸಿ, ಪರಿಹಾರ ಕಂಡುಹಿಡಿಯಬೇಕು ಎಂದು ಮನವಿ ಮಾಡಿದರು.

ದೊಡ್ಡ ಉದ್ಯಮಕ್ಕೆ ಭಾರೀ ಪೆಟ್ಟು: ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಮೈಸೂರು ಪ್ರವಾಸೋದ್ಯಮದ ಕೊಡುಗೆ ಅಪಾರ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಉದ್ಯಮ, ವಾಣಿಜ್ಯ ಮಳಿಗೆ, ಪ್ರವಾಸಿ ತಾಣ ಸೇರಿದಂತೆ ವಿವಿಧ ಮೂಲಗಳಿಂದ ದಿನಕ್ಕೆ 50 ಕೋಟಿ ರೂ. ಸಂಗ್ರಹ(ವಿವಿಧ ವಸ್ತುಗಳ ಮಾರಾಟ, ಪ್ರವೇಶ ಶುಲ್ಕ, ರಸ್ತೆ ತೆರಿಗೆ ಹಾಗೂ ಇತ್ಯಾದಿ)ವಾಗಲಿದೆ. ಇಂತಹ ದೊಡ್ಡ ಉದ್ಯಮ ಕೊರೊನಾ ವೈರಸ್‍ನಿಂದಾಗಿ ತತ್ತರಿಸಿದೆ. ಇದು ಮುಂದಿನ ಮೂರು ತಿಂಗಳವರೆಗೂ ಪ್ರಭಾವ ಬೀರಲಿದೆ. ಶೇ.80ರಷ್ಟು ನಷ್ಟವಾಗುತ್ತಿದೆ. ರಾಜಸ್ತಾನ, ಗೋವಾ, ಹೈದ್ರಾಬಾದ್, ಲೇಹ್, ಲಡಾಕ್, ಮಲೇಷಿಯಾ, ಜಪಾನ್, ಅಬುದಾಬಿ, ದುಬೈ, ಸಿಂಗಾಪುರ, ಥೈಲ್ಯಾಂಡ್, ಹಾಂಗ್‍ಕಾಂಗ್ ಸೇರಿದಂತೆ ವಿವಿಧೆಡೆಗೆ ಪ್ರವಾಸಕ್ಕೆ ತೆರಳಲು ಮುಂಗಡ ಬುಕ್ಕಿಂಗ್ ಮಾಡಿದ್ದವರು ಕೊರೊನಾ ಭಯಕ್ಕೆ ಪ್ರವಾಸ ರದ್ದು ಮಾಡಿದ್ದಾರೆ. ಸೇಫ್‍ವೀಲ್ಸ್ ಸಂಸ್ಥೆಯಲ್ಲಿ 120 ವಾಹನಗಳಿದ್ದು, 200 ಸಿಬ್ಬಂದಿಗಳಿದ್ದಾರೆ. ಪ್ರವಾಸಿಗರು ಮಾತ್ರವಲ್ಲದೆ, ಕಾರ್ಪೋರೇಟ್ ಸಂಸ್ಥೆಗಳ ಉದ್ಯೋಗಿಗಳಿಗೂ ವಾಹನ ಸೇವೆ ಒದಗಿಸಲಾಗುತ್ತಿತ್ತು. ಆದರೂ ಎಲ್ಲಾ ಟ್ರಾವೆಲ್ಸ್ ಸಂಸ್ಥೆಗಳು ನಷ್ಟದಿಂದ ತತ್ತರಿಸಿವೆ. ಇದರಿಂದಾಗಿ ವಾಹನಗಳ ಸಾಲದ ಕಂತು ಕಟ್ಟಲು ಕಾಲಾವಕಾಶ ನೀಡುವಂತೆ ಹಾಗೂ ರಸ್ತೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಏರ್ ಟಿಕೆಟ್‍ಗಳ ಬುಕ್ಕಿಂಗ್ ರದ್ದು: ಬಿಐಟಿ ಸಂಸ್ಥೆಯ ಮುಖ್ಯಸ್ಥ ಮಹೇಂದ್ರ ಸಾಲಿಯನ್ ಮಾತನಾಡಿ, ಬಿಐಟಿ ಸಂಸ್ಥೆ ಮೂಲಕ ಚೈನಾ, ಜಪಾನ್, ಅಮೇರಿಕಾ, ಸಿಂಗಾಪುರ, ಮಲೇಷಿಯಾ, ಯುರೋಪ್ ಸೇರಿದಂತೆ ವಿವಿಧ ದೇಶಕ್ಕೆ ಪ್ರವಾಸ ಕೈಗೊಳ್ಳಲು 400ಕ್ಕೂ ಹೆಚ್ಚು ಮಂದಿ ಏರ್‍ಟಿಕೆಟ್ ಬುಕ್ ಮಾಡಿದ್ದರು. ಕೊರೊನಾ ಬೆಳಕಿಗೆ ಬಂದ ಆರಂಭ ದಲ್ಲೇ ಚೀನಾ ಪ್ರವಾಸ ರದ್ದು ಮಾಡಿದರು. ಆದರೆ ಕಳೆದ 15 ದಿನದಿಂದ ಎಲ್ಲಾ ರಾಷ್ಟ್ರಗಳಿಗೂ ಜನರು ಪ್ರವಾಸ ಹೋಗಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಏರ್‍ಟಿಕೆಟ್ ಬುಕ್ ಮಾಡಿದ್ದನ್ನು ರದ್ದು ಮಾಡಿದ್ದಾರೆ. ನಮ್ಮ ಸಂಸ್ಥೆ ವತಿಯಿಂದಲೇ ವಿಮಾನ ನಿಲ್ದಾಣಕ್ಕೆ ಪಿಕ್ ಅಂಡ್ ಡ್ರಾಪ್ ಮಾಡಲು ನಮ್ಮ ಸಂಸ್ಥೆ ವಾಹನಗಳನ್ನೇ ಬುಕ್ ಮಾಡುತ್ತಿದ್ದರು. ಆದರೆ ಇದೀಗ ವಾಹನಗಳ ಬುಕ್ಕಿಂಗ್ ಕೂಡ ಸ್ಥಗಿತಗೊಂಡಿದೆ ಎಂದು ವಿಷಾದಿಸಿದರು.

ರಿಯಾಯಿತಿ ದರದಲ್ಲಿ ರೂಮ್ ಲಭ್ಯ: ರಜೆ ದಿನಗಳಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲು ರೂಮ್ ಸಿಗದೆ ಪರದಾಡುತ್ತಿದ್ದ ಕಾಲವಿತ್ತು. ಆದರೆ ಕೊರೊನಾ ಎಲ್ಲವನ್ನು ಬದಲಿಸಿದೆ. ಕರೆದು, ರಿಯಾಯಿತಿ ದರದಲ್ಲಿ ರೂಮ್ ನೀಡುವ ಸ್ಥಿತಿ ಹೋಟೆಲ್ ಉದ್ಯಮಕ್ಕೆ ಒದಗಿ ಬಂದಿದೆ. ಮೈಸೂರು ನಗರದಲ್ಲಿ ವಿವಿಧ ಬಗೆಯ ಲಾಡ್ಜ್‍ಗಳಲ್ಲಿ ವಿವಿಧ ಬಗೆಯ 9500 ರೂಮ್‍ಗಳಿವೆ. ಕಳೆದ ಒಂದು ವಾರದಿಂದ ರೂಮ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಸ್ಥಗಿತಗೊಂಡಿದೆ. ಶೇ.10ರಷ್ಟು ರೂಮ್ ಬುಕ್ ಆಗದಂತಹ ಸ್ಥಿತಿ ನಿರ್ಮಾಣ ವಾಗಿದೆ. ಈ ಕುರಿತಂತೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಕೊರೊನಾ ವೈರಸ್ ಭಯದಿಂದ ಹೋಟೆಲ್, ವಸತಿ ಗೃಹಗಳಿಗೂ ಪ್ರವಾಸಿ ಗರು ಬರದಂತೆ ಮಾಡಿದೆ. ಎಲ್ಲಾ ಲಾಡ್ಜ್‍ಗಳು ಖಾಲಿ ಹೊಡೆಯುತ್ತಿವೆ. ಬಂದ ಗ್ರಾಹಕರನ್ನು ಉಳಿಸಿಕೊಳ್ಳಲು ಶೇ.30ರಿಂದ 40ರಷ್ಟು ರಿಯಾಯಿತಿ ದರದಲ್ಲಿ ರೂಮ್ ನೀಡಲಾಗುತ್ತಿದೆ. ಹೋಟೆಲ್‍ಗಳಿಗೂ ಗ್ರಾಹಕರ ಕೊರತೆ ಎದುರಾಗಿದೆ ಎಂದರು

Translate »