ಕೊರೊನಾ ಸಂಬಂಧ ಸುಳ್ಳು ಸುದ್ದಿ: ಮೂವರ ವಿರುದ್ಧ ಪ್ರಕರಣ ದಾಖಲು ಇಬ್ಬರ ಬಂಧನ
ಚಾಮರಾಜನಗರ

ಕೊರೊನಾ ಸಂಬಂಧ ಸುಳ್ಳು ಸುದ್ದಿ: ಮೂವರ ವಿರುದ್ಧ ಪ್ರಕರಣ ದಾಖಲು ಇಬ್ಬರ ಬಂಧನ

April 13, 2020

ಚಾಮರಾಜನಗರ, ಏ.12(ಎಸ್‍ಎಸ್)- ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ಫೇಸ್‍ಬುಕ್ ಹಾಗೂ ವಾಟ್ಸ್‍ಪ್‍ನಲ್ಲಿ ಸುಳ್ಳು ಸುದ್ದಿ ಹರಡಿದ್ದ ಮೂವರ ವಿರುದ್ಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ವಿಜಯ ರುದ್ರೇಶ್, ಶಿಂಡನಪುರ ಗ್ರಾಮದ ಮಹದೇವಸ್ವಾಮಿ ಬಂಧಿತ ಆರೋಪಿಗಳು. ಪ್ರಕರಣದ ಮತ್ತೋರ್ವ ಆರೋಪಿ ಶಿಂಡನಪುರ ಚಂದ್ರು ನಾಪತ್ತೆಯಾಗಿದ್ದಾನೆ. ಚಾಮರಾಜನಗರದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆಯ ಉದ್ಯೋಗಿಯಿಂದ ಕೊರೊನಾ ಜಿಲ್ಲೆಯಲ್ಲಿ ಖಾತೆ ತೆರೆದಿದೆ ಎಂದು ಈ ಮೂವರು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಹಾಗೂ ವಾಟ್ಸ್‍ಪ್‍ಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ತೆರಕಣಾಂಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಜಯ ರುದ್ರೇಶ್, ಮಹದೇವಸ್ವಾಮಿ ಬಂಧಿಸಿದ್ದಾರೆ. ನಾಪತ್ತೆಯಾಗಿ ರುವ ಚಂದ್ರು ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಹಿಂದೆಯೂ ಕೊರೊನಾ ಸಂಬಂಧ ಗಾಳಿ ಸುದ್ದಿ ಹಬ್ಬಿಸಿದ್ದ ಇಬ್ಬರನ್ನು ಬಂಧಿಸಿದ್ದನ್ನು ಸ್ಮರಿಸಬಹುದಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕು ಕಂಡು ಬಂದಿಲ್ಲ. ಕೊರೊನಾದಂತಹ ಗಂಭೀರ ವಿಷಯದಲ್ಲಿ ತಮಾಷೆ, ದ್ವೇಷ ಮಾಡುವುದನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ ಎಂದು ಎಸ್ಪಿ ಹೆಚ್.ಡಿ.ಆನಂದ್ ಕುಮಾರ್ ಎಚ್ಚರಿಸಿದ್ದಾರೆ.

Translate »