ನಾಳೆ ಮೈಸೂರು ಮಹಾರಾಣಿ ವಾಣಿಜ್ಯ, ಮ್ಯಾನೇಜ್‍ಮೆಂಟ್ ಕಾಲೇಜಲ್ಲಿ ಮತ ಎಣಿಕೆ: ವಾಹನ ಸಂಚಾರ ನಿರ್ಬಂಧ
ಮೈಸೂರು

ನಾಳೆ ಮೈಸೂರು ಮಹಾರಾಣಿ ವಾಣಿಜ್ಯ, ಮ್ಯಾನೇಜ್‍ಮೆಂಟ್ ಕಾಲೇಜಲ್ಲಿ ಮತ ಎಣಿಕೆ: ವಾಹನ ಸಂಚಾರ ನಿರ್ಬಂಧ

May 12, 2023

ಮೈಸೂರು, ಮೇ 11(ಎಸ್‍ಬಿಡಿ)- ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾದ ವಾಲ್ಮೀಕಿ ರಸ್ತೆಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸುತ್ತ ಮುತ್ತಲ ರಸ್ತೆಗಳಲ್ಲಿ ಮೇ 13ರ ಬೆಳಗ್ಗೆ 5ರಿಂದ ಸಂಜೆ 5ರವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿದಂತೆ ಎಲ್ಲಾ ಮಾದರಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸುವುದರ ಜೊತೆಗೆ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ, ಪೊಲೀಸರು, ಅಭ್ಯರ್ಥಿಗಳು, ಏಜೆಂಟರು, ಮಾಧ್ಯಮದವರ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸ ಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ.

ಸಂಚಾರ ನಿರ್ಬಂಧ: ಕಲಾಮಂದಿರ ಜಂಕ್ಷನ್‍ನಿಂದ ಸೆಂಟ್‍ಜೋಸೆಫ್ ಜಂಕ್ಷನ್‍ವರೆಗೆ ಹುಣಸೂರು ರಸ್ತೆ, ಕೆಆರ್‍ಎಸ್ ರಸ್ತೆ ಜಂಕ್ಷನ್‍ನಿಂದ ಹುಣ ಸೂರು ರಸ್ತೆ ಜಂಕ್ಷನ್‍ವರೆಗೆ ವಾಲ್ಮೀಕಿ ರಸ್ತೆ ಹಾಗೂ ಮಾತೃ ಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆವರೆಗೆ ಆದಿಪಂಪ ರಸ್ತೆಯಲ್ಲಿ ಎಲ್ಲಾ ಮಾದರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕೆಎಸ್‍ಆರ್‍ಟಿಸಿ ಬಸ್ಸುಗಳು ಬದಲಿ ಮಾರ್ಗ: ಮೈಸೂರಿನಿಂದ ಹುಣಸೂರು ಕಡೆಗೆ ಸಂಚರಿಸುವ ಕೆಎಸ್‍ಆರ್‍ಟಿಸಿ ಬಸ್ಸುಗಳು ರಾಮಸ್ವಾಮಿ ವೃತ್ತ, ಮುಡಾ ಜಂಕ್ಷನ್(ಎಡಕ್ಕೆ ತಿರುವು) ಕೌಟಿಲ್ಯ ವೃತ್ತ, ಡಾ.ಪದ್ಮ ವೃತ್ತ, ವಿಎಂಡಿ ಜಂಕ್ಷನ್, ಬೋಗಾದಿ ರಸ್ತೆ, ರಿಂಗ್ ರಸ್ತೆ ಮೂಲಕ ಚಲಿಸಬೇಕು. ಹಾಗೆಯೇ ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಮೈಸೂರಿಗೆ ಬರುವ ಬಸ್ಸುಗಳು ಸೆಂಟ್ ಜೋಸೆಫ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗಿ ಟೆಂಪಲ್ ರಸ್ತೆ, ಕೆಆರ್‍ಎಸ್ ರಸ್ತೆ(ವಿವಿ ಪುರಂ ಸಿಗ್ನಲ್) ಜಂಕ್ಷನ್, ಆಕಾಶವಾಣಿ, ದಾಸಪ್ಪ ವೃತ್ತದ ಮೂಲಕ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಚರಿಸಬೇಕು.

ಇತರೆ ವಾಹನಗಳು: ಮೈಸೂರಿನಿಂದ ಹುಣಸೂರು ಕಡೆಗೆ ಹೋಗುವ ವಾಹನ ಗಳು ಮೆಟ್ರೋಪೋಲ್ ವೃತ್ತದಿಂದ ಡಿಸಿ ಕಚೇರಿ ಆರ್ಚ್‍ಗೇಟ್ ಜಂಕ್ಷನ್‍ನಲ್ಲಿ ಎಡ ತಿರುವು ಪಡೆದು ಕೃಷ್ಣಬುಲೇವಾರ್ಡ್ ರಸ್ತೆ, ಕೌಟಿಲ್ಯ ವೃತ್ತ, ವಿಎಂಡಿ ಜಂಕ್ಷನ್, ಬೋಗಾದಿ ರಸ್ತೆಯಲ್ಲಿ ಮುಂದೆ ಸಾಗಬೇಕು. ಹಾಗೆಯೇ ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರಿಗೆ ಆಗಮಿಸುವ ವಾಹನಗಳು ಸೆಂಟ್ ಜೋಸೆಫ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗಿ ಟೆಂಪಲ್ ರಸ್ತೆ, ಕೆಆರ್‍ಎಸ್ ರಸ್ತೆ ಜಂಕ್ಷನ್ ಮೂಲಕ ಮುಂದೆ ಸಾಗಬೇಕು.

ಪಾರ್ಕಿಂಗ್ ವ್ಯವಸ್ಥೆ: ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರು ಹಾಗೂ ಮಾಧ್ಯಮದವರು ದಾಸಪ್ಪ ವೃತ್ತ, ಕೆಆರ್‍ಎಸ್ ರಸ್ತೆಯ ವಿವೇಕಾನಂದ ಪ್ರತಿಮೆ ಜಂಕ್ಷನ್ ಬಳಿ ಎಡಕ್ಕೆ ತಿರುಗಿ, ರಾಮಮಂದಿರ, ವಾಲ್ಮೀಕಿ ರಸ್ತೆಯ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪ ಜಂಕ್ಷನ್‍ನಲ್ಲಿ ಬಲಕ್ಕೆ ತಿರುಗಿ ಆದಿಪಂಪ ರಸ್ತೆಯಲ್ಲಿ ತೆರಳಿ ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನ ಹಿಂಭಾಗದ ಮೈದಾನದಲ್ಲಿ ಕಾರುಗಳನ್ನು ಹಾಗೂ ಮಹಾರಾಣಿ ಕಾಲೇಜು ಹಾಸ್ಟೆಲ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬೇಕು. ಹುಣಸೂರು ರಸ್ತೆ ಮೂಲಕ ಆಗಮಿಸುವವರು ಸೆಂಟ್ ಜೋಸೆಫ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗಿ, ಟೆಂಪಲ್ ರಸ್ತೆ ಮಾತೃಮಂಡಳಿ ಜಂಕ್ಷನ್‍ನಲ್ಲಿ ಬಲಕ್ಕೆ ಸಾಗಿ ನಿಗದಿತ ಸ್ಥಳದಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕು. ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆ ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ ಪಡುವಾರಹಳ್ಳಿ ಬಸ ವೇಶ್ವರ ಛತ್ರದ ಮುಂಭಾಗದ ಮೈದಾನದಲ್ಲಿ ಹಾಗೂ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಲ್ಮೀಕಿ ಜಂಕ್ಷನ್ ಬಳಿಯಿರುವ ಜಮ್ಮಾ ಮಸೀದಿ ಮುಂಭಾಗದ ಖಾಲಿ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಬೇಕು.

ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳು: ಹೆಚ್ಚುವರಿಯಾಗಿ ವಿಲೇಜ್ ಹಾಸ್ಟೆಲ್ ಮೈದಾನ, ಗೌತಮ್ ಹಾಸ್ಟೆಲ್, ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ, ಮಹಾರಾಜ ಕಾಲೇಜು ಮೈದಾನ ಹಾಗೂ ಜೂನಿಯರ್ ಮಹಾರಾಜ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

Translate »