ಮೈಸೂರು, ಮೇ 11(ಆರ್‍ಕೆ)-ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ ಆರ್‍ಎಲ್)ದಲ್ಲಿ ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ (ನ್ಯಾಷನಲ್ ಟೆಕ್ನಾಲಜಿ ಡೇ) ಅಂಗವಾಗಿ ಇಂದು ಡಿಎಫ್‍ಆರ್‍ಎಲ್ ಆವರಣದಲ್ಲಿ ಮುಕ್ತ ದಿನ (ಔಠಿeಟಿ ಆಚಿಥಿ) ವನ್ನಾಗಿ ಆಚರಿಸಲಾಯಿತು. ನೂರಾರು ಮಂದಿ ವಿದ್ಯಾರ್ಥಿ ಗಳು ಆಗಮಿಸಿ ರಕ್ಷಣಾ ಆಹಾರ ಪದಾರ್ಥಗಳನ್ನು ವೀಕ್ಷಿಸಿದರು. ಸಸ್ಯಾಹಾರ ಮತ್ತು ಶಾಖಾಹಾರಿ ಪದಾರ್ಥಗಳನ್ನು ಇಸ್ರೋದ ಬೇಡಿಕೆಗನುಗುಣವಾಗಿ ಸ್ಪೇಸ್ ಮಿಷನ್‍ಗೆ ಪೂರೈಸುತ್ತಿದ್ದು, ಅದಕ್ಕಾಗಿ ಸಿದ್ಧಪಡಿಸಿರುವ ಆಹಾರ ಪದಾರ್ಥಗಳ ವಸ್ತು ಪ್ರದರ್ಶನವನ್ನು ಈ ಸಂದರ್ಭ ಏರ್ಪಡಿಸಲಾಗಿತ್ತು.
ಆಹಾರ ಸಂಸ್ಕರಣೆ ಮತ್ತು ಪ್ಯಾಕ್ ಮಾಡಲು ಲಭ್ಯವಿರುವ ನೂತನ ತಂತ್ರಜ್ಞಾನ ಬಳಸುತ್ತಿರುವ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಎಫ್‍ಆರ್‍ಎಲ್ ನಿರ್ದೇಶಕ ಡಾ. ಎ.ಡಿ. ಸೆಮ್ಮೋಲ್ ಅವರು, ನಮ್ಮ ಆಹಾರ ರುಚಿ ಹಾಗೂ ಗುಣಮಟ್ಟದ್ದಾಗಿದೆ ಎಂದು ಇಸ್ರೋ ಅಭಿಪ್ರಾಯಪಟ್ಟಿದೆ ಎಂದರು.
ಗಗನಯಾನಕ್ಕೆ ತಯಾರಿಸಿರುವ ಆಹಾರದ ಬಗ್ಗೆ ವಿವರಿಸಿದ ಡಿಎಫ್‍ಆರ್‍ಎಲ್ ವಿಜ್ಞಾನಿ ಡಾ. ದೇವಕುಮಾರ್, ಬಾಹ್ಯಾಕಾಶಕ್ಕಾಗಿ ತಯಾರಿಸುತ್ತಿರುವ ಆಹಾರದ ಬಗ್ಗೆ ಸಂಸ್ಥೆ ಅತ್ಯಂತ ಹೆಚ್ಚು ಗಮನ ಹರಿಸಿದೆ. ಅವುಗಳ ಪ್ಯಾಕಿಂಗ್ ವಿಷಯದಲ್ಲೂ ಹೆಚ್ಚು ಮುತುವರ್ಜಿ ವಹಿಸಲಾಗಿದೆ. ಚಪಾತಿ ರೋಲ್, ಸಾಂಬಾರ್, ಚವಾಲ್, ಪೊಟೆಟೋ ಪರೋಟ, ಚಿಕ್ಕಿ, ಕಾದಿ ಚವಾಲ್ ಮೂಂಗ್‍ದಾಲ್ಹಲ್ವ, ಕಾಸಿಯೋ, ಸೂಜಿ ಹಲ್ವ, ತರಕಾರಿ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಕನ್ ಪಲಾವ್‍ನಂತಹ ಆಹಾರಗಳನ್ನು ಪೂರೈಸಲಾಗುತ್ತಿದೆ ಎಂದರು.
ಮಿಲೆಟ್ ನಿಪ್ಪಟ್ಟು ಮಿಕ್ಸ್, ಮಿಲೆಟ್ ಆದ ಮಿಕ್ಸ್, ಮಿಲೆಟ್ ಸೀಮಿಕ್ಸ್, ಮಿಲೆಟ್ ರಾಗಿ ಮುದ್ದೆ ಮಿಕ್ಸ್, ಮಿಲೆಟ್ ಚಪಾತಿ ಮಿಕ್ಸ್, ಮಿಲೆಟ್ ಫ್ಲೇಕ್ಸ್, ಮಿಲೆಟ್ ಇಡ್ಲಿ ಮಿಕ್ಸ್, ಮಿಲೆಟ್ ದೋಸಾ ಮಿಕ್ಸ್, ಮಲ್ಟಿ ಮಿಲೆಟ್ ಚಿಕ್ಕಿ, ಸಿಹಿ ಮಿಲೆಟ್ ಮಿಕ್ಸಿ ಸೇರಿದಂತೆ ಹಲವು ಸಿದ್ಧ ಆಹಾರಗಳನ್ನು ಸಂಸ್ಥೆ ತಯಾರಿಸಿ ಸಂಸ್ಕರಿಸಿ ರಕ್ಷಣಾ ಪಡೆಗಳಿಗೆ ಪೂರೈಸುತ್ತಿದೆ.
ಇಂದು ಮುಕ್ತ ದಿನವಾಗಿದ್ದು, ವಸ್ತುಪ್ರದರ್ಶನ ದಲ್ಲಿ ಡಿಎಫ್‍ಆರ್‍ಎಲ್ ತಯಾರಿಸುವ ಇನ್ನಿತರ ಆಹಾರಗಳಾದ ಕಾಂಬೋ ಮೀಲ್ಸ್, ಚಿಕನ್ ಪಲಾವ್, ಚಿಕನ್ ಕರಿ, ರಜ್ಮಾ ಚವಾಲ್, ಮಿಲ್ಕ್ ಟೆಸ್ಟಿಂಗ್ ಕಿಟ್, ಬಯೋಡಿಗ್ರೇಡಬಲ್ ಕಟ್ಲರಿ ಹಾಗೂ ಹಲವು ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು.
ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಸಿಎಫ್‍ಟಿಆರ್‍ಐ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಯಲ್ಲೂ ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಿಸಲಾಯಿತು. ಎಕ್ಸೆಲ್‍ಸಾಫ್ಟ್ ಸಿಇಓ ಡಿ. ಸುಧನ್ವ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಿಎಫ್‍ಟಿಆರ್‍ಐ ನಿರ್ದೇಶಕರಾದ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಸ್ಥೆಯ ಟಿಟಿಬಿಡಿ ವಿಭಾಗದ ಮುಖ್ಯಸ್ಥ ಡಾ. ಬಿ.ವಿ. ಸತ್ಯನಾರಾಯಣರಾವ್ ಪಾಲ್ಗೊಂಡಿದ್ದರು.