ಇವಿಎಂಗಳಿರುವ ಸ್ಟ್ರಾಂಗ್ ರೂಂಗಳಿಗೆ ಭಾರೀ ಭದ್ರತೆ
ಮೈಸೂರು

ಇವಿಎಂಗಳಿರುವ ಸ್ಟ್ರಾಂಗ್ ರೂಂಗಳಿಗೆ ಭಾರೀ ಭದ್ರತೆ

May 12, 2023

ಮೈಸೂರು, ಮೇ 11(ಆರ್‍ಕೆ)-ಇವಿಎಂಗಳನ್ನಿರಿ ಸಿರುವ ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣಿ ಮಹಿಳಾ ಸರ್ಕಾರಿ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜು ಸ್ಟ್ರಾಂಗ್ ರೂಂಗೆ 3 ಹಂತದ ಭಾರೀ ಪೊಲೀಸ್ ಭದ್ರತೆ ಮಾಡಲಾಗಿದೆ.

ನಿನ್ನೆಯಷ್ಟೇ ಮತದಾನ ಮುಕ್ತಾಯಗೊಂಡಿದ್ದು, ರಾತ್ರಿಯೇ ಮೈಸೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ಮೈಸೂರಿನ ಮಹಾರಾಣಿ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಕಾಲೇಜು ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಲಾಗಿದೆ. ಸ್ಟ್ರಾಂಗ್ ರೂಂಗಳಿಗೆ ಪ್ರವೇಶ ದ್ವಾರದಲ್ಲಿ ಶಸ್ತ್ರ ಸಜ್ಜಿತ ಸಿಐಎಸ್‍ಎಫ್ ತುಕಡಿ, ಎರಡನೇ ಹಂತದಲ್ಲಿ ಸಿಎಆರ್ ತುಕಡಿ ಪೊಲೀಸರು ಹಾಗೂ ಮೂರನೇ ಸುತ್ತಿನಲ್ಲಿ ಸಿಟಿ ಸಿವಿಲ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸ ಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಬುಧವಾರ ರಾತ್ರಿ ಯಿಂದಲೇ ಸ್ಟ್ರಾಂಗ್ ರೂಂಗೆ 3 ಪಾಳಿಯಲ್ಲಿ ದಿನದ 24 ಗಂಟೆಯೂ ಬಂದೋಬಸ್ತ್ ಕರ್ತವ್ಯ ನಿರ್ವ ಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಕೆ.ಅಶ್ವತ್ಥನಾರಾಯಣ, ವಿಜಯನಗರ ಉಪ ವಿಭಾಗದ ಗಜೇಂದ್ರ ಪ್ರಸಾದ್ ಮತ್ತು ಕೆ.ಆರ್. ಉಪ ವಿಭಾಗದ ಎಸ್‍ಇ ಗಂಗಾಧರಸ್ವಾಮಿ ಅವರು ಭದ್ರತಾ ಕಾರ್ಯವನ್ನು ಮೇಲ್ವಿಚಾರಣೆ ಮಾಡು ವರು ಎಂದು ಅವರು ತಿಳಿಸಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜ್ ಅವರು ಆಗಿಂದಾಗ್ಗೆ ಸ್ಟ್ರಾಂಗ್ ರೂಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದು, ತಾವೂ ಪ್ರತೀ ದಿನ ಭೇಟಿ ನೀಡಿ ಭದ್ರತಾ ವ್ಯವಸ್ಥೆ ವೀಕ್ಷಿಸಿ ಸೂಕ್ತ ಮಾರ್ಗದರ್ಶನ ಮಾಡು ತ್ತಿದ್ದೇವೆ ಎಂದೂ ಪೊಲೀಸ್ ಆಯುಕ್ತರು ತಿಳಿಸಿದರು. ಮೇ 13ರಂದು ಮತ ಎಣಿಕೆ ದಿನ ಕೇಂದ್ರಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸುತ್ತ ಬ್ಯಾರಿಕೇಡ್ ಅಳವಡಿಸಿ ಜನರು ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು. ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಒಂದೇ ಕಡೆ ನಡೆಯುವುದರಿಂದ ಹೆಚ್ಚು ಮಂದಿ ಜನ ಜಮಾಯಿಸುವ ಕಾರಣ ನಿಯಂತ್ರಿಸಲು ಅಶ್ವಾರೋಹಿ ದಳದ ಸಿಬ್ಬಂದಿಗಳನ್ನೂ ಬಂದೋಬಸ್ತ್‍ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಇವಿಎಂಗಳಿರುವ ಸ್ಟ್ರಾಂಗ್ ರೂಂಗೆ ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ತೀವ್ರ ನಿಗಾ ವಹಿಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡೋರ್ ಡಿಟೆಕ್ಟರ್ ಹಾಕಿ ತಪಾಸಣೆ ಮಾಡುತ್ತಿದ್ದು, ನಿಯೋಜಿತ ಚುನಾವಣಾ ಸಿಬ್ಬಂದಿ, ಭದ್ರತಾ ಪೊಲೀಸರು, ಪಾಸ್ ಹೊಂದಿರುವವರನ್ನು ಹೊರತುಪಡಿಸಿ ಬೇರೆ ವ್ಯಕ್ತಿಗಳನ್ನು ಮತ ಎಣಿಕಾ ಕೇಂದ್ರಕ್ಕೆ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದ ಅವರು, ಇಡೀ ಮತ ಎಣಿಕಾ ಕೇಂದ್ರ ಸಿಐಎಸ್‍ಎಫ್ ವಶದಲ್ಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗಳೂ ಲಿಖಿತ ರೂಪದಲ್ಲಿ ಕಾರಣ ತಿಳಿಸಿ ಒಳಗೆ ಪ್ರವೇಶಿಸಬೇಕಾಗಿದೆ ಎಂದು ರಮೇಶ್ ತಿಳಿಸಿದರು.

Translate »