ಬುಕ್ ಮಾಡಿಕೊಳ್ಳುವ  ಜಾಯಮಾನ ನನ್ನದಲ್ಲ
ಮೈಸೂರು

ಬುಕ್ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ

May 12, 2023

ಮೈಸೂರು, ಮೇ 11(ಪಿಎಂ)-ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಬುಕ್ ಮಾಡಿಕೊಂಡಿ ದ್ದಾರೆ ಎಂಬ ತಮ್ಮ ಮೇಲಿನ ಆರೋಪವನ್ನು ಖಡಾಖಂಡಿತವಾಗಿ ನಿರಾಕರಿಸಿದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೂ ಆದ ಶಾಸಕ ಜಿ.ಟಿ.ದೇವೇಗೌಡ, ಬುಕ್ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಮೈಸೂರಿನ ವಿವಿ ಮೊಹಲ್ಲಾದ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಎಪಿಎಂಸಿ ಅಧ್ಯಕ್ಷ ಸ್ಥಾನ, ಡೈರಿ ಅಧ್ಯಕ್ಷ ಸ್ಥಾನ, ಎರಡು ಗೂಟದ ಕಾರು ಎಲ್ಲಾ ಅನುಭವಿಸಿ, ಮೋಸ ಮಾಡಿದರು. ಮೋಸಗಾರರಿಗೆ ಟಿಕೆಟ್ ಕೊಟ್ಟ ಹಿನ್ನೆಲೆಯಲ್ಲಿ ಅವರಿಗೂ ಮೋಸ ಮಾಡುತ್ತಿದ್ದಾರೆ. ನನ್ನ ಜೊತೆಯಲ್ಲಿದ್ದು ಬಿಟ್ಟು ಹೋದ ಸದರಿ ಅಭ್ಯರ್ಥಿ ಸೇರಿದಂತೆ ಆ ಐದು ಜನರನ್ನು ಈವರೆಗೆ ನಾನು ಮಾತನಾಡಿಸಿಲ್ಲ ಎಂದು ಹೇಳಿ ದರು. ಅವರು ಐದು ಜನ ಪಂಚ ಪಾಂಡವರು ಎಂದು ಹೋದರು. ನಾನೇಕೆ ಅವರನ್ನು (ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ) ಬುಕ್ ಮಾಡಿಕೊಳ್ಳಲಿ. ಅವನ ಸಾಮಥ್ರ್ಯ ನನಗೆ ಗೊತ್ತಿತ್ತು. ಆದ್ದರಿಂದಲೇ ನಾನು ನಿರಾಳವಾಗಿದ್ದೆ ಎಂದರು.

ಸಿದ್ದೇಗೌಡರಿಗೆ ಟಿಕೆಟ್ ಕೊಟ್ಟು ತಪ್ಪಾಯಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದೇಗೌಡ ಮೋಸಗಾರ ಎಂದು ಸಿದ್ದರಾಮಯ್ಯನವರಿಗೆ ನಾನು ಹೇಳಿದ್ದೆ. ಡೈರಿಯಲ್ಲಿ ಎಷ್ಟು ಮೋಸ ಮಾಡಿದ್ದ ಎಂದೂ ಹೇಳಿದ್ದೆ. ಆದರೆ ಅವರು ನಂಬದೇ ಟಿಕೆಟ್ ಕೊಟ್ಟರು. ಮೋಸ ಮಾಡುವವರು ಯಾರ ಬಳಿ ಹೋದರೂ ಮೋಸವೇ. ಅವರ ಪಕ್ಷದವರೇ ಬುಕ್ ಮಾಡಿಕೊಂಡಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ಇಷ್ಟು ಹಿರಿಯ ನಾಯಕರಾಗಿ ಚಾಮುಂಡೇಶ್ವರಿ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದಾರೆಯೇ? ಎಂಬುದಕ್ಕೆ ಪ್ರತಿಕ್ರಿಯಿಸಿ,
ನೂರಕ್ಕೆ ನೂರು ಎಡವಿದ್ದಾರೆ. ಅನುಮಾನವೇ ಇಲ್ಲ. ಸಿದ್ದರಾಮಯ್ಯನವರಿಗೆ ಈ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ಗೊತ್ತಾಗಿಲ್ಲ. ತಾಪಂನಲ್ಲಿ ಅಪ್ಪ-ಮಗ ಸೋತಿದ್ದಾರೆ. ಅಲ್ಲದೆ, ಡೈರಿ ಮತ್ತು ಎಪಿಎಂಸಿಯಲ್ಲಿ ಸೋತವರನ್ನು ರಾಷ್ಟ್ರೀಯ ಪಕ್ಷಕ್ಕೆ ಕರೆತಂದ 15 ದಿನದಲ್ಲಿ ಅಭ್ಯರ್ಥಿ ಮಾಡಿದರು ಸಿದ್ದರಾಮಯ್ಯ. ಅವರಿಗೆ ಚಾಮುಂಡೇಶ್ವರಿ ಕ್ಷೇತ್ರ ಗೊತ್ತಾ? ಗೊತ್ತಿದ್ದರೆ ನಿಲ್ಲಿಸುತ್ತಿದ್ದರೆ ಎಂದು ಪ್ರಶ್ನಿಸಿದರು.

ಮಾವಿನಹಳ್ಳಿ ಸಿದ್ದೇಗೌಡರಿಗೆ ಯಾವ ಓಟು ಇದೆ ಎಂದು ನಾನು ಬುಕ್ ಮಾಡಲಿ. ಅವನ ಊರಲ್ಲೇ ಓಟಿಲ್ಲ. ನನ್ನ ಜೊತೆ 10 ವರ್ಷಗಳಿಂದ ಇದ್ದ ಈ ಪಂಚ ಪಾಂಡವರು ಜಿ.ಟಿ.ದೇವೇಗೌಡರನ್ನು ನಾವೇ ಗೆಲ್ಲಿಸಿದ್ದು ಎನ್ನುತ್ತಿದ್ದರು ಎಂದು ಕಿಡಿಕಾರಿದರು.

ಪ್ರಸ್ತುತದ ಚಾಮುಂಡೇಶ್ವರಿ ಕ್ಷೇತ್ರದ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ನಾನು ಒಂದು ಹಳ್ಳಿಗೂ ಪ್ರಚಾರಕ್ಕೆ ಹೋಗಿರಲಿಲ್ಲ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧವಾಗಿ ನಾನು ಪ್ರಚಾರ ಮಾಡಲಿಲ್ಲ. ಮಾಡಿದ್ದರೆ ಸೋಲುತ್ತಿದ್ದರು ಎಂದು ತಿಳಿಸಿದರು.
ತಮ್ಮ ಪರವಾಗಿ ದುಡಿದ ಬಗ್ಗೆ ಒಮ್ಮೆ ಹೇಳಿಲ್ಲ: ನನ್ನ ಮಗನನ್ನು ನಿಲ್ಲಿಸುತ್ತಿದ್ದೆ ಎಂದು ಸಿದ್ದರಾಮಯ್ಯ ನಿನ್ನೆ ಹೇಳುತ್ತಾರೆ. ಮರೀಗೌಡ, ಸತ್ಯಪ್ಪನ ಮಗ, ಕೃಷ್ಣಕುಮಾರ್ ಇರಲಿಲ್ಲವೇ? ಅವರನ್ನಾದರೂ ನಿಲ್ಲಿಸಿದ್ದರೆ ಗೌರವಯುತವಾಗಿಯಾದರೂ ಸೋಲುತ್ತಿದ್ದರು. ಆದರೆ ಇಂತಹವರನ್ನು ಆಯ್ಕೆ ಮಾಡಿದ್ದು ಸಿದ್ದರಾಮಯ್ಯನವರೇ. ಅವರಿಗಾಗಿ ನಾನು 25 ವರ್ಷ ದುಡಿದಿದ್ದೇನೆ. ಅದನ್ನೇ ಅವರು ಒಂದು ದಿನ ಹೇಳಿಕೊಂಡಿಲ್ಲ. ನಾವೆಲ್ಲಾ ಸೇರಿ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಸಹಾಯ ಮಾಡಿದೆವು. ಅವರು ಗೆದ್ದ ಮೇಲೆ 1987ರಲ್ಲಿ ಜಿಲ್ಲಾ ಪರಿಷತ್‍ನಲ್ಲಿ ನಾನು ಸ್ಪರ್ಧಿಸಿದಾಗ ಸಹಕಾರ ನೀಡಿದರು. 20 ವರ್ಷ ಕಾಲ ಪರಸ್ಪರ ಸಹಕಾರದಲ್ಲಿದ್ದೆವು ಎಂದು ಹೇಳಿದರು. ಚಾಮುಂಡೇಶ್ವರಿ ಆಶೀರ್ವಾದದಿಂದ ನಾನು ಪ್ರಚಾರಕ್ಕೆ ಹೋದಂತಹ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಪೂರ್ಣಕುಂಭದೊಂದಿಗೆ ಜನ ಸ್ವಾಗತ ಮಾಡಿದರು. ಈ ಬಾರಿ ಚುನಾವಣೆಯಲ್ಲಿ ಜನರು ಭಾರೀ ಉತ್ಸಾಹದಿಂದ ಜಿ.ಟಿ.ದೇವೇಗೌಡರನ್ನು ಗೆಲ್ಲಿಸಬೇಕೆಂದು ಸಜ್ಜಾಗಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Translate »