ನಾನು ಬುಕ್ ಆಗಿಲ್ಲ, ಮೂಲ  ಕಾಂಗ್ರೆಸ್‍ನ ಕೆಲವರ ಅಪಪ್ರಚಾರವಷ್ಟೇ; ಉಪ್ಪು ಮುಟ್ಟಿ ಪ್ರಮಾಣ
ಮೈಸೂರು

ನಾನು ಬುಕ್ ಆಗಿಲ್ಲ, ಮೂಲ ಕಾಂಗ್ರೆಸ್‍ನ ಕೆಲವರ ಅಪಪ್ರಚಾರವಷ್ಟೇ; ಉಪ್ಪು ಮುಟ್ಟಿ ಪ್ರಮಾಣ

May 12, 2023

ಮೈಸೂರು,ಮೇ 11(ಪಿಎಂ)-ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಟಸ್ಥವಾಗಿದ್ದರು ಎಂದು ಮೂಲ ಕಾಂಗ್ರೆಸ್‍ನ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ನಾನು ಆ ರೀತಿಯಲ್ಲಿ ಬುಕ್ ಆಗಿಲ್ಲ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಉಪ್ಪು ಮುಟ್ಟಿ ಪ್ರಮಾಣ ಮಾಡಿದರು. ಮೈಸೂರಿನ ರಾಮಕೃಷ್ಣನಗರದಲ್ಲಿ ರುವ ತಮ್ಮ ನಿವಾಸದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಣ್ಣ ತಮ್ಮಂದಿರು ನಾಲ್ಕು ಮಂದಿಯೂ ಜಿ.ಟಿ.ದೇವೇಗೌಡರ ಬಳಿ ಬುಕ್ ಆಗಿದ್ದೇವೆ ಎಂದು ಅಪಪ್ರಚಾರ ಮಾಡಿದ್ದು, ಇದು ಸತ್ಯಕ್ಕೆ ದೂರ. ನಮ್ಮ ನಾಲ್ಕು ಮಂದಿಯ ಪರವಾಗಿ ನಾನಿಲ್ಲಿ ಉಪ್ಪು ಮುಟ್ಟಿ ಸತ್ಯ ಮಾಡುತ್ತಿದ್ದೇನೆ ಎಂದರು. ಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾದರೆ ಅದಕ್ಕೆ ಮೊದಲನೇ ಕಾರಣ ಕೆ.ಮರೀಗೌಡ. ಇವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಂದೊಂದು ಗ್ರಾಮದಲ್ಲಿ ಮೂರು ಓಳು ಮಾಡಿಟ್ಟಿದ್ದಾರೆ. ಕಾಂಗ್ರೆಸ್ಸಿಗರು ಓಟು ಯಾರಿಗೆ ಮಾಡಬೇಕೆಂದು ಮರೀಗೌಡರಲ್ಲಿ ಕೇಳಿದಾಗ, ನಿಮ್ಮಿಷ್ಟ ಎಂದು ಹೇಳಿ ಕಳುಹಿಸಿದ್ದಾರೆ ಎಂದು ದೂರಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕುಲಗೆಟ್ಟಿದ್ದರೆ ಅದಕ್ಕೆ ಮೊದಲನೇ ಸೂತ್ರಧಾರಿ ಮರೀಗೌಡ. ಇವರು ನನ್ನ ವಿರುದ್ಧ ಬುಕ್ ಆಗಿದ್ದಾರೆಂದು ಅಪಪ್ರಚಾರ ಮಾಡಿದ್ದಾರೆ. ಯಾವತ್ತು ಜಿ.ಟಿ. ದೇವೇಗೌಡರಿಂದ ದೂರ ವಾದೆನೋ ಅಂದಿನಿಂದ ಅವರ ಮನೆ ಬಾಗಿಲಿಗೆ ಹೋಗಿಲ್ಲ.

ಮೂಲ ಕಾಂಗ್ರೆಸ್ಸಿಗರಲ್ಲಿ ನನಗೆ ಬೆಂಬಲವಾಗಿ ನಿಂತವರಲ್ಲಿ ಪ್ರಮುಖರು ರಾಕೇಶ್ ಪಾಪಣ್ಣ. ಇವರಲ್ಲದೆ, ಹಲವರು ಕಾಂಗ್ರೆಸ್ ಮುಖಂಡರು ಬೆಂಬಲವಾಗಿ ನಿಂತರು ಎಂದು ಕೆಲವರ ಹೆಸರು ಹೇಳಿದರು. ಸಿದ್ದರಾಮಯ್ಯ ಸಾಹೇಬರಿಗೆ ವಾಸ್ತವಾಂಶ ಗೊತ್ತಿಲ್ಲ. ಮರೀಗೌಡ, ಉದ್ಬೂರು ಕೃಷ್ಣ, ಕೋಟೆಹುಂಡಿ ಮಹದೇವ್, ಕೋಟೆಹುಂಡಿ ಗೋಪಾಲ್, ರಮ್ಮನಹಳ್ಳಿಯ ಪೈಲ್ವಾನ್ ಶಿವು ಸೇರಿದಂತೆ ಹಲವರು ಸಿದ್ದರಾಮಯ್ಯ ರಲ್ಲಿ ನನ್ನ ಬಗ್ಗೆ ಚಾಡಿ ಹೇಳಿದ್ದಾರೆ. ಆಗ ಸಿದ್ದರಾಮಯ್ಯನವರಿಗೆ ಬೇಸರವಾಗಿ ನನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರಬಹುದು. ಸಿದ್ದರಾಮಯ್ಯನವರೊಂದಿಗೆ ಮಾತನಾಡಲು ನನಗೆ ಸಮಯ ಆಗಿಲ್ಲ. ಮತ ಎಣಿಕೆ ಆದ ಬಳಿಕ ಭೇಟಿ ಮಾಡುತ್ತೇನೆ ಎಂದರು. ಕಾಂಗ್ರೆಸ್‍ನಿಂದ ಶ್ರೀರಾಂಪುರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನ ಪಡೆದ ಕೋಟೆಹುಂಡಿ ಗೋಪಾಲ್, ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್‍ಗೆ ಓಟ್ ಮಾಡಿದ. ಈತ ನನ್ನ ವಿರುದ್ಧ ನಿನ್ನೆ ಚಾಡಿ ಹೇಳಿದ್ದಾನೆ. ರಮ್ಮನಹಳ್ಳಿಯಲ್ಲಿ ಪೈಲ್ವಾನ್ ಶಿವು ಎಲ್ಲಾ ಉಪಯೋಗ ನಮ್ಮಿಂದ ಪಡೆದು, ನಿನ್ನೆ ನಾನು ರಮ್ಮನಹಳ್ಳಿಗೆ ಹೋದಾಗ, ಬಿಜೆಪಿಯವರು ಕೊಟ್ಟ ಹಣ ಹಂಚಿಕೆ ಮಾಡುತ್ತಿದ್ದ. ಈತನೂ ನಿನ್ನೆ ಸಿದ್ದರಾಮಯ್ಯರಲ್ಲಿ ನನ್ನ ವಿರುದ್ಧ ದೂರು ಹೇಳಿದ್ದಾನೆ ಎಂದು ಕಿಡಿಕಾರಿದರು.

ನಾನು ಭಾರೀ ಮತಗಳ ಅಂತರದಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ 1ರಿಂದ 2 ಸಾವಿರ ಮತಗಳ ಅಂತರದ ಗೆಲುವನ್ನು ಕ್ಷೇತ್ರದ ಜನತೆ ನೀಡಲಿದ್ದಾರೆ. ಮೂಲ ಕಾಂಗ್ರೆಸ್‍ನ ಕೆಲವರ ಚಾಡಿ ಮಾತುಗಳಿಗೆ ಸಿದ್ದರಾಮಯ್ಯನವರು ಮನ್ನಣೆ ನೀಡಬಾರದು. ಅವರನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸತ್ಯಾಸತ್ಯತೆ ಪರಿಶೀಲಿಸಿ ಅವರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಮೇ 9ರಂದು ಏನೂ ಒಂದು ಸ್ವಲ್ಪ ಎಡವಟ್ಟು ಆಯಿತು. ಯಾರನ್ನೋ ನಂಬಿದ್ದೆವು. ಅವರು ಕೈಗೆ ಸಿಗಲಿಲ್ಲ. ನಾವು ನಾಲ್ಕು ಮಂದಿ ಅಣ್ಣತಮ್ಮಂದಿರು ಮನೆಯಲ್ಲೇ ಇದ್ದು ಸಮಸ್ಯೆ ಬಗೆಹರಿಸುವಲ್ಲಿ ನಿರತರಾಗಿದ್ದೆವು. ಆದರೆ ಅಂದು ಇಡೀ ಕ್ಷೇತ್ರದಲ್ಲಿ ನನ್ನ ವಿರುದ್ಧ 500ರಿಂದ 600 ಮಂದಿಯಿಂದ ಅಪಪ್ರಚಾರ ಮಾಡಿಸಲಾಯಿತು. ಜೆಡಿಎಸ್ ಕಾರ್ಯಕರ್ತರಿಗೆ ಸಿಕ್ಕಿದ್ದೇ ಸಾಕಾಯಿತು. ಅವರೂ ಅಪಪ್ರಚಾರದಲ್ಲಿ ತೊಡಗಿದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಿದ್ದರಾಮಯ್ಯವರು ಒಂದು ಅವಕಾಶ ಮಾಡಿಕೊಟ್ಟರು. ಕಾಂಗ್ರೆಸ್ ಬಿಟ್ಟು ಹೋಗಲ್ಲ. ಗೆದ್ದರು, ಸೋತರೂ ಕಾಂಗ್ರೆಸ್‍ನಲ್ಲೇ ಇರುತ್ತೇನೆ ಎಂದು ಹೇಳಿದರು.

Translate »