ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಮಾಹಿತಿ: ಜೆಡಿಎಸ್ ದೋಸ್ತಿಗೆ ಬಿಜೆಪಿ ತರಾತುರಿ
News

ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಮಾಹಿತಿ: ಜೆಡಿಎಸ್ ದೋಸ್ತಿಗೆ ಬಿಜೆಪಿ ತರಾತುರಿ

May 12, 2023

ಬೆಂಗಳೂರು, ಮೇ 11(ಕೆಎಂಶಿ)-ಕರ್ನಾಟಕ ವಿಧಾನಸಭೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹು ದೆಂಬ ಮಾಹಿತಿ ಅರಿತ ಬಿಜೆಪಿ ವರಿಷ್ಠರು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿ ಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.

ಇದರ ಭಾಗವಾಗಿ ಜೆಡಿಎಸ್‍ನ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದಿಢೀರನೆ ಸಿಂಗಾಪೂರಕ್ಕೆ ತೆರಳಿದ್ದಾರೆ. ಅಲ್ಲಿಯೇ ಕುಮಾರಸ್ವಾಮಿ ಅವರನ್ನು ಕೇಂದ್ರದ ಹಿರಿಯ ಸಚಿವರೊಬ್ಬರು ಇಂದು ಭೇಟಿಯಾಗಿ ಮೈತ್ರಿ ಸರ್ಕಾರ ರಚನೆ ಕುರಿತಂತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಉಭಯ ನಾಯಕರು ನಾಳೆ ರಾತ್ರಿಯವರೆಗೂ ಅಲ್ಲಿಯೇ ತಂಗಲಿದ್ದು, ಮತ ಎಣಿಕೆ ದಿನವಾದ ಶನಿವಾರದಂದು ಸ್ವದೇಶಕ್ಕೆ ಹಿಂತಿರುಗಲಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆ, ಮತಗಟ್ಟೆ ಸಮೀಕ್ಷೆ ಹಾಗೂ ಕೇಂದ್ರ ಗುಪ್ತಚರ ವರದಿ ಆಧಾರದ ಮೇಲೆ ರಾಜ್ಯದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂಬ ಅಭಿಪ್ರಾಯ ಬಿಜೆಪಿ ವರಿಷ್ಠರಿಗಿದೆ.

ಕಾಂಗ್ರೆಸ್ ಉಳಿದ ಪಕ್ಷಗಳಿಗಿಂತ ಅಧಿಕ ಸ್ಥಾನ ಗಳಿಸಲಿದೆ. ಆದರೆ ಅಧಿಕಾರ ಹಿಡಿಯು ವಷ್ಟು ಬಹುಮತ ಬರುವುದಿಲ್ಲ ಎಂಬ ಮಾಹಿತಿಯು ದೆಹಲಿ ವರಿಷ್ಠರಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರ ಹಿಡಿಯಬಾರದು. ಅವರಿಗೆ ಅಧಿಕಾರ ನೀಡಿದರೆ, ಮುಂದಿನ ಲೋಕ ಸಭಾ ಚುನಾವಣೆಗೆ ಇದೇ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಭಯ ಬಿಜೆಪಿ ನಾಯಕರನ್ನು ಕಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಬಿಜೆಪಿ ಮುಂದಾಗಿದೆ.

ಚುನಾವಣಾ ಮತಗಟ್ಟೆ ಸಮೀಕ್ಷೆ ಪ್ರಕಟವಾಗುವುದಕ್ಕೂ ಮುನ್ನವೇ ಕೇಂದ್ರಕ್ಕೆ ಇಲ್ಲಿಯ ಪೂರ್ಣ ಮಾಹಿತಿ ಲಭ್ಯವಿದ್ದು, ಇದನ್ನರಿತ ನಾಯಕರು ಕುಮಾರಸ್ವಾಮಿಗೆ ಆಪ್ತರಿರುವ ಕೇಂದ್ರ ಸಚಿವರನ್ನು ಚರ್ಚೆಗೆ ಬಿಟ್ಟಿದ್ದಾರೆ. ಕೇಂದ್ರ ಸಚಿವರು ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ವಾಸ್ತವಾಂಶ ತಿಳಿಸಿ, ಪೂರ್ವ ಸಿದ್ಧತೆ ಮಾಡಿಕೊಳ್ಳಲು ಚರ್ಚೆಗೆ ಆಹ್ವಾನಿಸಿದ್ದಾರೆ. ದೆಹಲಿ ಸೇರಿದಂತೆ ರಾಷ್ಟ್ರದ ಯಾವುದೇ ಭಾಗದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಮಾತುಕತೆ ನಡೆಸಿದರೆ, ತಪ್ಪು ಸಂದೇಶ ರವಾನೆ ಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸಿಂಗಾಪೂರವನ್ನು ಆಯ್ಕೆ ಮಾಡಿ ಕೊಳ್ಳಲಾಗಿದೆ ಎನ್ನಲಾಗಿದೆ. ಕುಮಾರ ಸ್ವಾಮಿ ಅವರು ಇತ್ತಕಡೆಯಿಂದ ವಿದೇಶಕ್ಕೆ ತೆರಳುತ್ತಿದ್ದಂತೆ ದೆಹಲಿಯಿಂದ ಕೇಂದ್ರ ಸಚಿವರು ಕುಮಾರಸ್ವಾಮಿ ಅವರು ತಂಗಿರುವ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಕಳೆದ 2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಮೊದಲ ಬಾರಿಗೆ ಸರ್ಕಾರ ರಚನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದು ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಇನ್ನೊಂದೆಡೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಹರಸಾಹಸ ನಡೆಸಿದೆ. ತಮಗೆ 120ರಿಂದ 130 ಸ್ಥಾನಗಳು ಲಭ್ಯವಾಗಲಿವೆ ಎಂಬ ಲೆಕ್ಕಾಚಾರದಲ್ಲಿ ಆ ಪಕ್ಷದ ನಾಯಕರು ಒಂದು ವೇಳೆ ಕೊರತೆಯಾದಲ್ಲಿ ಜೆಡಿಎಸ್ ಸಹಕಾರ ಪಡೆಯಲು ಚಿಂತನೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಪಕ್ಷ ಮೇಲುಗೈ ಸಾಧಿಸಲಿದೆÉ ಎಂಬ ಮಾಹಿತಿ ಬರುತ್ತಿದ್ದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಹೊಣೆ ಹೊತ್ತ ರಣದೀಪ್‍ಸಿಂಗ್ ಸುರ್ಜೇವಾಲ, ರಾಜ್ಯಕ್ಕೆ ದಿಢೀರನೆ ಆಗಮಿಸಿ, ಇಲ್ಲಿನ ಮುಖಂಡರೊಟ್ಟಿಗೆ ನಿರಂತರ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಗರಕ್ಕೆ ಬರುತ್ತಿದ್ದಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ ಸುರ್ಜೇವಾಲ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮುಖಾಮುಖಿ ಚರ್ಚೆ ನಡೆಸಿದರು. ಆನಂತರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರನ್ನು ಕರೆಸಿಕೊಂಡು ಸಮಾಲೋಚನೆ ಮಾಡಿದರು. ಇದಕ್ಕೂ ಮುನ್ನ ಶಿವಕುಮಾರ್ ತಮ್ಮ ತೋಟದ ಮನೆಯಲ್ಲೇ ಕುಳಿತು, ಅಧಿಕಾರ ಹಿಡಿಯಲು ರಾಜಕೀಯ ಲೆಕ್ಕಾಚಾರ, ತಮ್ಮ ಸಹೋದರ ಸುರೇಶ್ ಜೊತೆಗೂಡಿ, ಕೆಲವರನ್ನು ಸಂಪರ್ಕಿಸಿ, ಸಮಾಲೋಚನೆ ಮಾಡಿದರು.

ಅಷ್ಟೇ ಅಲ್ಲ, ಪಕ್ಷೇತರರಾಗಿ ವಿಧಾನಸಭೆಗೆ ಆರು ಮಂದಿ ಆಯ್ಕೆಗೊಳ್ಳಬಹುದೆಂಬ ವರದಿಯ ಹಿನ್ನೆಲೆಯಲ್ಲಿ ಅವರನ್ನೂ ಸಂಪರ್ಕಿಸಿ ಬೆಂಬಲ ಕೋರಿದ್ದಾರೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಕ್ಷೇತರರು ವಿಧಾನಸಭೆಗೆ ಆಯ್ಕೆಗೊಂಡರೆ ಅಂತಹವರನ್ನು ತಕ್ಷಣವೇ ಬೆಂಗಳೂರಿಗೆ ಕರೆತರಲು ನಾಲ್ಕು ಹೆಲಿಕ್ಯಾಪ್ಟರ್‍ಗಳನ್ನು ಸಿದ್ಧಪಡಿಸಿದ್ದು, ಇದಕ್ಕಾಗಿ ಒಂದು ತಂಡವನ್ನೇ ರಚಿಸಿದ್ದಾರೆ.

Translate »