ಮೈಸೂರಿನ ಎನ್‍ಸಿಸಿ ಘಟಕದಲ್ಲಿ ದೇಶದ  ಪ್ರಥಮ ಮೈಕ್ರೋಲೈಟ್ ಸಿಮ್ಯುಲೇಟರ್ ಸೌಲಭ್ಯ
ಮೈಸೂರು

ಮೈಸೂರಿನ ಎನ್‍ಸಿಸಿ ಘಟಕದಲ್ಲಿ ದೇಶದ ಪ್ರಥಮ ಮೈಕ್ರೋಲೈಟ್ ಸಿಮ್ಯುಲೇಟರ್ ಸೌಲಭ್ಯ

September 15, 2021

ಮೈಸೂರು, ಸೆ. 14(ಆರ್‍ಕೆ)- ಮೈಸೂ ರಿನ ರಾಮಸ್ವಾಮಿ ಸರ್ಕಲ್‍ನಲ್ಲಿರುವ ‘3 ಕರ್ನಾಟಕ ಗಲ್ರ್ಸ್ ಬೆಟಾಲಿಯನ್ ಎನ್‍ಸಿಸಿ ಘಟಕ’ದಲ್ಲಿ ದೇಶದ ಮೊದಲ ಮೈಕ್ರೋಲೈಟ್ ಸಿಮ್ಯುಲೇಟರ್ ಸಾಧನ ವನ್ನು ಅಳವಡಿಸಲಾಗಿದೆ.

ಬೆಂಗಳೂರು ಮೂಲದ ಏರ್-ಎಕ್ಸ್ ಸಿಮ್ಯುಲೇಟರ್ ಲ್ಯಾಬ್ಸ್ ಕಂಪನಿಯು ಈ ಸಾಧನವನ್ನು ಅಳವಡಿಸಿದ್ದು, ಎನ್‍ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ತರುಣ್‍ಕುಮಾರ್ ಐಚ್ ಅವರು ಸೋಮ ವಾರ ಭೇಟಿ ನೀಡಿ, ಪರಿಶೀಲಿಸಿದರು.

ಅವರು, ಕರ್ನಾಟಕ-ಗೋವಾ ಎನ್‍ಸಿಸಿ ಡೈರೆಕ್ಟೊರೇಟ್‍ನ ಉಪ ಮಹಾನಿರ್ದೇಶಕ ಎನ್‍ಸಿಸಿ ಏರ್ ಕಮಾಂಡರ್ ಬಿ.ಎಸ್. ಕಣ್ವಾತ್‍ರೊಂದಿಗೆ ಎರಡು ದಿನಗಳ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಎನ್‍ಸಿಸಿ ಹೆಡ್‍ಕ್ವಾರ್ಟರ್ಸ್‍ನಿಂದ ಮೊದಲ ಬಾರಿ ಮೈಸೂರು ಘಟಕಕ್ಕೆ ಅತ್ಯಾಧುನಿಕ ಮೈಕ್ರೋಲೈಟ್ ಸಿಮ್ಯುಲೇಟರ್ ಒದಗಿಸ ಲಾಗಿದೆ. ಇದೇ ಮಾದರಿಯ 44 ಸಾಧನಗಳನ್ನು ದೇಶದ ಎಲ್ಲಾ ಏರ್ ಎನ್‍ಸಿಸಿ ಘಟಕಗಳಲ್ಲೂ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.

ಎನ್‍ಸಿಸಿ ಕೆಡೆಟ್‍ಗಳಿಗೆ ಏರ್‍ಕ್ರಾಫ್ಟ್‍ನಲ್ಲಿ ಹಾರಾಡುವ ಬಗ್ಗೆ ಈ ಸಿಮ್ಯುಲೇಟರ್‍ನಲ್ಲಿ ತರಬೇತಿ ನೀಡಲಾಗುವುದು. ರಿಯಲ್ ಟೈಮ್ ಹ್ಯಾಂಡ್ ಆನ್ ತರಬೇತಿ ಪಡೆ ಯಲು ಈ ಸಾಧನ ನೆರವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಗ್ರೂಪ್ ಕಮಾಂಡರ್ ಕರ್ನಲ್ ಆರ್.ಆರ್. ಮೆನನ್ ಮಾತನಾಡಿ, ಹಗಲು-ರಾತ್ರಿ ವೇಳೆ ಹಾಗೂ ಕೆಟ್ಟ ಹವಾಮಾನವಿದ್ದಾಗ ವಿಮಾನ ಹಾರಾಟ ಹೇಗೆಲ್ಲಾ ನಡೆಸಬೇಕಾಗುತ್ತದೆ ಎಂಬ ಅನುಭವವನ್ನು ಈ ಸಿಮ್ಯುಲೇಟ್ ಸಾಧನ ನಿರ್ವಹಿಸುವ ಮೂಲಕ ಪಡೆಯ ಬಹುದಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಮಹಾನಿರ್ದೇಶಕ ರಿಗೆ ಎನ್‍ಸಿಸಿ ಘಟಕದಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ 14 ಕರ್ನಾಟಕ ಬೆಟಾಲಿಯನ್‍ನ ಸೀನಿಯರ್ ಅಂಡರ್ ಆಫೀಸರ್ (ಎಸ್‍ಒಯು) ಆದ ಮಂಡ್ಯ ಪಿಇಎಸ್ ಕಾಲೇಜಿನ ಕೆ.ಎಂ.ಪೂರ್ವಿ ಗೌಡ, ಶಾರದಾ ವಿಲಾಸ ಕಾಲೇಜಿನ ಎನ್. ನಬೀಲ್ ಅಹಮದ್, ಎಸ್‍ಬಿ ಆರ್‍ಆರ್ ಮಹಾಜನ ಕಾಲೇಜಿನ ವಿವೇಕ್ ಶಿಂಧೆ, 3 ಕರ್ನಾಟಕ ಗಲ್ರ್ಸ್ ಬೆಟಾಲಿಯನ್‍ನ ಬೋಧಕಿ ಲಕ್ಷ್ಮಿದಾಸ್ ಅವರಿಗೆ ಮಹಾ ನಿರ್ದೇಶಕರ ಪದಕ ಪ್ರದಾನ ಮಾಡಲಾಯಿತು

Translate »